ಉಸಿರು ನಿಲ್ಲಿಸಿದ ‘ಜ್ಞಾನಯೋಗಿ’ : ನಡೆದಾಡುವ ಸಂತ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ

0
63

ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ರ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವೈದ್ಯರ ತಂಡ ಚಿಕಿತ್ಸೆಯಲ್ಲಿ ನಿರತವಾಗಿತ್ತು. ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸೋಮುವಾರ ರಾತ್ರಿ ಸ್ವಾಮೀಜಿ ನಿಧನರಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿತ್ತು. ಆದರೆ ಮಧ್ಯಾಹ್ನ ಮತ್ತು ಸಂಜೆಯ ಹೆಲ್ತ್ ಬುಲೆಟಿನ್‍ನಲ್ಲಿ ಸ್ವಾಮೀಜಿಗೆ ಉಸಿರಾಟ ತೊಂದರೆ ಜಾಸ್ತಿಯಾಗಿದೆ. ಸ್ವಾಮೀಜಿ ಬಿಪಿ ಸ್ವಲ್ಪ ಕಡಿಮೆಯಾಗಿದೆ. ಸ್ವಾಮೀಜಿ ಆಹಾರ ತೆಗೆದುಕೊಳ್ಳುತ್ತಿಲ್ಲ. ಆದರೂ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ನಾವು ನಮ್ಮ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇವೆ. ಸ್ವಾಮೀಜಿ ಆಸ್ಪತ್ರೆಗೆ ಬರಲು ಒಪ್ಪುತ್ತಿಲ್ಲ. ಏನು ಚಿಕಿತ್ಸೆ ಕೊಡುತ್ತಿರೋ ಇಲ್ಲೇ ಕೊಡಿ ಎಂದು ಸ್ವಾಮೀಜಿ ಹೇಳಿದ್ದರು ಎಂದು ವೈದ್ಯರು ತಿಳಿಸಿದ್ದರು.

‘ನಿಸರ್ಗದಿಂದ ಬಂದವನು, ನಿಸರ್ಗದಲ್ಲೇ ಲೀನವಾಗಬೇಕು’ ಎಂದು ಅವರ ಆಶಯವಾಗಿತ್ತು. ಅವರ ಆಶಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಸಮಾಧಿ ಆಗಬಾರದು, ಗುಡಿ ಆಗಬಾರದು, ಪೂಜೆ, ಪುನಸ್ಕಾರಗಳು ಆಗಬಾರದು ಎಂದು ವಿಲ್‌ನಲ್ಲಿ ಬರೆದಿದ್ದಾರೆ. ಜ್ಞಾನ ದಾಸೋಹ ನಿರಂತರವಾಗಿ ಪ್ರವಚನಗಳ ಮೂಲಕ ನಡೆಸಿದ್ದರು. ತತ್ವಜ್ಞಾನ ಮತ್ತು ದೇಶೀಯ, ಪಾಶ್ಚಾತ್ಯ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು ಹಾಗೂ ಅಧ್ಯಯನ ನಡೆಸಿದ್ದರು. ಅಧ್ಯಾತ್ಮಕ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದರು.

ಪದ್ಮಶ್ರೀ ತಿರಸ್ಕಾರ, ಡಾಕ್ಟರೇಟ್ ಸ್ವೀಕರಿಸಲು ನಕಾರ!

‘ಎಂದಿಗೂ ಸತ್ಕಾರ ಸ್ವೀಕರಿಸಲಿಲ್ಲ, ಪ್ರಶಸ್ತಿಗಾಗಿ ಹಂಬಲಿಸಿಲ್ಲ. ಜೇಬಿಲ್ಲದ ಎರಡು ಜತೆ ಬ8ಟ್ಟೆಯಲ್ಲಿಯೇ ಹಣ ಮುಟ್ಟದೆ ಮಾದರಿ ಜೀವನ ನಡೆಸಿದವರು. ಸಿದ್ದೇಶ್ವರ ಸ್ವಾಮೀಜಿ ಎಲ್ಲಾ ಮಠಾಧೀಶರಂತೆ ಕಾವಿ ತೊಡುತ್ತಿರಲಿಲ್ಲ. ಅವರು ಶುಭ್ರ ಬಿಳಿ ಬಣ್ಣದ ಬಟ್ಟೆ ತೊಡುತ್ತಿದ್ದರು, ಅವರ ಮನಸ್ಸೂ ಬಟ್ಟೆಯಂತೆ ಶುಭ್ರವಾಗಿತ್ತು. ಅಧಿಕಾರ, ಹಣ, ಆಸ್ತಿಗೆ ಆಸೆಪಡದ ಅವರು ಪದ್ಮಶ್ರಿ, ಗೌರವ ಡಾಕ್ಟರೇಟ್‌ಗಳನ್ನೇ ತಿರಸ್ಕರಿಸಿದ್ದರು.

2018ರಲ್ಲಿ ಭಾರತ ಸರಕಾರ ಸಿದ್ದೇಶ್ವರ ಶ್ರೀಗಳಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಘೋಷಿಸಿತ್ತು. ಆದರೆ ಶ್ರೀಗಳು ಗೌರವಪೂರ್ವಕವಾಗಿಯೇ ಆ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಕರ್ನಾಟಕ ಸರ್ಕಾರ ಜ್ಞಾನ ಯೋಗಾಶ್ರಮಕ್ಕೆ ಬಜೆಟ್‌ನಲ್ಲಿ 50 ಲಕ್ಷ ರೂ. ಮಂಜೂರು ಮಾಡಿತ್ತು. ಆದರೆ ಆಶ್ರಮದವರು ಅದನ್ನೂ ಸಹ ಸ್ವೀಕರಿಸದೇ ಸರಕಾರಕ್ಕೆ ಮರಳಿಸಿದ್ದರು.

LEAVE A REPLY

Please enter your comment!
Please enter your name here