“ನಾಣಿಕೆರಿ ಕುಸ್ತಿ: ಕರ್ನಾಟಕ ಮಲ್ಲರಿಗೆ ವೀರೊಚಿತ ಸೋಲು, ರಾಷ್ಟ್ರೀಯ ಕುಸ್ತಿ ಪಟುಗಳಾದ ರಿಂಕೂ ಸಿಂಗ್, ಓಂಕಾರ್ ಚಾಂಪಿಯನ್.

0
229

–ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

ಹಗರಿಬೊಮ್ಮನಹಳ್ಳಿ; ಜ,30
ರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳಾದ ಹರಿಯಾಣದ ರಿಂಕೂ ಸಿಂಗ್ ಹಾಗೂ ಪಂಜಾಬಿನ ರಾಕೇಶ್ ಕುಮಾರ, ಮಹಾರಾಷ್ಟ್ರದ ಓಂಕಾರ್ ಅಂತಿಮ ಪಂದ್ಯಗಳಲ್ಲಿ ಕರ್ನಾಟಕದ ಮಲ್ಲರನ್ನು ಸೋಲಿಸಿ “ನಾಣಿಕೆರಿ ಕುಸ್ತಿ” ಚಾಂಪಿಯನ್ ಗಳಾಗಿ ಹೊರಹೊಮ್ಮಿದರು. ಕರ್ನಾಟಕದ ಪೈಲ್ವಾನರಾದ ರಮೇಶ ಶಿಂಧೆ(ಜಮಖಂಡಿ) ಹಾಗೂ ಗಿರೀಶ್ (ಬಾಗೇವಾಡಿ), ಬಸವರಾಜ ಹುದಲಿ( ಗೋಕಾಕ್) ತೂಕದಲ್ಲಿ ಮತ್ತು ಅನುಭವದಲ್ಲಿ ಕಿರಿಯರಾಗಿದ್ರೂ, ಅಖಾಡದಲ್ಲಿ ಉತ್ತರ ಹಾಗೂ ಪಶ್ಚಿಮ ಭಾರತದ ಮಲ್ಲರ ಎದುರು ಅವರು ತೋರಿದ ಜಿದ್ದಾಜಿದ್ದಿ ಪೋಟಿ, ಕಲಿತನದ ಹೋರಾಟ ಸೋತರು, ಆಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಸ್ತಿ ಪ್ರೇಮಿಗಳಿಂದ ಭಾರೀ ಪ್ರಶಂಸೆಯನ್ನು ಗಿಟ್ಟಿಸಿ ಕೊಂಡರು.

ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿಯ 66ನೇ ವರ್ಷದ ರಥೋತ್ಸವದ ನಿಮಿತ್ತ ಗಂ.ಭೀ.ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ನಾಣಿಕೆರಿ ದೈವಸ್ಥರು ಜ,27 ಹಾಗು 28 ಎರಡು ದಿನಗಳ ಕಾಲ “ನಾಣಿಕೆರಿ ಬಯಲು ಕುಸ್ತಿ” ಪಂದ್ಯಾವಳಿಯನ್ನು ಆಯೋಜಿಸಿದ್ದರು.

ಮಹಾರಾಷ್ಟ್ರ ಕೇಸರಿ,ದಸರಾಕೇಸರಿ, ಹರಿಯಾಣ ಕೇಸರಿ, ಪಂಜಾಬ್ ಕೇಸರಿಯಂತಹ ಪ್ರತಿಷ್ಠಿತ ಕುಸ್ತಿಗಳಲ್ಲಿ ಆಡಿರುವಂತಹ ರಾಷ್ಟ್ರೀಯ ಮಟ್ಟದ ಪೈಲ್ವಾನರು, ರಾಜ್ಯಮಟ್ಟದಲ್ಲಿ ಹೆಸರು ಮಾಡಿದವರು, ಜಿಲ್ಲಾ ಮಟ್ಟದಲ್ಲಿ ಗೆದ್ದವರು ಸೇರಿದಂತೆ ಹಿರಿಯ ಮತ್ತು ಉದಯೋನ್ಮುಖ ಮುನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿಯೇ ಪೈಲ್ವಾನರ ದಂಡೇ ನಾಣಿಕೆರಿ ಕುಸ್ತಿಯಲ್ಲಿ ಮೇಳೈಸಿತ್ತು. ಸೆವಂತಿಗೆ, ಚೆಂಡುಹೂ, ಗುಲಾಬಿ ಸೇರಿದಂತೆ ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ಪಂದ್ಯಾವಳಿಗಾಗಿಯೇ ನಿರ್ಮಿಸಿದ್ದ ಬೃಹತ್ ಮಣ್ಣಿನ ಅಖಾಡ ನೋಡುಗರ ವಿಶೇಷ ಗಮನಸೆಳೆಯಿತು.

ಸೂರ್ಯ ತನ್ನ ತಾಪವನ್ನು ತಣ್ಣಾಗಿಸಿಕೊಳ್ಳುತ್ತಾ ಪಡವಣ ಮುಖಿಯಾಗುತ್ತಿದ್ದಂತೆಯೇ ಇತ್ತ ಗೆಲುವಿಗಾಗಿ ಪೈಲ್ವಾನರ ನಡುವಿನ ಸೆಣಸಾಟ ಮದಗಜಗಳ ಕಾದಾಟದ ಸ್ವರೂಪ ಪಡೆದುಕೊಂಡು ಆಪಾರ ಪ್ರಮಾಣದ ಸಂಖ್ಯೆಯಲ್ಲಿ ನೆರೆದಿದ್ದ ಕುಸ್ತಿ ಪ್ರೇಮಿಗಳ ಮೈನವಿರೇಳಿಸಿತು. ಅವರನ್ನು ರೋಚಕ ಘಟ್ಟದತ್ತ ಕೊಂಡೊಯ್ದು ನಿಲ್ಲಿಸಿತು.

ಆಖಾಡದಲ್ಲಿ ಎದುರಾಳಿಗಳನ್ನು ಮಣಿಸಲು ಮಲ್ಲರು ಹಾಕುತ್ತಿದ್ದ ಪಟ್ಟಿಗೆ, ಪ್ರತಿ ಪಟ್ಟು, ರೂಪಿಸುತ್ತಿದ್ದ ತಂತ್ರಕ್ಕೆ ಪ್ರತಿ ತಂತ್ರಗಳು ಕುಸ್ತಿ ಪ್ರೇಮಿಗಳನ್ನು ಮಂತ್ರಮುಗ್ದರನ್ನಾಗಿಸಿತು. ಕಣಿಗೆ ಹಬ್ಬವಾಗಿತ್ತು.ಪೈಪೋಟಿಯಲ್ಲಿ ಯಾರ ಕೈ ಮೇಲಾಗಬಹುದು ಎನ್ನುವುದನ್ನು ಕಣ್ಣುತುಂಬಿ ಕೊಳ್ಳಲು ಕೊನೆ ಕ್ಷಣದ ತನಕವು ಕಾತುರ ಹೆಚ್ಚುವಂತೆ ಮಾಡಿತು. ಇದರ ನಡುವೆ ಕೇಕೆ ಹಾಕಿ, ಶಿಳ್ಳೆ, ಚಪ್ಪಾಳೆಯ ಸದ್ದು ಇಡೀ ಕ್ರೀಡಾಂಗಣದಲ್ಲಿ ಮಾರ್ದನಿಸಿ, ಪೈಲ್ವಾನರಿಗೆ ಕಾದಾಡಲು ಮತ್ತಷ್ಟು ಹುರುಪು ತುಂಬಿತು.

ಹಗರಿಬೊಮ್ಮನಹಳ್ಳಿ ಪಟ್ಟಣದ ನಾಣಿಕೆರಿ ಕುಸ್ತಿಯ ಇತಿಹಾಸದಲ್ಲಿಯೇ ಮೊಟ್ಟ, ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಮತ್ತು ರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿರುವಂತಹ ಮಲ್ಲರು ಭಾಗವಹಿಸಿದ್ದರಿಂದ ಎರಡು ದಿನಗಳ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಅವಳಿ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ ಮತ್ತು ಪಕ್ಕದ ಕೊಪ್ಪಳ, ದಾವಣಗೆರೆ, ಹಾವೇರಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿಯೇ ಕುಸ್ತಿ ಪ್ರೇಮಿಗಳು ಅಖಾಡದ ಸುತ್ತಲೂ ನೆರೆದಿದ್ದರು.

ಮೊದಲ ದಿನದಂದು ಪಂಜಾಬ್ ನ ರೂಪೇಶ್ ಕುಮಾರ ಮತ್ತು ಕರ್ನಾಟಕದ ಜಮಖಂಡಿಯ ರಮೇಶ್ ಶಿಂಧೆ ಮಧ್ಯೆ ನಡೆದ ಫೈನಲ್ ಪಂದ್ಯ ಅತ್ಯಂತ ಬಿರುಸಿನಿಂದ ಆರಂಭವಾಯ್ತು.‌ ಆರಂಭದಲ್ಲಿ ಕರ್ನಾಟಕದ ಮಲ್ಲ ಮೆಲುಗೈ ಸಾಧಿಸಿದಾಗ ನೆರೆದಿದ್ದ ಪ್ರೇಕ್ಷಕರ ಸಂಭ್ರಮ ಮುಗಿಲೇರಿತ್ತು. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಭವಿ ಕುಸ್ತಿ ಪಟು ಆಗಿರುವ ಪಂಜಾಬಿನ ಪೈಲ್ವಾನ ಚೇತರಿಸಿ ಕೊಂಡು ಹಾಕಿದ ನಿಕಾಲಿ ಡವ್ ದಿಂದ ಶಿಂಧೆಗೆ ಚಿತ್ ಆಗುವುದು ಬಿಟ್ಟರೇ ಬೇರೆ ಮಾರ್ಗವೇ ಉಳಿದಿರಲಿಲ್ಲ. ತೂಕ ಮತ್ತು ಅನುಭವಗಳು ರೂಪೇಶ್ ಕುಮಾರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವು.

ಇದಕ್ಕೂ ಮುನ್ನ ಹರಿಯಾಣದ ರಿಂಕೂ ಸಿಂಗ್ ಮತ್ತು ಕರ್ನಾಟಕದ ಬಾಗೇವಾಡಿಯ ಗಿರೀಶ್ ಮಧ್ಯೆ ಜರುಗಿದ ಕುಸ್ತಿ ಪಂದ್ಯಾಟ ರಣರೋಚಕವಾಗಿತ್ತು. ಹರಿಯಾಣದ ಪಟು ಹಾಕಿದ ಕಾಲ್ ಡಾವ್ ದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಲಿಗಾದ ಪೆಟ್ಟಿನಿಂದ ಕರ್ನಾಟಕದ ಮಲ್ಲ ಕಣ ದಿಂದ ನಿವೃತ್ತಿ ಘೋಷಿಸಿದರು. ನಿರ್ಣಾಯಕರು ರಿಂಕೂ ಸಿಂಗ್ ಜಯಸಾಧಿಸಿದರೆಂದು ಘೋಷಿಸಿದರು.

ಹರಪನಹಳ್ಳಿಯ ತಿಪ್ಪಣ್ಣ, ಶಂಸು, ಕೊಲ್ಲಾಪುರದ ಸಾಗರ್, ಹೊಸಪೇಟೆಯ ಪರುಶುರಾಮ, ಇರ್ಷಾದ್, ಮಾರುತಿ, ಕೊಲ್ಲಾಪುರದ ಚೇತನ್, ದಾವಣಗೆರೆಯ ಸತೀಶ್, ಅಜ್ಜಯ್ಯ, ಅರವಿಂದ್ ಗೊಸಲ ಸೇರಿದಂತೆ ಮೊದಲ ದಿನ ಅರವತ್ತಕ್ಕೂ ಹೆಚ್ಚು ಪೈಲ್ವಾನರು ಗೆಲುವಿಗಾಗಿ ಅಖಾಡದಲ್ಲಿ ಭರ್ಜರಿ ಕುಸ್ತಿ ಮಾಡಿದರು.

ಎರಡನೇಯ ದಿನದ ಅಂತಿಮ ಕುಸ್ತಿ ಭಾರೀ ತುರುಸಿನಿಂದ ಕೂಡಿತ್ತು. ಗೆಲುವಿಗಾಗಿ ಅರ್ಧ ಗಂಟೆಗೂ ಅಧಿಕ ಸಮಯ ಅಖಾಡದಲ್ಲಿ ಮಹಾರಾಷ್ಟ್ರದ ಓಂಕಾರ ಹಾಗೂ ಕರ್ನಾಟಕದ ಬಸವರಾಜ ಹುದಲಿ ತೀವ್ರ ಸೆಣಸಾಡಿದರು. ಒಂದು ಸಲ ಹುದಲಿ ಮೇಲಾದರೇ, ಮರು ಘಳಿಗೆಯಲ್ಲಿಯೇ ಮಹಾರಾಷ್ಟ್ರದ ಮಲ್ಲ ಮುನ್ನಡೆಗಳಿಸುತ್ತಿದ್ರು. ಇಬ್ಬರ ಕಾದಾಟ ರೊಚ್ಚಿಗೆದ್ದ ಮದಗಜಗಳ ಕಾದಾಟದಂತಿತ್ತು. ಕೊನೆ ಕ್ಷಣದಲ್ಲಿ ಓಂಕಾರ ಹಾಕಿದ ನಿಕಾಲಿ ಡಾವ್ ಕ್ಕೆ ಕರ್ನಾಟಕ ಪೈಲ್ವಾನ ಸೋಲೊಪ್ಪಲೇ ಬೇಕಾಯ್ತು.

ಇದಕ್ಕೂ ಮುನ್ನ ಪಂಜಾಬ್ ನ ರೂಪೇಶ್ ಮತ್ತು ಹರಿಯಾಣದ ರಿಂಕೂ ನಡುವಿನ ಕುಸ್ತಿ ನೆರೆದ ಪ್ರೇಕ್ಷಕರಿಗೆ ಕುಸ್ತಿಯ ರಸದೌತಣವನ್ನೆ ಉಣಬಡಿಸಿತು. ಇಬ್ಬರು ರಾಷ್ಟ್ರೀಯ ಪೈಲ್ವಾನರು, ಹೀಗಾಗಿ ಸೋಲನ್ನು ಒಪ್ಪಿಕೊಳ್ಳಲು ಇಬ್ಬರು ಸಿದ್ದರಿರಲಿಲ್ಲ. ಬಹು ಹೊತ್ತಿನ ತನಕವೂ ಜರುಗಿದ ಪಂದ್ಯದಲ್ಲಿ ಅಂತಿಮವಾಗಿ ಹರಿಯಾಣ ಮಲ್ಲನಿಗೆ ವಿಜಯ ಪ್ರಾಪ್ತಿ ಆಯ್ತು.

ಇದಕ್ಕು ಮುನ್ನ, ದಸರಾ ಕೇಸರಿ ರನ್ನರ್ ಹೊಳೆಬಸವ ಮತ್ತು ಬೆಳಗಾವಿಯ ಮುಬಾರಕ್ ಅಲಿ, ಲಾತೂರಿನ ಗೋರೆ ಮತ್ತು ರಾಯಭಾಗ್ ನ ಸತೀಶ್, ಮಹಾರಾಷ್ಟ್ರದ ಸಚಿನ್ ಮತ್ತು ಅಥಣಿಯ ನವೀನ್, ಕಲಬುರ್ಗಿಯ ಅಂಬರೀಶ್ ಮತ್ತು ದಾವಣಗೆರೆಯ ಗಿರೀಶ್ ನಡುವೆ ತೀವ್ರ ಪೈಪೋಟಿ, ಜಿದ್ದಾಜಿದ್ದಿ ಕುಸ್ತಿ ನಡೆಯಿತು. ಆದರೇ ಫಲಿತಾಂಶ ಬರಲಿಲ್ಲ, ನಿರ್ಣಾಯಕರು ಡ್ರಾ ಎಂದು ಘೋಷಿಸಿದರು.

ಉಳಿದಂತೆ ಕೊಲ್ಲಾಪುರದ ಶ್ರವಣಕುಮಾರ, ದಾವಣಗೆರೆಯ ಯೋಗೇಶ್, ಅರಸಿಕೆರಿ ಮಾರುತಿ, ಮರಿಯಮ್ಮನಹಳ್ಳಿ ಗೋವಿಂದ್, ಕೊಲ್ಲಾಪುರದ ಸಾಗರ, ಇಚಲಕರಂಜಿಯ ಚೇತನ್, ಗಿರೀಶ್ ಸೇರಿದಂತೆ ಐವತ್ತಕ್ಕೂ ಅಧಿಕ ಜೊತೆ ಕುಸ್ತಿಪಟುಗಳು ಗೆಲುವಿಗಾಗಿ ಸೆಣಸಾಡಿದರು.

ನಾಣಿಕೆರಿ ದೈವಸ್ಥರ ಪ್ರಮುಖರಾದ ಬಾರಿಕರ ಬಾಪೂಜಿ, ಅರಸಿಕೆರಿ ಹನುಮಂತಪ್ಪ, ಹೆಚ್.ಪಿ.ಶಿವಶಂಕರಗೌಡ, ವೆಲ್ಡಿಂಗ್ ಹುಲುಗಪ್ಪ ಬಂಗಾರಿ ಗಾಳಿರಾಜ, ಹುಚ್ಚಪ್ಪ, ಸೋಮು, ಕುದುರಿ ಪ್ರಕಾಶ, ಪ್ಲಂಬರ್ ಮಾರುತಿ, ಡ್ರೈವರ್ ಚಂದ್ರು, ಎಣ್ಣಿ ಭಾಷಾ,ಪುರಸಭಾ ಸದಸ್ಯರಾದ ಜೋಗಿ ಹನುಮಂತಪ್ಪ, ನವೀನ್, ಮರಿರಾಮಪ್ಪ, ಜಿ.ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಾಲ್ಕು ದಶಕಗಳಿಂದಲೂ ಕುಸ್ತಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತರು ಆದ ಹುಳ್ಳಿಪ್ರಕಾಶ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು.

LEAVE A REPLY

Please enter your comment!
Please enter your name here