ಏಕಾಏಕಿ ಅಭ್ಯರ್ಥಿ ಘೋಷಣೆ; ಹಗರಿಬೊಮ್ಮನಹಳ್ಳಿ ಜೆಡಿಎಸ್ ಪಕ್ಷದಲ್ಲಿ ಭುಗಿಲೇದ್ದ ಅಸಮಾಧಾನ. ಮಾಜಿ ಮಂತ್ರಿ ನಬಿ ಅವರಿಂದ ದುಡುಕಿನ ನಿರ್ಧಾರ: ಟಿಕೆಟ್ ಆಕಾಂಷಿ ಡಾ.ವಿ. ತಿಪ್ಪೇಸ್ವಾಮಿ ವೆಂಕಟೇಶ ಅಸಮಾಧಾನ.

0
631

–ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

ಹಗರಿಬೊಮ್ಮನಹಳ್ಳಿ, ಫೆ,17
ಮಾಜಿ ಮಂತ್ರಿ ಎನ್.ಎಂ.ನಬಿ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ನಿವೃತ್ತ ಸಾರಿಗೆ ಅಧಿಕಾರಿ ಎಲ್.ಪರಮೇಶ್ವರಪ್ಪರನ್ನು ಜಾತ್ಯಾತೀತ ಜನತಾದಳ(ಜೆಡಿಎಸ್) ಅಭ್ಯರ್ಥಿ ಎಂದು ಏಕಾಏಕಿಯಾಗಿ ಘೋಷಣೆ ಮಾಡಿರುವುದು ಇನ್ನೋರ್ವ ಪ್ರಬಲ ಆಕಾಂಕ್ಷಿ ಡಾ.ವಿ.ತಿಪ್ಪೇಸ್ವಾಮಿ ವೆಂಕಟೇಶ ಮತ್ತು ಅವರ ಬೆಂಬಲಿಗರು, ಮೂಲ ಜೆಡಿಎಸ್ ಕಾರ್ಯಕರ್ತರ ಬಣಗಳಲ್ಲಿ ತೀವ್ರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.

ಗುರುವಾರ ದಿನ ನಿವೃತ್ತ ಸಾರಿಗೆ ಅಧಿಕಾರಿ ಪರಮೇಶ್ವರಪ್ಪ ಮತ್ತವರ ಬೆಂಬಲಿಗರು ಪಟ್ಟಣದ ನಾಣಿಕೆರಿ ಶ್ರೀ ಗಾಳೆಮ್ಮದೇವಿ ದೇವಸ್ಥಾನದಿಂದ ಹಳೇ ಊರಿನ ತನಕ ಪಕ್ಷದ ಧ್ವಜದಡಿ ರೋಡ್ ಶೋ ನಡೆಸಿದರು. ಶೋನಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರು ಆಗಿರುವ ಎನ್ಎಂ ನಬಿ ಅವರು ಪರಮೇಶ್ವರ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರು. ಇದು ಈಗ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರದ್ದು ದುಡುಕಿನ ನಿರ್ಧಾರವಾಗಿದೆ. ಇದು ಪಕ್ಷದಲ್ಲಿ ಗೊಂದಲವನ್ನು ಹುಟ್ಟಿಹಾಕಿದೆ. ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇನೆ ಏಕಾಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವಿದು. ಅಧಿಕಾರ ಇದೆ ಎಂದು ವಿನಾಕಾರಣ ಜಿದ್ದು ಸಾಧಿಸ ಬಾರದೆಂದು 2018 ರಿಂದಲೂ ಟಿಕೆಟ್ ಗಾಗಿ ತೀವ್ರವಾಗಿ ಪ್ರಯತ್ನಿಸುತ್ತೀರುವ ಡಾ.ವಿ.ತಿಪ್ಪೇಸ್ವಾಮಿ ವೆಂಕಟೇಶ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಶುಕ್ರವಾರ ಪಟ್ಟಣದ ಹಳೇಊರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೊಷ್ಠಿ ನಡೆಸಿ, ನಿನ್ನೆಯ ( ಫೆ.16) ದಿನ ಪಟ್ಟಣದಲ್ಲಿ ಜರುಗಿದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಾಜಿ ಸಚಿವರು, ನಿವೃತ್ತ ಸಾರಿಗೆ ಅಧಿಕಾರಿ ಎಲ್. ಪರಮೇಶ್ವರಪ್ಪಗೆ ಟಿಕೆಟ್ ಎಂದು ಘೋಷಿಸಿದ್ದೆ ಪ್ರಬಲ ಆಕಾಂಕ್ಷಿ ಆಗಿರುವ ನನ್ನನ್ನು ಸೇರಿದಂತೆ ನಿಷ್ಠಾವಂತ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಅಸಮಾಧಾನ ತರಿಸಿದೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೆಗೌಡರು, ರಾಜ್ಯಾಧ್ಯಕ್ಷರಾದ ಸಿಎಂ.ಇಬ್ರಾಹಿಂ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ವರಿಷ್ಠರು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಇನ್ನೂ ಕೂಡ ಅಖೈರು ಗೊಳಿಸಿಲ್ಲ. ಎರಡನೇಯ ಲಿಸ್ಟ್ ನಲ್ಲಿ ಟಿಕೆಟ್ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇದು ಮಾಜಿ ಸಚಿವರಿಗೆ ಗೊತ್ತಿದೆ. ಗೊತ್ತಿದ್ದು ಅವರು ಗೊಂದಲಕ್ಕೆ ಎಡೆ ಮಾಡುವ ಹೇಳಿಕೆ ಕೊಟ್ಟಿದ್ದಾರೆಂದರು.

ಪಕ್ಷದಿಂದ ಅಧಿಕೃತ ತಿರ್ಮಾನ ಬರುವವರೆಗೂ ಅಭ್ಯರ್ಥಿ ಕುರಿತಂತೆ ಗೊಂದಲಕ್ಕೀಡಾಗ ಬಾರದೆಂದು ಸುದ್ದಿಗೋಷ್ಠಿ ಮೂಲಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳು, ಬೆಂಬಲಿಗರಲ್ಲಿ ಮನವಿ ಮಾಡಿಕೊಂಡರು. ಕ್ಷೇತ್ರದ ಜೆಡಿಎಸ್ ನಲ್ಲಿ ಹೊಂದಾಣಿಕೆ ಕೊರತೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುತ್ತಾ ಬಂದಿರುವೆ. ಆದರೇ ಇದ್ದಕ್ಕಿದ್ದಂತೆಯೇ ಅಭ್ಯರ್ಥಿ ಘೋಷಿಸಿದ್ದು ಪಕ್ಷ ಕಟ್ಟುವ ಕಾರ್ಯಕ್ಕೆ ಹಿನ್ನಡೆ ಆಗಲಿದೆ ಎಂದರು.

ಕಾರ್ಯಾಧ್ಯಕ್ಷರಾಗಿರುವ ನಬಿ ಅವರು ಹಿರಿಯ ನಾಯಕರು ಅವರ ಬಗ್ಗೆ ವೈಯುಕ್ತಿಕವಾಗಿ ನಾನು ಬಹು ದೊಡ್ಡ ಗೌರವ ಇಟ್ಟುಕೊಂಡಿದ್ದೇನೆ. ನಾನು ತಪ್ಪು ಮಾಡುತ್ತಿದ್ದರೇ ಕರೆದು ಬುದ್ದಿ ಹೇಳ ಬಹುದಿತ್ತು. ಆದರೇ ಪಕ್ಷದ ವರಿಷ್ಠರು ತಿರ್ಮಾನ ಮಾಡುವ ಮುನ್ನವೇ ಈ ರೀತಿ ಘೋಷಣೆ ಮಾಡುವುದು ಸರಿಯಲ್ಲ. ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಮತ್ತು ಸಂಘಟನೆಗೆ ಪರಮೇಶ್ವರಪ್ಪರ ಕೊಡುಗೆ ದೊಡ್ಡ ಶೂನ್ಯ. ಎಲೇಕ್ಷನ್ ಬಂದಾಗ ಎರಡು ದಿನ ಪಕ್ಷದ ಧ್ವಜವನ್ನು ಕಟ್ಟಿಕೊಂಡು ಓಡಾಡಿದಾಕ್ಷಣವೇ ಬಿ-ಫಾರಂ ಕೇಳಲು ಆರ್ಹತೆಯಲ್ಲ ಎಂದು ಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಸಿಎಂ ಕುಮಾರಣ್ಣನವರ ನಾಯಕತ್ವವನ್ನು ಮೆಚ್ಚಿಕೊಂಡು ಮತ್ತು ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು 2017 ರಲ್ಲಿಯೇ ಕೈಯಲ್ಲಿದ್ದ ಉನ್ನತ ಸರ್ಕಾರಿ( ಕೃಷಿ ಅಧಿಕಾರಿ) ಹುದ್ದೆಗೆ ರಾಜೀನಾಮೆ ಕೊಟ್ಟು ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿರುವೆ. ಕಳೆದ ಆರೇಳು ವರ್ಷಗಳಿಂದಲೂ ಕ್ಷೇತ್ರದ ಪ್ರತಿ ಮನೆ,ಮನೆಗೂ ಭೇಟಿ ಕೊಟ್ಟು ಪಕ್ಷದ ಕಾರ್ಯಕ್ರಮ, ಪ್ರಣಾಳಿಕೆ, ಕುಮಾರಣ್ಣರ ಸರ್ಕಾರದ ಕಾರ್ಯಕ್ರಮ,ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತೀದ್ದೇನೆ.
ಮೊದಲ ಪಟ್ಟಿಯಲ್ಲಿಯೇ ನನಗೆ ಟಿಕೆಟ್ ಅನೌನ್ಸ್ ಆಗಬೇಕಿತ್ತು. ಆದರೇ ಕೇಲವು ಮುಖಂಡರ ತಪ್ಪು ಮಾಹಿತಿಗಳಿಂದಾಗಿ ಅನೌನ್ಸ್ ಆಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ನಿನ್ನೆಯ ಘಟನೆಯನ್ನು ವರಿಷ್ಠರ ಗಮನಕ್ಕೆ ತಂದಿರುವೆ. ಇನ್ನೂ ಎರಡು ದಶಕದಷ್ಟು ಸುದಿರ್ಘವಾದ ಸರ್ಕಾರಿ ಹುದ್ದೆಯನ್ನು ಬಿಟ್ಟು ಬಂದು ಪಕ್ಷಕ್ಕಾಗಿ ದುಡಿಯುತ್ತೀರುವ ನನ್ನ ಸಂಘಟನಾ ಕಾಳಜಿ ಹಿರಿಯರ ಗಮನಕ್ಕೆ ಬಂದಿದೆ. ಎರಡನೇಯ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಆಗಲಿದೆ ಎನ್ನುವ ಗಟ್ಟಿ ವಿಶ್ವಾಸವನ್ನು ತಿಪ್ಪೇಸ್ವಾಮಿ ಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ಮುಖಂಡರಾದ ಕೊಟ್ಟೂರಿನ ಗೋಪಿ, ದಶಮಾಪುರದ ರಾಮಸ್ವಾಮಿಗೌಡ, ರೋಷನ್, ಜಮದಗ್ನಿ, ಕೊಟ್ರೇಶ ಕೊಪ್ಪಳ ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.‌

LEAVE A REPLY

Please enter your comment!
Please enter your name here