ಸಂವಿಧಾನ ಜಾಗೃತಿ ಜಾಥಾ: ಸಮ ಸಮಾಜದ ನಿರ್ಮಾಣಕ್ಕೆ ಸಂವಿಧಾನ ಅಡಿಪಾಯ

0
38

ಬಳ್ಳಾರಿ,ಫೆ.14: ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಮಂಗಳವಾರದಂದು ಕುರುಗೋಡು ತಾಲ್ಲೂಕಿನ ಬಸವಪುರ, ಗೆಣಿಕೆಹಾಳು, ಎಚ್.ವೀರಾಪುರ, ಕಲ್ಲುಕಂಭ ಮತ್ತು ಓರ್ವಾಯಿ ಗ್ರಾಮ ಪಂಚಾಯಿತಿ ಮಾರ್ಗದಲ್ಲಿ ಸಂಚಾರ ನಡೆಸಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಜಾಥಾವನ್ನು ಬಸವಪುರ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಸವಪುರದಿಂದ ಗೆಣಿಕೆಹಾಳು ಗ್ರಾಮದವರೆಗೆ ಬೈಕ್ ರ್ಯಾಲಿಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಜಾಥಾವು ಬಸವಪುರ, ಗೆಣಿಕೆಹಾಳು, ಕ್ಯಾದಿಗ್ಯಾಳು, ಎಚ್.ವೀರಾಪುರ, ಕಲ್ಲುಕಂಭ ಮತ್ತು ಓರ್ವಾಯಿ ಮಾರ್ಗವಾಗಿ ಚಲಿಸಿತು. ಕಲ್ಲುಕಂಭ ಗ್ರಾಮದಲ್ಲಿ ವಿದ್ಯಾರ್ಥಿನಿಯರ ಕೋಲಾಟ ಮನಮೋಹಕವಾಗಿತ್ತು. ಸಾಮೂಹಿಕ ನೃತ್ಯ ಕಣ್ಮನ ಸೂರೆಗೊಂಡಿತು. ಜಾಥಾದಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯ, ಕೋಲಾಟ, ಸಾಮೂಹಿಕ ನೃತ್ಯಗಳು ವಿಶೇಷವಾಗಿದ್ದವು.

ಬಸವಪುರ ಗ್ರಾಮದಲ್ಲಿ ಯುವ ಮುಖಂಡ ಉಮಾಪತಿ ದ್ರಾವಿಡ್ ಮಾತನಾಡಿ, ರಾಜ್ಯದ ಪ್ರತೀ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಸತತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದಕ್ಕಾಗಿ ಘನ ಸರ್ಕಾರಕ್ಕೆ, ಸಮಾಜ ಕಲ್ಯಾಣ ಇಲಾಖಾ ಸಚಿವರಿಗೆ ಅಭಿನಂದನೆ ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಪುಲೆ, ಚೆನ್ನಮ್ಮ, ಕನಕದಾಸರು ಹಾಗೂ ಅಂಬಿಗರ ಚೌಡಯ್ಯ ರವರು ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದಿದ್ದಾರೆ. ಇಂದಿನ ಜಾಥಾ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯಗಳ ಜನರು ಭಾಗವಹಿಸಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ ಎಂದು ಹೇಳಿದರು.
ನಮ್ಮ ದೇಶದಲ್ಲಿ ಹಲವಾರು ಜಾತಿಗಳು, ಧರ್ಮಗಳು, ಆಚರಣೆಗಳು, ವಿಚಾರಗಳು, ಸಾವಿರಾರು ದೇವರುಗಳು, ರೂಢಿಗಳು, ಸಂಪ್ರದಾಯಗಳು ಇದ್ದರೂ, ಎಲ್ಲವೂ ಭಾರತದ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವೆಲ್ಲರೂ ಜಾತ್ಯಾತೀತರು, ಧರ್ಮಾತೀತರು, ಸಮಾನರು, ಸ್ವಾತಂತ್ರ್ಯರು ಆಗಿರುವುದಕ್ಕೆ ಸಂವಿಧಾನವೇ ಮೂಲ ಕಾರಣ ಎಂದು ಅಭಿಪ್ರಾಯಪಟ್ಟರು. ನಮ್ಮ ದೇಶದಲ್ಲಿ ಮೊದಲಿಗೆ ಶಿಕ್ಷಣ ನೀಡಿದ ಮಹಿಳೆ ಸಾವಿತ್ರಿ ಬಾಯಿ ಫುಲೆ ಎಂದು ಹೇಳಿದರು.

ಕಲ್ಲುಕಂಭ ಗ್ರಾಮದ ನಾಗರಾಜ ಮಾತನಾಡಿ, ನಾವೆಲ್ಲರೂ ನಮ್ಮ ದೇಶದ ಸಂವಿಧಾನವನ್ನು ಅರಿಯಬೇಕು ಎಂದು ತಿಳಿಸಿದರು. ಸಂವಿಧಾನ ಜಾಥಾವು ನಮ್ಮ ಊರಿಗೆ ಬಂದಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.

ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here