ಜಿಲ್ಲಾಧಿಕಾರಿಯಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ.

0
71

ದಾವಣಗೆರೆ ಅ.07:ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಗುರುವಾರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವೀಕ್ಷಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಗ್ಲಾಸ್‍ಹೌಸ್ ರಸ್ತೆ ಮತ್ತು ರಿಂಗ್ ರಸ್ತೆ, ಈಜು ಕೊಳ, ಹೊಂಡದ ವೃತ್ತದಲ್ಲಿನ ಕಲ್ಯಾಣಿ, ಗಡಿಯಾರ ಕಂಬದ ನವೀಕರಣ ಕಾಮಗಾರಿ, ಗಡಿಯಾರ ಕಂಬದ ಬಳಿಯ ಶಾಲಾ ಕಟ್ಟಡ, ಲಕ್ಷ್ಮಿ ವೃತ್ತದ ಚರಂಡಿ ಕಾಮಗಾರಿ, ಹಳೇ ಬಸ್ ನಿಲ್ದಾಣ ಮತ್ತು ಕೆ.ಎಸ್.ಆರ್.ಟಿ.ಸಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟ ಕಾಪಾಡುವ ಜೊತೆಗೆ ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿದ್ದವೀರಪ್ಪ ಬಡಾವಣೆಯ 3ನೇ ಕ್ರಾಸ್ ಬಳಿಯ ರಿಂಗ್ ರಸ್ತೆ ಕಾಮಗಾರಿ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಬಾಲಾಜಿ ಬಡಾವಣೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿವಗಂಗೆ ಕಲ್ಯಾಣ ಮಂಟಪದ ಬಳಿ ಉಂಟಾಗಿದ್ದ ಅಡೆತಡೆಗಳ ಕುರಿತು ಮಾಹಿತಿ ಪಡೆದು ತೆರವಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಮನೂರು ರಸ್ತೆಯಲ್ಲಿನ ಚೌಡೇಶ್ವರಿ ದೇವಸ್ಥಾನದಿಂದ ಗ್ಲಾಸ್ ಹೌಸ್‍ಗೆ ನೇರ ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ನಿವೇಶನ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ ಮಲ್ಲಾಪುರ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here