ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ; ಅಭೂತಪೂರ್ವ ಸ್ಪಂದನೆ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

0
22

ಬಳ್ಳಾರಿ,ಫೆ.14: ಭಾರತದ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರದ ವತಿಯಿಂದ “ಸಂವಿಧಾನ ಜಾಗೃತಿ ಜಾಥಾ”ವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿದೆ ಮತ್ತು ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಸಂಚರಿಸುತ್ತಿರುವ “ಸಂವಿಧಾನ ಜಾಗೃತಿ ಜಾಥಾ” ಕುರಿತು, ಬುಧವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜ.26 ರ ಗಣರಾಜ್ಯೋತ್ಸವ ದಿನದಂದು ಯುವಜನ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರು ಜಾಥಾಗೆ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಎಲ್‍ಇಡಿ ಪರದೆ ಹೊಂದಿರುವ ಸ್ತಬ್ಧಚಿತ್ರವು ಜಿಲ್ಲೆಯ 100 ಗ್ರಾಮ ಪಂಚಾಯಿತಿ ಹಾಗೂ 08 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫೆ.23 ರವರೆಗೆ ಸಂಚರಿಸಲಿದ್ದು, ಈಗಾಗಲೇ ಫೆ.13 ರವರೆಗೆ 64 ಗ್ರಾಮ ಪಂಚಾಯತಿ ಮತ್ತು 04 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತನ್ನ ಸಂಚಾರ ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದರು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಪೂರ್ವ ನಿಗದಿತ ರೂಟ್ ಮ್ಯಾಪ್‍ನಂತೆ ಪ್ರತೀ ದಿನ ಸಂಚರಿಸುತ್ತಿದೆ. ಈವರೆಗೆ ಬಳ್ಳಾರಿ, ಸಿರುಗುಪ್ಪ ಮತ್ತು ಕುರುಗೋಡು ತಾಲ್ಲೂಕಿನ 64 ಗ್ರಾಮ ಪಂಚಾಯಿತಿಗಳು ಮತ್ತು 04 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸಿ ಶೇ.73 ರಷ್ಟು ಸ್ಥಳಗಳಲ್ಲಿ ಸಂಚಾರವನ್ನು ಪೂರ್ಣಗೊಳಿಸಿದೆ ಎಂದರು.
ಜಾಥಾವು ಫೆ.14 ರಿಂದ ಕಂಪ್ಲಿ ಮತ್ತು ಸಂಡೂರು ತಾಲ್ಲೂಕಿನಾದ್ಯಂತ ಸಂಚರಿಸಿ ಫೆ.23 ರಂದು ಪೂರ್ಣಗೊಳ್ಳಲಿದೆ. ನಂತರ ಫೆ.24 ಮತ್ತು 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ “ಸಂವಿಧಾನ ಜಾಗೃತಿ ಜಾಥಾ” ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುಖಾಂತರ ಕೊನೆಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಾಥಾ ಸಂಚರಿಸುವ ಮಾರ್ಗದಲ್ಲಿ ಆಯಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ವಿಜೃಂಭಣೆಯಿಂದ ಸ್ತಬ್ಧಚಿತ್ರವನ್ನು ಸ್ವಾಗತಿಸಲಾಗುತ್ತಿದೆ. ಆಯಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಯರ್, ಉಪ ಮೇಯರ್, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಜನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಶಿಕ್ಷಕರುಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ವಿಶೇಷವಾಗಿ ಆಯಾ ತಾಲ್ಲೂಕಿನ ಶಾಸಕರುಗಳು ಕೂಡಾ ಅತ್ಯಂತ ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ ಎಂದರು.

ಪ್ರತೀ ದಿನ, ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳಶ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರ ಮೂಲಕ ಸ್ತಬ್ಧಚಿತ್ರವನ್ನು ಸ್ವಾಗತಿಸಲಾಗುತ್ತಿದ್ದು, ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಗಿರುವ ಸಂವಿಧಾನದ ಮಹತ್ವ, ರಾಜ್ಯ ನಿರ್ದೇಶಕ ತತ್ವಗಳು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ್‍ರವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಹಾಗೂ ಮಹನೀಯರ ನುಡಿಮುತ್ತುಗಳನ್ನು ಜನರು ಕೌತುಕದಿಂದ ವೀಕ್ಷಿಸಿ ಸಂವಿಧಾನದ ಮೌಲ್ಯ ಹಾಗೂ ಆಶಯಗಳ ಕುರಿತು ತಿಳಿದುಕೊಳ್ಳುತ್ತಿದ್ದಾರೆ. ಜಾಥಾದ ಉದ್ದಕ್ಕೂ “ಸಂವಿಧಾನದ ಆತ್ಮ” ಆಗಿರುವ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದುದ್ದಕ್ಕೂ ಕಲಾ ತಂಡಗಳು ಭಾಗವಹಿಸಿ ಡೊಳ್ಳು ಕುಣಿತ, ಹಲಗೆ ವಾದನ, ತಮಟೆ ವಾದನ, ಕೋಲಾಟ, ಹಗಲು ವೇಷ, ಸುಡುಗಾಡು ಸಿದ್ಧರ ಕಲಾ ಪ್ರದರ್ಶನ ಇತ್ಯಾದಿ ಜಾನಪದ ಕಲೆಗಳನ್ನು ಪ್ರದರ್ಶಿಸಲಾಗಿರುತ್ತದೆ. ವಿವಿಧ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಂಗೀತ, ಸಾಮೂಹಿಕ ನೃತ್ಯ, ಕಿರುನಾಟಕ, ಏಕ ಪಾತ್ರಾಭಿನಯ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಹಾಗೂ ಚಿತ್ರಕಲೆ, ಪ್ರಬಂಧ, ಸಂಗೀತ, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಪ್ರತೀ ದಿನ ಸಂವಿಧಾನದ ಮಹತ್ವದ ಕುರಿತು ನುರಿತ ಭಾಷಣಕಾರರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಜಾಥಾದಲ್ಲಿ ಬೈಕ್ ರ್ಯಾಲಿ, ಎತ್ತಿನ ಬಂಡಿ ರ್ಯಾಲಿ, ಸೈಕಲ್ ರ್ಯಾಲಿ, 50 ಮೀ. ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ ಮತ್ತು ಬಲೂನು ಹಾರಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರುಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದಾರೆ.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ವಿಶಿಷ್ಟವಾಗಿ ವಿನೂತನ ಮಾದರಿಯಲ್ಲಿ “ಐತಿಹಾಸಿಕ ಬಳ್ಳಾರಿ ಬೆಟ್ಟದ ಕಡೆಗೆ ಸಂವಿಧಾನದ ನಡಿಗೆ” ಎಂಬ ಶೀರ್ಷಿಕೆಯಡಿ ಜಿಲ್ಲಾಡಳಿತದ ವತಿಯಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರ ನೇತೃತ್ವದಲ್ಲಿ ಐತಿಹಾಸಿಕ ಬಳ್ಳಾರಿ ಬೆಟ್ಟದ ತುದಿಗೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾಲ್ನಡಿಗೆಯಲ್ಲಿ ತೆರಳಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಗಿದೆ. ಈ ವಿಶಿಷ್ಟ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.

ಫೆ.16 ರಂದು ‘ಚಿತ್ರಕಲಾ ಪ್ರದರ್ಶನ’:
ಜಿಲ್ಲೆಯಲ್ಲಿ ‘ಸಂವಿಧಾನ ಜಾಗೃತಿ ಜಾಥಾ’ ಸಂಚಾರ ಹಿನ್ನಲೆಯಲ್ಲಿ ವಿವಿಧ ಶಾಲಾ-ಕಾಲೇಜು ವಿಭಾಗದಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲು ಇದೇ ಫೆ.16 ರಂದು ನಗರದ ವಾಲ್ಮೀಕಿ ಭವನದಲ್ಲಿ ‘ಚಿತ್ರಕಲಾ ಪ್ರದರ್ಶನ’ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
“ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾದ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ವೀಕ್ಷಿಸಿ ಲೈಕ್, ಶೇರ್ ಮತ್ತು ಕಾಮೆಂಟ್‍ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ಸತೀಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here