ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ; ಮನೆಯಿಂದಲೇ ಕೊನೆಗೊಳ್ಳಲಿ ಲಿಂಗ ತಾರತಮ್ಯ: ಪದ್ಮಾ ವಿಠ್ಠಲ್

0
104

ಬಳ್ಳಾರಿ,ಮಾ.10: ನಮ್ಮ ಮನೆಯಿಂದಲೇ ಗಂಡು-ಹೆಣ್ಣಿಗೆ ಸಮಾನ ಅವಕಾಶ ಕೊಡುವುದನ್ನು ಪಾಲಕರು ರೂಢಿಸಿಕೊಳ್ಳಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಹೆಚ್.ಪದ್ಮಾ ವಿಠ್ಠಲ್ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಮಹಿಳೆ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದಳು ಇಂದು ಅವಕಾಶವಂಚಿತಳಾಗಿ ಹಿಂದುಳಿದಿದ್ದಾಳೆ. ಆದರೂ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮುನ್ನಡೆಯುತ್ತಿದ್ದಾಳೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಲಿಂಗತಾರತಮ್ಯವನ್ನು ನಿರ್ಮೂಲನೆ ಮಾಡಲು ವಿದ್ಯಾವಂತ ಮಹಿಳೆಯರಿಂದ ಮಾತ್ರ ಸಾಧ್ಯ. ಡಿಜಿಟಲ್ ಯುಗದಲ್ಲಿ ಮಹಿಳೆಯರು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಪಿ.ಆಲಗೂರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳಾ ಶೋಷಣೆ ಹಾಗೂ ಲಿಂಗ ತಾರತಮ್ಯಗಳು ಕಡಿಮೆಯಾಗಿವೆ. ಮೊದಲಿನಂತೆ ಮಹಿಳೆಯರನ್ನು ಶೋಷಿಸುವ ಪದ್ದತಿ ಇಂದು ಇಲ್ಲ. ಆಧುನಿಕತೆಗೆ ಪೂರಕವಾಗಿ ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಮಹಿಳೆಯು ಇಂದು ಸಶಕ್ತವಾಗಿದ್ದಾಳೆ. ನಾವೀನ್ಯತೆ ಮತ್ತು ತಂತ್ರಜ್ಞಾನ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುತ್ತಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀಲ್ ಮಾತನಾಡಿ, ಮಹಿಳೆಯರು ಇಂದು ರಾಷ್ಟ್ರದ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ದಿನಾಚಾರಣೆಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ದಿನಗಳಲ್ಲಿಯೂ ಮಹಿಳೆಯರನ್ನು ಸ್ಮರಿಸುವ ಸಂಸ್ಕøತಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವÀವಿದ್ಯಾಲಯದಿಂದ ಕಾರ್ಯಕ್ರಮದ ಭಾಗವಾಗಿದ್ದ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಸ್ನೇಹಸುಮಾ ಹೆಗಡೆ, ಡಾ.ಶ್ರೀದೇವಿ ಆಲೂರ, ಡಾ.ಆಶಾ ಜ್ಯೋತಿ, ಇಂಗ್ಲೀಷ ವಿಭಾಗದ ವಾತ್ಸಲ್ಯ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here