ಮಕ್ಕಳಲ್ಲಿ ಸಾಮಾಜಿಕ ಭದ್ರತೆ, ಕ್ರೀಡಾಶಕ್ತಿಯನ್ನು ಬೆಳೆಸಲು ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಿವೆ -ಬಿ.ಎಸ್.ರಘುವೀರ

0
48

ಧಾರವಾಡ : ಫೆ.08: ಸಹಪಠ್ಯ ಚಟುವಟಿಕೆಗಳು ಮಾನಸಿಕವಾಗಿ, ದೈಹಿಕವಾಗಿ ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತವೆ. ಅಲ್ಲದೇ ಶಿಕ್ಷಕರರಲ್ಲಿನ ಸಹಪಠ್ಯ ಚಟುವಟಿಕೆಗಳು ಮಕ್ಕಳಲ್ಲಿ ಓದು, ಬರಹ ಮತ್ತು ಕ್ರೀಡಾ ಆಸಕ್ತಿಯನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ವಿಭಾಗದ ನಿರ್ದೇಶಕ ಬಿ.ಎಸ್. ರಘುವೀರ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ರಾಜ್ಯ ಮಟ್ಟದ ಸ್ಪರ್ಧೆಯ ಎರಡನೇ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ, ಮಾತನಾಡಿದರು.

ಶಿಕ್ಷಕರಲ್ಲಿ ಪ್ರತಿಭೆ ಇದ್ದಾಗ ಮಾತ್ರ ಮಕ್ಕಳಲ್ಲಿರುವ ಕಲೆ, ಕೌಶಲ್ಯವನ್ನು ಗುರುತಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಸ್ಪರ್ಧಾ ಮನೋಭಾವದಿಂದ, ಸೌಹಾರ್ದತೆಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಇತರರಿಗೆ ಮಾದರಿಯಾಗಬೇಕು ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಾರ್ಗದರ್ಶನ ನೀಡಬೇಕು. ಶಿಕ್ಷಕ ವೃತ್ತಿಯಲ್ಲಿ ಅನೇಕ ಸವಾಲುಗಳಿರುತ್ತವೆ, ಅವುಗಳನ್ನು ಎದುರಿಸಿ ಮಕ್ಕಳಿಗೆ ಸರಿಯಾದ ದಾರಿ ತೋರಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜಿ.ಎನ್.ಮಠಪತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಜಿ. ತೊಗರಿ, ಅಧಿಕಾರಿಗಳಾದ ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ, ಇಂಗ್ಲೀಷ ವಿಷಯ ಪರಿವೀಕ್ಷಕಿ ರೇಖಾ ಭಜಂತ್ರಿ, ಕನ್ನಡ ವಿಷಯ ಪರಿವೀಕ್ಷಕಿ ಪೂರ್ಣಿಮಾ ಮುಕ್ಕುಂದಿ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಬಿ.ಬಿ.ದುಬ್ಬದಮರಡಿ, ಗಣಿತ ವಿಷಯ ಪರಿವೀಕ್ಷಕ ವಾಯ್.ಐ.ಹುಬ್ಬಳ್ಳಿ, ಶಿಕ್ಷಣ ಸಂಯೋಜಕ ಝಡ್.ಎಸ್.ಖಂಡುನಾಯಕ, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ 240 ಪ್ರೌಢಶಾಲಾ ಹಂತದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಸ್.ಎಂ ಹುಡೇದಮನಿ ವಂದಿಸಿದರು. ವಿಜ್ಞಾನ ವಿಷಯ ಪರಿವೀಕ್ಷಕ ಸಂಜಯ ಮಾಳಿ ನಿರೂಪಿಸಿದರು.

LEAVE A REPLY

Please enter your comment!
Please enter your name here