ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ;ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ-ಮಲ್ಲಿಕಾರ್ಜುನ್ ಪೂಜಾರ್

0
280

ಸಂಡೂರು:ಏ:23:- ತಾಲೂಕಿನ ಬಂಡ್ರಿ ಗ್ರಾಮದಲ್ಲಿ 890ನೇ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸರಳವಾಗಿ ಶ್ರೀ ಬಂಡ್ರಿ ಬಸವೇಶ್ವರ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು.

ವೀರಶೈವ ಸಮಾಜದ ಮುಖಂಡರು, ಯುವಕರು, ಹಿರಿಯರು,ಮಕ್ಕಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ಧರು, ಜಗಜ್ಯೋತಿ ಬಸವೇಶ್ವರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಸವ ಜಯಂತಿಯನ್ನು ಆಚರಿಸಿದರು, ಕಾರ್ಯಕ್ರಮದಲ್ಲಿ ವೀರಶೈವ ಯುವಘಟಕದ ಮಲ್ಲಿಕಾರ್ಜುನ್ ಪೂಜಾರ್ ಮಾತನಾಡಿ

ಭಾರತದ ಆರ್ಥಿಕ ಇತಿಹಾಸದಲ್ಲಿ ಹಾಗೂ ಅರ್ಥಶಾಸ್ತ್ರದಲ್ಲಿ ಹನ್ನೆರಡನೆಯ ಶತಮಾನದ ಶರಣರು ತಮ್ಮದೇ ಆದ ಗೌರವಯುತ ಸ್ಥಾನ ಹೊಂದಿದ್ದರು. ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದ ಶರಣ ಮಹಾಶಯರು ಆರ್ಥಿಕ ವಿಚಾರಗಳಲ್ಲಿ ಬದಲಾವಣೆಯನ್ನು ತಂದರು. ಬಹುಶಃ ಭಾರತದ ಆರ್ಥಿಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆರ್ಥಿಕ ಬದಲಾವಣೆ ತರುವಂತಹ ಜವಾಬ್ದಾರಿಯುತ ಕಾರ್ಯವನ್ನು ಕೈಗೊಂಡರು. ಸಮಾಜದ ವ್ಯವಸ್ಥೆಯ ಸ್ವರೂಪವು ಅದರ ನಿರ್ವಹಣೆಯನ್ನಲಂಬಿಸಿದೆ. ಅರ್ಥವ್ಯವಸ್ಥೆಯ ಕಾರ್ಯದಕ್ಷತೆ, ಸಮರ್ಪಕ ಆಡಳಿತದಿಂದ ನಿರ್ಧಾರವಾಗುತ್ತದೆ. ಸಮಾಜದ ಆರ್ಥಿಕ ಬದಲಾವಣೆಗೆ ನಿರ್ದಿಷ್ಟವಾದ ಹಾಗೂ ನಿರ್ಣಯಾತ್ಮಕ ಪಾತ್ರವಿದೆ ಎಂಬುದನ್ನು ಅವರು ಮನಗಂಡಿದ್ದರು. ಹೀಗಾಗಿ ಸಾಮಾಜಿಕ ಕ್ರಾಂತಿಯ ಹರಿಕಾರನೆಂದು ನಾವು ಗುರುತಿಸುವ ಬಸವಣ್ಣನವರು ಆರ್ಥಿಕ ಕ್ರಾಂತಿಯ ಹರಿಕಾರನೂ ಆಗಿದ್ದರು.

ಅಂದಿನ ಸಮಾಜದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿದ್ದ ಸಾಮಾಜಿಕ ಅಸಮಾನತೆಗೆ ಆರ್ಥಿಕ ಅಸಮಾನತೆಯೂ ಸಹ ಒಂದು ಪ್ರಮುಖ ಕಾರಣವೆಂದು ಮೊದಲ ಬಾರಿಗೆ ಗುರುತಿಸಿದವರು ಬಸವಣ್ಣ. ಮಾತ್ರವಲ್ಲ ತಮ್ಮ ಮುಂದಾಳುತನದಲ್ಲಿ ಅರ್ಥಶಾಸ್ತ್ರಕ್ಕೆ ಅಂದು ಹೊಸ ತಿರುವನ್ನೇ ನೀಡಿದರು. ಅರ್ಥಶಾಸ್ತ್ರದ ಹೆಸರಿನಲ್ಲಿ ಅವರಿವರಂತೆ ಪ್ರತ್ಯೇಕವಾಗಿ ಯಾವ ಗ್ರಂಥಗಳನ್ನು ಅವರು ಬರೆಯಲಿಲ್ಲ. ಆದರೆ ಸರ್ವ ಸಮಾನತೆಯ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರತರಾದಾಗ ತಾನಾಗಿಯೇ ಹುಟ್ಟಿಕೊಂಡ ಆರ್ಥಿಕ ಯೋಜನೆಗಳ ಕುರಿತ ಅವರ ವಚನಗಳು ಯಾವುದೇ ಅರ್ಥಶಾಸ್ತ್ರದ ಗ್ರಂಥಗಳಿಗಿಂತ ಕಮ್ಮಿಯೇನಿಲ್ಲ. ಪ್ರಾಚೀನ ಕಾಲವಿಂದಲೂ ಧರ್ಮದ ಹೆಸರಿನಲ್ಲಿ, ಆಧ್ಯಾತ್ಮದ ಹೆಸರಿನಲ್ಲಿ ಹಣಕ್ಕೆ ಸಿಗದೇ ಹೋದ ಪ್ರಾಮುಖ್ಯವನ್ನು ಗುರುತಿಸಿದ ಶರಣರು ಅರ್ಥಕ್ಕೆ ಅರ್ಥವನ್ನು ಒದಗಿಸಿಕೊಟ್ಟರು ಎಂದು ಮಾಹಿತಿಯನ್ನು ನೀಡಿದರು

ಈ ಕಾರ್ಯಕ್ರಮದಲ್ಲಿ ವೀರಶೈವ ಸಂಘದ ಅಧ್ಯಕ್ಷರಾದ ಸಿದ್ದೇಶ್ ಉಪಾಧ್ಯಕ್ಷ ಸಿದ್ದಪ್ಪ, ಹಾಗೂ ವೀರಶೈವ ಯುವ ಘಟಕದ ಮಲ್ಲಿಕಾರ್ಜುನ್ ಪೂಜಾರ, ಮಂಜುನಾಥ್ ಎಸ್ ಪಿ, ಮೇಘರಾಜ್ ಜಿ.ಬಿ.ಚೇತನ್, ಎಸ್ ಜಗದೀಶ್ ಎಂ ಪಿ, ಶಿವಣ್ಣ ಟಿ, ನಾಗರಾಜ್ ಪೂಜಾರ, ಗಿರೀಶ್ ಜೆ ನಾಗಭೂಷಣ ಟಿ,ಕರಿಬಸಪ್ಪ ಟಿ , ಪ್ರಭಾಕರ್, ಡಾಕ್ಟರ್ ಮಂಜುನಾಥ್, ಮುರುಳಿ, ರವಿ ,ಅಜೇಯ ಗಣಿಗಾರ ಮಂಜುನಾಥ್,ಪುರುಷೋತ್ತಮ, ಇತರೆ ಸಮಾಜದ ಬಾಂಧವರು ಗುರುಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here