ಖಾಸಗಿ ಅನುದಾನರಹಿತ ಶಾಲೆಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಭೋಧನಾ ಶುಲ್ಕವನ್ನು ಹೆಚ್ಚಿಸಬಾರದು ; ಪಡೆಯುತ್ತಿರುವ ಶುಲ್ಕವನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು – ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
110

ಧಾರವಾಡ ಆ.27: ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳು ಕಳೆದ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಭರಿಸಿಕೊಂಡ ಭೋಧನಾ ಶಾಲಾ ಶುಲ್ಕದಷ್ಟೇ ಈ ಪ್ರಸ್ತುತ ಸಾಲಿಗೂ ಭರಿಸಿಕೊಳ್ಳಬೇಕೆಂದು ಸರ್ಕಾರ ಆದೇಶಿಸಿದ್ದು, ಅದರಂತೆ ಯಾವುದೇ ಶಾಲೆಗಳು ಫೀ ಹೆಚ್ಚಳ ಮಾಡದೇ ಹಿಂದಿನ ವರ್ಷದಷ್ಟೇ ಭೋಧನಾ ಶುಲ್ಕವನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಡೆರಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಪೋಷಕ- ಪಾಲಕರ ಸಂಘಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿವಿಧ ಶಾಲೆಗಳು 2020-21 ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶ, ಭೋಧನಾ ಶುಲ್ಕ ಸೇರಿದಂತೆ ಇತರೆ ವಿಭಾಗಗಳಡಿ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳ ಪಾಲಕರಿಂದ ಭರಿಸಿಕೊಳ್ಳಲು ಒತ್ತಾಯಿಸುತ್ತಿವೆ ಎಂದು ಡೆರಾ ಸಮಿತಿಗೆ ದೂರುಗಳು ಬಂದಿವೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿಗೆ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡದೇ ಕಳೆದ ಸಾಲಿನ ಶುಲ್ಕದಷ್ಟೆ ಭರಿಸಿಕೊಳ್ಳಲು ನಿರ್ದೇಶಿಸಿದೆ. ಶಿಕ್ಷಣ ಇಲಾಖೆಯ ನಿರ್ದೇಶನದಂತೆ 2020-21ನೇ ಸಾಲಿನಲ್ಲಿ ಪಡೆಯುತ್ತಿರುವ ಶುಲ್ಕವನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲು ಹಾಗೂ ಸರ್ಕಾರದ ಆದೇಶದಂತೆ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಭೋಧನಾ ಶುಲ್ಕವನ್ನು ಹೆಚ್ಚಿಸಬಾರದು. ಆದ್ದರಿಂದ ಎಲ್ಲಾ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರು ಈ ಆದೇಶವನ್ನು ಪಾಲಿಸಬೇಕು. ಈ ಕುರಿತು ದೂರುಗಳು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹೇಳಿದರು.

ಧಾರವಾಡದ ಬಾಸೆಲ್ ಮಿಷನ್ ಹೈಯರ್ ಎಜ್ಯಕೇಷನ್ ಸೆಂಟರ್‍ನ ಅಧ್ಯಕ್ಷರು ಹಾಗೂ ಮಿತ್ರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸಭೆಗೆ ಹಾಜರಿರದೇ ಸೂಕ್ತ ಮಾಹಿತಿಯನ್ನು ನೀಡದಿರುವುದರಿಂದ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸದರಿ ಸಂಸ್ಥೆಗಳ, ಶಾಲೆಗಳ ಪ್ರಸಕ್ತ ಸಾಲಿನ ಅಂದರೆ 2020-21ನೇ ಸಾಲಿನ ಮಾನ್ಯತೆಯನ್ನು ರದ್ದುಪಡಿಸುವಂತೆ ಆದೇಶಿಸಲು ಸೂಚಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರದ ಆದೇಶದಂತೆ ಸೇವಾ ಭದ್ರತೆ ಹಾಗೂ ಕನಿಷ್ಠ ಮೂಲ ವೇತನ ನೀಡುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್. ಹಂಚಾಟಿ ಸ್ವಾಗತಿಸಿ, ವಿವಿಧ ಶಾಲೆಗಳ ಶುಲ್ಕ, ಸೇವಾಭದ್ರತೆ ಕುರಿತು ಸ್ವೀಕೃತಗೊಂಡ ದೂರುಗಳನ್ನು ಸಭೆಗೆ ವಿವರಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸೇಂಟ್ ಅಂಥೋನಿ ಪಬ್ಲಿಕ ಶಾಲೆಯ ಆಡಳಿತ ಮಂಡಳಿ, ಮಿತ್ರ ಶಿಕ್ಷಣ ಸಂಸ್ಥೆಯ ಪ್ರತಿನಿಧಿ, ಬಾಸೆಲ್ ಮಿಷನ್ ಶಿಕ್ಷಣ ಸಂಸ್ಥೆಯ ಪ್ರತಿನಿಧಿ, ದೂರುದಾರರಾದ ರಂಗರೆಡ್ಡಿ ಹಾಗೂ ರಂಜನ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here