ಉಚಿತ ಔಷಧಿ ನೀಡುವುದಾಗಿ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದು ಹಣ ಕೇಳಿದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ

0
135

ಬಳ್ಳಾರಿ, ಏ.12: ಸರ್ಕಾರದ ವತಿಯಿಂದ ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತದೆ ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರ ಹೆಸರು ಹೇಳಿಕೊಂಡು ಅಪರಿಚಿತ ವ್ಯಕ್ತಿಗಳು ಮನೆಗಳಿಗೆ ಭೇಟಿ ನೀಡಿ ಔಷಧಿಗಳಿಗಾಗಿ ಹಣ ಕೇಳಿದಲ್ಲಿ ತಕ್ಷಣವೇ ಹತ್ತಿರದ ಪೋಲೀಸ್ ಠಾಣೆ ಅಥವಾ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ಅವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಕ್ಷೇತ್ರ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನತೆಗೆ ಮುಟ್ಟಿಸುವ ಕಾರ್ಯಕ್ರಮಗಳು ಮತ್ತು ಜಾಗೃತಿ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದರೆ ಯಾರಿಂದಲೂ ಔಷಧಿಗಳನ್ನು ಒದಗಿಸಲು ಅಥವಾ ಬೇರೆ ಕಡೆಯಿಂದ ತರಿಸಿಕೊಡುವುದಾಗಿ ಹೇಳಿ ಹಣವನ್ನು ಪಡೆಯುವಂತಹ ಕಾರ್ಯವನ್ನು ಮಾಡುವುದಿಲ್ಲ. ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಮತ್ತು ಕೆಲವು ಔಷಧಿಗಳನ್ನು ನೇರನಿಗಾವಣೆಯ ಮೂಲಕ ರೋಗಿಗೆ ಸ್ಥಳದಲ್ಲಿಯೇ ನುಂಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಡಿ.7ರಂದು ನಗರದ ಕಾರ್ಕಲತೋಟದಲ್ಲಿ ಕ್ಷಯರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ 8179855688 ಮೊಬೈಲ್ ಸಂಖ್ಯೆಯಿಂದ ಕರೆಮಾಡಿ ಆರೋಗ್ಯ ಇಲಾಖೆಯಿಂದ ಕೊಡುತ್ತಿರುವ ಮಾತ್ರೆಗಳು ಬೇಡ ಬೆಂಗಳೂರಿನಿಂದ ಪ್ರತ್ಯೇಕ ಮಾತ್ರೆಗಳನ್ನು ತರಿಸಿಕೊಡುವುದಾಗಿ ಹೇಳಿ ರೂ.4900ಗಳನ್ನು ಪಡೆದು ವ್ಯಕ್ತಿಗೆ ಒಂದು ಮಾತ್ರೆಯನ್ನು ಸ್ಥಳದಲ್ಲಿಯೇ ನುಂಗಿಸಿ ಮಾತ್ರೆಗಳನ್ನು ತಂದುಕೊಡುವುದಾಗಿ ಹೇಳಿ ಹೊರಟುಹೋಗಿರುತ್ತಾರೆ.
ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು 8142448543 ದೂರವಾಣಿ ಸಂಖ್ಯೆಯಿಂದ ಸಂಪರ್ಕಿಸಿ ಬೇರೆ ರೀತಿಯ ಔಷಧಿ ನೀಡಿದರೆ ಬೇಗ ಗುಣವಾಗುವುದು ಎಂದು ನಂಬಿಸಿ ರೂ.1800ಗಳನ್ನು ಪಡೆದು ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಡಿ.8ರಂದು ಮುಂಡ್ರಿಗಿ ಬಡಾವಣೆಯಲ್ಲಿ 9963800411 ದೂರವಾಣಿ ಸಂಖ್ಯೆಯಿಂದ ಕರೆಮಾಡಿ ಶಕ್ತಿಯ ಮಾತ್ರೆಗಳನ್ನು ನೀಡಿದರೆ ಬೇಗ ಋತುಮತಿಯಾಗುತ್ತಾರೆ ಎಂದು ನಂಬಿಸಿ ಹೆಣ್ಣು ಮಗುವಿನ ಪಾಲಕರಿಂದ ರೂ.6500ಗಳನ್ನು ಪಡೆದು ಜೆಲ್ ರೂಪದ ಮಾತ್ರೆಗಳನ್ನು ನೀಡಿ ಪಲಾಯನ ಮಾಡರುತ್ತಾರೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯ ಹೆಸರು ಹೇಳಿಕೊಂಡು ಮನೆಗಳಿಗೆ ಆಗಮಿಸಿದಾಗ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೆ ಮಾಹಿತಿ ನೀಡಿ ಇಲ್ಲವೆ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಔಷಧಿಗಾಗಿ ದುಡ್ಡು ಕೊಡಬಾರದು. ಈ ನಿಟ್ಟಿನಲ್ಲಿ ಶುಕ್ರವಾರದಂದು ಜಿಲ್ಲಾ ಐಇಸಿ ತಂಡ ಹಾಗೂ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಬಡಾವಣೆಗಳಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here