ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳಿಂದ ಜಂಟಿ ಸಮಾಲೋಚನಾ ಸಭೆ,ಸರ್ಕಾರಿ ನೌಕರರಿಗೆ ಗೃಹ ನಿರ್ಮಾಣ ಮಾಡಲು ಮನವಿ

0
50

ದಾವಣಗೆರೆ ಸೆ.09:-ಜಿಲ್ಲೆಯಲ್ಲಿ ಈಗಾಗಲೇ ಶಿಥಿಲಗೊಂಡಿರುವ ವಸತಿ ಗೃಹಗಳನ್ನು ನೆಲಸಮಗೊಳಿಸಿ, ನೂತನವಾಗಿ ವಸತಿ ಗೃಹಗಳ ಸಮುಚ್ಚಯವನ್ನು ನಿರ್ಮಿಸಲು ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳ ಜಂಟಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಈಗಾಗಲೇ ಶಿಥಿಲಗೊಂಡಿರುವ ವಸತಿ ಗೃಹಗಳನ್ನು ನೆಲಸಮಗೊಳಿಸಿ, ನೂತನ ವಸತಿ ಗೃಹ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ, ಪ್ರತಿನಿತ್ಯ ನೂರಾರು ಸಾರ್ವಜನಿಕರು ಕಚೇರಿಗೆ ಆಗಮಿಸುತ್ತಾರೆ ಮತ್ತು ಆವರಣದಲ್ಲಿ ಹೆಚ್ಚಾಗಿ ಮಳೆ ನೀರು ನಿಲ್ಲುತ್ತಿದೆ. ಈ ಕುರಿತು ಸಮಸ್ಯೆ ಪರಿಹರಿಸಲು ಗಮನ ಹರಿಸಬೇಕು. ಕೆ.ಆರ್ ರಸ್ತೆಯ ಬಳಿ ಇರುವ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿಯೂ ಕೂಡ ಶೌಚಾಲಯ ಸಮಸ್ಯೆ ಇದ್ದು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್-19 ನಿಂದಾಗಿ ಮೃತಪಟ್ಟ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನ ಇದುವರೆಗೂ ಮೃತ ನೌಕರರ ವಾರಸುದಾರರಿಗೆ ತಲುಪಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಲೆಕ್ಕ ಶೀರ್ಷಿಕೆ (02-03) ಸಿಬ್ಬಂದಿಗಳ ವೇತನ ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಕ್ಷೇತ್ರ ಕಾರ್ಯ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್‍ನಿಂದ ವಿನಾಯಿತಿ ನೀಡುವ ಬಗ್ಗೆ ಸ್ವಯಂ ಚಾಲಿತ ವೇತನ ಬಡ್ತಿ ಹಾಗೂ ಇಲಾಖಾ ವಿಚಾರಣೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವುದು. ಕೋವಿಡ್-19 ಪೆÇ್ರೀತ್ಸಾಹ ಧನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ನೀಡಿರುವಂತೆ ಕಾರ್ಮಿಕ ವಿಮಾ ಆಸ್ಪತ್ರೆ ಸಿಬ್ಬಂದಿಗಳಿಗೂ ನೀಡುವ ಕುರಿತು ಮತ್ತು ಜಿಲ್ಲೆಯ ಹಲವಾರು ಸರ್ಕಾರಿ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಇಲಾಖೆಗಳ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ನಡೆಸಲು ಮಿನಿ ವಿಧಾನಸೌಧದ ಕಟ್ಟಡ ಮಾದರಿಯಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಆರ್‍ಸಿಹೆಚ್ ಅಧಿಕಾರಿ ಡಾ; ಮೀನಾಕ್ಷಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here