ಹುಲಿತಾಳದಲ್ಲಿ ವಿಶೇಷ ಶ್ರಮದಾನ ಶಿಬಿರ

0
58

ಮಡಿಕೇರಿ ಮಾ.16:-ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಮತ್ತು ಭಗತ್ ಯುವಕ ಸಂಘ ಹುಲಿತಾಳ ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ವಿಶೇಷ ಶ್ರಮದಾನ ಶಿಬಿರ ಹುಲಿತಾಳದ ಸಮುದಾಯ ಭವನದಲ್ಲಿ ಜರುಗಿತು.

ಶಿಬಿರವನ್ನು ಮರಗೋಡು ಭಾರತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಪಿ.ಎಸ್.ರವಿಕೃಷ್ಣ ಉದ್ಘಾಟಿಸಿ ಮಾತನಾಡಿ ಸ್ಥಳೀಯ ಅಗತ್ಯತೆಗಳನ್ನು ಅಲ್ಲಿನ ಯುವಕರೇ ಒಗ್ಗೂಡಿ ಶ್ರಮದಾನದ ಮೂಲಕ ಪೂರೈಸಿಕೊಳ್ಳುವುದು ಆದರ್ಶ ಪ್ರಾಯವಾಗಿದೆ. ಸ್ವಚ್ಛ ಪರಿಸರ-ಸ್ವಸ್ಥ ಆರೋಗ್ಯಕ್ಕೆ ಶ್ರಮದಾನವು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಾಕತ್ತೂರು ಗ್ರಾ.ಪಂ.ಸದಸ್ಯರಾದ ಬಿ.ವಿ.ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಿ.ಎಚ್.ಗಣೇಶ್ ಅತಿಥಿಗಳಾಗಿ ಉಪಸ್ಥಿತರಿದ್ದರು.

ಮೂರು ದಿನಗಳ ವಿಶೇಷ ಶ್ರಮದಾನ ಶಿಬಿರದ ಸಂದರ್ಭದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ನಿರ್ವಹಣೆ ಕುಂಠಿತವಾಗಿದ್ದ ಹುಲಿತಾಳದ ಸಮುದಾಯ ಭವನ ಸ್ವಚ್ಛಗೊಳಿಸಿ, ಬಣ್ಣ ಬಳಿದು ಸ್ವಚ್ಛ ಭಾರತದ ಕುರಿತಾದ ಘೋಷವಾಕ್ಯಗಳನ್ನು ಬರೆದು ಸುತ್ತಲಿನ ಪರಿಸರ ಶುಚಿಗೊಳಿಸಿ ಗಿಡ ನೆಡಲಾಯಿತು. ಸುಮಾರು 40 ಮಂದಿ ಯುವಕರು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಶ್ರಮದಾನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಗತ್ ಯುವಕ ಸಂಘದ ಅಧ್ಯಕ್ಷ ಎಚ್.ಟಿ ವಿನೋದ್ ವಹಿಸಿದ್ದರು. ಶ್ರಮದಾನದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ವಿತರಿಸಿ ಮಾತನಾಡಿ ಸರ್ಕಾರ ಯುವಕ ಮತ್ತು ಯುವಕ ಸಂಘಗಳನ್ನು ಸಕ್ರೀಯವಾಗಿರಿಸಿ ಪ್ರಗತಿ ಹೊಂದುವಂತೆ ಮಾಡಲು ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಯುವಕ ಸಂಘಗಳು ಇಲಾಖೆಗಳೊಡನೆ ಸಂವಹನ ಸಾಧಿಸಿ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹಾಕತ್ತೂರು ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ಬಿ.ಕೆ.ಗಂಗಾಧರ ಪಾಲ್ಗೊಂಡಿದ್ದರು. ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಮಾರ್ಗದರ್ಶನ ನೀಡಿದರು. ಯುವಕ ಸಂಘದ ಕಾರ್ಯದರ್ಶಿ ಎಚ್.ಸಿ. ನಂದಕುಮಾರ್ ನಿರೂಪಿಸಿ, ನಿರ್ವಹಿಸಿದರು.

LEAVE A REPLY

Please enter your comment!
Please enter your name here