ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್.ಗಿರೀಶ್ ಸಲಹೆ ಸಾಂಕ್ರಾಮಿಕ ರೋಗಗಳ ಮುಕ್ತಿಗೆ ಸ್ವಚ್ಛತೆ ಕಾಪಾಡಿಕೊಳ್ಳಿ

0
326

ದಾವಣಗೆರೆ ಜು.24.ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯಾ, ಡೆಂಘೀ ಜ್ವರ ಹಾಗೂ ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಜೊತೆಗೆ ಮನೆಯ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಈ ರೋಗಗಳಿಂದ ದೂರವಿರಬಹುದು ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಹೇಳಿದರು.
ಶುಕ್ರವಾರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಬರುವುದು ಎಲ್ಲರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಇಲ್ಲದೇ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಮಾರಣಾಂತಿಕ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸಾರ್ವಜನಿಕರು ಸ್ವಚ್ಚತೆಯ ಬಗ್ಗೆ ಗಮನಹರಿಸಿದಾಗ ಮಾತ್ರ ನಿಯಂತ್ರಣ ಸಾಧ್ಯವಾಗಿದ್ದು, ಯಾವುದೇ ನಿಯಂತ್ರಣ ಮೊದಲು ನಮ್ಮಿಂದ ಶುರುವಾಗಬೇಕು. ಅಗಾ ಮಾತ್ರ ಯಾವುದೇ ರೋಗವಾದರೂ ನಿಯಂತ್ರಣಕ್ಕೆ ಬರಲು ಸಾಧ್ಯ. ಎಲ್ಲರೂ ಒಂದು ದಿನವನ್ನು ಸ್ವಚ್ಛತಾ ಕಾರ್ಯಕ್ಕೆ ಮೀಸಲಿಟ್ಟು, ಸ್ವಚ್ಛತೆ ಕೈಗೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ಕಚೇರಿಗೆ ಸುಮ್ಮನೆ ಬಂದು ಹೋದರೆ ಕೂಲಿಕಾರರು ಆಗುತ್ತೆವೇ. ಅದರ ಹೊರತಾಗಿ ಸಮಾಜಕ್ಕೆ ಒಳಿತು ಮಾಡುವ ಕೆಲಸ ಮಾಡಬೇಕು. ಮನುಷ್ಯನಿಗೆ ಮಾತ್ರ ಬುದ್ಧಿ ಶಕ್ತಿ, ಆಲೋಚನಾ ಶಕ್ತಿ ಇದೆ. ಅದನ್ನು ಕೆಟ್ಟದಕ್ಕೆ ಬಳಸದೇ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತೆ. ಇದರಿಂದಾಗಿ ಜನರು ನಮ್ಮನ್ನು ಗುರುತಿಸುತ್ತಾರೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸರ್ವ ವ್ಯಾಪಿ ಸಾಂಕ್ರಾಮಿಕ ರೋಗವಾದ ಕೋವಿಡ್-19 ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೇ. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಕೊರೊನಾ ಬಗ್ಗೆ ಯಾವುದೇ ಭಯ ಪಡಬೇಡಬೇಕಿಲ್ಲ. ಆದರೆ ಈ ಕುರಿತು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವ ಅವಶ್ಯಕತೆ ಇದ್ದು, ಕೊರೊನಾ ನಿಯಂತ್ರಿಸಲು ಎಲ್ಲರು ಸಹಕರಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ದೇವರಾಜ್ ಮಾತನಾಡಿ, ಮಲೇರಿಯಾ ನಿರ್ಮೂಲನೆಗೆ ಸಂಪೂರ್ಣವಾಗಿ ಎಲ್ಲರೂ ಸೇರಿ ಸಹಭಾಗಿತ್ವದ ಮೂಲಕ ಸಹಕರಿಸಿದಾಗ ಮಾತ್ರ ಸಾಧ್ಯ ಎಂದರು.
ಜುಲೈ ತಿಂಗಳಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆಯ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಸ್ಫೋಟ ಕಡಿಮೆಯಾಗಲು ಕ್ರಮ ವಹಿಸಬೇಕಾಗಿದ್ದು, ಜನರಲ್ಲಿ ಸಾಕಷ್ಟು ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಮಲೇರಿಯಾ ರೋಗಕ್ಕೆ ಕಾರಣವಾಗುವ ವೈರಸ್, ರೋಗ ಹರಡುವ ಸೊಳ್ಳೆ, ರೋಗದ ಲಕ್ಷಣ ಬಗ್ಗೆ ತಿಳಿದುಕೊಳ್ಳಬೇಕು. ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೊರೊನಾ ನೀಯಂತ್ರಣಕ್ಕೆ ಕ್ಷೇತ್ರ ಮಟ್ಟದಲ್ಲಿ ಅರೋಗ್ಯ ಇಲಾಖೆಯನೊಂದಿಗೆ ಸೇರಿದಂತೆ ವಿವಿಧ ಇಲಾಖೆಗಳು ಕೂಡ ಕೈ ಜೋಡಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿಗಳ ಕಛೇರಿಯ ಎಂಟಮಾಲಜಿಸ್ಟ್ ಸತೀಶ್ ಮಾತನಾಡಿ, ಮಲೇರಿಯಾ ಪ್ರಕರಣಗಳು ಮೊದಲು ಸಾಕಷ್ಟು ಪ್ರಮಾಣದಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಹಲವಾರು ನಿಯಂತ್ರಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಡಿಮೆಯಾಗಿದೆ ಎಂದರು.

ಮಳೆಗಾಲ ಪ್ರಾರಂಭವಾಗಿ ನೀರಿನ ಸಂಗ್ರಹಣೆ ಜಾಸ್ತಿಯಾಗಿ ಅನಾಫಿಲಿಸ್ ಸೊಳ್ಳೆಗಳು ಉತ್ತತಿಯಾಗಿ ಕಚ್ಚುವುದರಿಂದ ಮಲೇರಿಯಾ ರೋಗ ಕಾಣಿಸಿಕೊಳ್ಳುವುದರಿಂದ ಮುಂಚಿತವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲೆಡೆ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಭಾರತ ಸರಕಾರವು 2025 ರ ವೇಳೆಗೆ ದೇಶದಲ್ಲಿ ಮಲೇರಿಯಾ ನಿರ್ಮೂಲನೆ ಮಾಡುವ ಯೋಜನೆಯನ್ನು ಹಾಕಿ ಕೊಂಡಿದೆ. ಅರೋಗ್ಯ ಇಲಾಖೆಯು ಹಮ್ಮಿಕೊಂಡಿರುವ ಹಲವಾರು ನಿಯಂತ್ರಣ ಕ್ರಮಗಳೊಂದಿಗೆ ಇತರೆ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವ ವಹಿಸುವುದು ಬಹಳ ಅವಶ್ಯಕವಾಗಿದೆ ಎಂದರು.

ಮಲೇರಿಯಾ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಕಂಡು ಬರುತ್ತದೆ. ಈ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಈ ರೋಗವನ್ನು ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಮಲೇರಿಯಾ ಪರೀಕ್ಷೆ ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ಬಹಳಷ್ಟು ಕಡಿಮೆ. ಸ್ಥಳೀಯವಾಗಿ ಯಾವುದೇ ಪ್ರಕರಣ ಇಲ್ಲ. ವಲಸೆ ಹೋಗಿ ಬಂದ ಕಾರ್ಮಿಕರಲ್ಲಿ ಮಾತ್ರ ಕಂಡು ಬಂದಿದೆ. ಹೋದ ವರ್ಷ 8 ಪ್ರಕರಣ ಕಂಡು ಬಂದಿದ್ದವು. ಈ ವರ್ಷ ಜನವರಿ ತನಕ 2 ಪ್ರಕರಣ ಕಂಡು ಬಂದಿದೆ. ದಾವಣಗೆರೆ ಜಿಲ್ಲೆ ಮಲೇರಿಯಾ ಮುಕ್ತಕ್ಕೆ ಬಹಳ ಹತ್ತಿರ ಇದೆ. ಈ ಹಿನೆನಲೆಯಲ್ಲಿ ಸ್ಥಳೀಯ ಪ್ರಕರಣಗಳು ಸಂಭವಿಸದಂತೆ ಸಾಕಷ್ಟು ಕ್ರಮ ಕೈಗೊಳ್ಳಬೇಕು ಎಂದರು.
2020ರ ಪ್ರಕರಣಗಳು
ದಾವಗೆರೆ ತಾಲ್ಲೂಕು ದಾವಣಗೆರೆ ಜಿಲ್ಲೆ
ಮಲೇರಿಯಾ 0 2
ಡೆಂಗ್ಯೂ 48 92
ಚಿಕೂನ್ ಗುನ್ಯಾ 12 22

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ವೆಂಕಟಚಲಾ, ಮೀನುಗಾರಿಕೆ ಇಲಾಖೆಯ ಡಾ.ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕರು, ಕೀಟ ಶಾಸ್ತ್ರಜ್ಞರು ಮತ್ತಿತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here