32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಕಾರ್ಯಕ್ರಮಕ್ಕೆ ಎಸ್ಪಿ ಚಾಲನೆ, ಸುರಕ್ಷತೆಯಲ್ಲಿ ನಿಷ್ಕಾಳಜಿ 1.50ಲಕ್ಷ ಜನ ಅಪಘಾತದಲ್ಲಿ ಸಾವು: ಎಸ್ಪಿ ಸೈದುಲು ಅಡಾವತ್

0
142

ಬಳ್ಳಾರಿ.ಜ.18 : ರಸ್ತೆ ಸುರಕ್ಷತೆಯಲ್ಲಿ ತೋರಿದ ನಿರ್ಲಕ್ಷ್ಯತೆ ಮತ್ತು ನಿಷ್ಕಾಳಜಿತನದಿಂದಾಗಿ ಕಳೆದ ವರ್ಷ ನಮ್ಮ ದೇಶದಲ್ಲಿ ಸುಮಾರು 1.50 ಲಕ್ಷ ಜನ ಅಪಘಾತದಲ್ಲಿ ತಮ್ಮ ಅಮೂಲ್ಯ ಜೀವನ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇ.40ರಷ್ಟು ಜನರು ಯುವಕರಾಗಿರುವುದು ಸೇರಿದಂತೆ ಇವರನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರು ಅನಾಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ತಿಳಿಸಿದರು.
ಜಿಲ್ಲಾ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ 2021 ಕಾರ್ಯಕ್ರಮ ನಿಮಿತ್ತ ನಗರದ ಸೆಂಟನೆರಿ ಹಾಲ್‍ನಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಮತ್ತು ವಾಹನ ಓಡಿಸುವಾಗ ನೀವು ಜಾಗೃತರಾಗಿರಬೇಕು. ಆಟೋ ಚಾಲಕರು, ವಾಹನ ಸವಾರರು ರಸ್ತೆಯಲ್ಲಿ ಅಪಘಾತವಾದಾಗ ಯಾರೋ ಅನಾಮಿಕರು ಎಂದು ತಿಳಿಯದೇ ಅವರು ಕೂಡ ನಿಮ್ಮ ಕುಟುಂಬದ ಸದಸ್ಯರು ಅಂತ ಭಾವಿಸಿ ಎಂದು ಸಲಹೆ ನೀಡಿದರು.
ಮೈನಿಂಗ್ ಲಾರಿಗಳು ಅತ್ಯಂತ ವೇಗವಾಗಿ ಚಲಿಸುತ್ತಿವೆ, ಅತಿ ವೇಗವಾಗಿ ವಾಹನ ಚಲಾಯಿಸುವಾಗ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಗಣಿ ಮಾಲಿಕರ ಹತ್ತಿರ ಸಭೆ ನಡೆಸಿ ಮೈನಿಂಗ್ ಲಾರಿಗಳ ಜಿಪಿಎಸ್ ಅಳವಡಿಸುವ ಮೂಲಕ ವೇಗ ನಿಯಂತ್ರಿಸುವ ಕೆಲಸ ಮಾಡಲಾಗುವುದು ಮತ್ತು ವೇಗ ಮೀರಿ ವಾಹನ ಓಡಿಸಿದ್ದು ಕಂಡು ಬಂದಲ್ಲಿ ಅಂತವರಿಗೆ ದಂಡ ವಿಧಿಸಲಾಗುವುದು ಎಂದರು.
ಮಹಾನಗರ ಪಾಲಿಕೆ ವತಿಯಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮತ್ತು ಆಟೋಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಮಾತನಾಡಿ, ಪ್ರತಿಯೊಬ್ಬರು ಹೆಲ್ಮೆಟ್ ಬಳಸಿ ಯಾರೂ ಕೂಡ ನಿರ್ಲಕ್ಷ್ಯ ವಹಿಸಬೇಡಿ, ನಿರ್ಲಕ್ಷ್ಯ ಮಾಡಿದ್ದಲ್ಲಿ ನಿಮ್ಮ ಕುಟುಂಬವೇ ಬೀದಿ ಪಾಲಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬೇಡಿ ಅತಿ ಹೆಚ್ಚು ಅಪಘಾತಗಳು ಮೊಬೈಲ್ ಮಾತನಾಡುತ್ತಾ ವಾಹನ ಓಡಿಸದಾಗಲೇ ನಡೆದಿವೆ;ಹೀಗಾಗಿ ಮೊಬೈಲ್ ಬಳಕೆಯನ್ನು ನಿಲ್ಲಿಸಿ ಎಂದು ತಿಳಿಸಿದರು.
ಆಟೋ ಚಾಲಕರು ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುವಾಗ ನಿಮ್ಮ ಮಕ್ಕಳು ಎನ್ನುವ ಭಾವದಿಂದ ನೋಡಿ,ನಿಯಮಾನುಸಾರ ಎಷ್ಟು ಮಕ್ಕಳನ್ನು ಆಟೋಗಳಲ್ಲಿ ಹತ್ತಿಸಿಕೊಂಡು ಹೋಗಬೇಕೋ ಅಷ್ಟು ಮಕ್ಕಳನ್ನು ಮಾತ್ರ ಹತ್ತಿಸಿಕೊಂಡು ಹೋಗಿ ಎಂದರು.
ಈ ಸಂದರ್ಭದಲ್ಲಿ ಸಂಚಾರಿ ಠಾಣೆಯ ಸಿಪಿಐ ನಾಗರಾಜ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್, ಡಿವೈಎಸ್ಪಿಗಳು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here