ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ; ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿಗಳು,ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0
106

ಧಾರವಾಡ : ಮೇ.13: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು, ನೌಕರರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು, ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಇಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾರ್ಯಗಳಿಗೆ ನೇಮಕವಾಗಿರುವ ವಿವಿಧ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾದರಿ ನೀತಿ ಸಂಹಿತೆ, ಕಾನೂನು ಮತ್ತು ಸುವ್ಯವಸ್ಥೆ, ಮಾನವ ಸಂಪನ್ಮೂಲ ಹಾಗೂ ದತ್ತಾಂಶಗಳ ನಿರ್ವಹಣೆ, ಐಟಿ ಮತ್ತು ತಂತ್ರಜ್ಞಾನ ಬಳಕೆ, ಸಾರಿಗೆ, ತರಬೇತಿಗಳು, ಚುನಾವಣಾ ಸಾಮಗ್ರಿಗಳು, ಚುನಾವಣಾ ಖರ್ಚು-ವೆಚ್ಚದ ನಿಗಾ, ಮತಪತ್ರಗಳ ತಯಾರಿಕೆ, ಮಾಧ್ಯಮ ಸಂಪರ್ಕ, ಸಹಾಯವಾಣಿ ನಿರ್ವಹಣೆ ಮತ್ತು ವರದಿಗಳ ರವಾನೆ, ಮತಗಟ್ಟೆ ಮತ್ತು ಮತ ಎಣಿಕೆ ಸಿಬ್ಬಂದಿಗಳ ಆಹಾರ ವ್ಯವಸ್ಥೆ, ಮತಗಟ್ಟೆಗಳು ಹಾಗೂ ಕೋವಿಡ್-19 ರ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗಾಗಿ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಕರ್ತವ್ಯ, ಜವಾಬ್ದಾರಿಗಳನ್ನು ತಿಳಿಸಲಾಗಿದೆ. ಅಧಿಕಾರಿಗಳು ತಮ್ಮ ಸಮಿತಿಗಳ ಮೂಲಕ ಸಮರ್ಥವಾಗಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಸಂದೇಹಗಳು ಬಂದರೆ ತಕ್ಷಣ ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಮಾರ್ಗದರ್ಶನ ಪಡೆಯಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಕರ್ತವ್ಯ ಪ್ರಾಮುಖ್ಯತೆ ಹೊಂದಿದೆ. ನಿರ್ಲಕ್ಷ್ಯ ತೋರುವ, ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ತೊರೆಯುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಯಾವುದೇ ಅಧಿಕಾರಿಗಳು, ನೌಕರರು ಈ ಅವಧಿಯಲ್ಲಿ ಶಾಸಕರು, ಸಚಿವರೊಂದಿಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಅಧಿಕೃತ ಸರ್ಕಾರಿ ವಾಹನಗಳು, ಭದ್ರತಾ ಪಡೆಯ ಪೈಲಟ್ ವಾಹನ, ಬೀಕನ್ ಲೈಟ್, ಸೈರನ್ ಬಳಸಬಾರದು. ತಮ್ಮ ಮನೆಗಳಿಂದ ಕಚೇರಿಗಳಿಗೆ ಬರಲು ಮತ್ತು ಹಿಂದಿರುಗಲು ಮಾತ್ರ ವಾಹನಗಳನ್ನು ಬಳಸಬಹುದು. ಸಂಚಾರಿ ವಿಚಕ್ಷಣಾ ದಳ, ವಿಡಿಯೋ ವೀಕ್ಷಣಾ ತಂಡಗಳನ್ನು ರಚಿಸಿ ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು. ಟಿ.ವಿ., ರೇಡಿಯೋ, ಕೇಬಲ್ ನೆಟ್‍ವರ್ಕ್, ಬಲ್ಕ್ ಎಸ್‍ಎಂಎಸ್, ಧ್ವನಿಸಂದೇಶ ಮತ್ತಿತರ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲು ಬಯಸುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ, ಡಿಸಿಪಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಚುನಾವಣಾ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here