ಭಾರಿ ಮಳೆ ಮತ್ತು ಗಾಳಿಗೆ ಬಿದ್ದ ಮರ ತೆರವು: ಪ್ರಭಾಕರನ್

0
97

ಮಡಿಕೇರಿ ಆ.31-ಅರಣ್ಯ ಸಂರಕ್ಷಣೆ ನಮ್ಮೆಲರ ಹೊಣೆ. ಅರಣ್ಯವಿದ್ದರೆ ಮಾತ್ರವೇ ಕಾಡಿನಲ್ಲಿ ಪ್ರಾಣಿಗಳು ಮತ್ತು ನಾಡಿನಲ್ಲಿ ಮನುಷ್ಯರು ಸಮೃದ್ಧಿಯಿಂದ ಬಾಳಲು ಸಾಧ್ಯ. ಇಂತಹ ಪ್ರಕೃತಿ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದರೂ ಸಹ ಅರಣ್ಯ ಇಲಾಖೆ ಈ ಕಾರ್ಯವನ್ನು ಬಹು ಮುತುವರ್ಜಿಯಿಂದ ನಿರ್ವಹಿಸುತ್ತಿದೆ.

ಕೊಡಗು ಜಿಲ್ಲೆ ಸ್ವಾಭಾವಿಕವಾಗಿಯೇ ಪ್ರಕೃತಿ ಸಿರಿಯ ತವರೂರು. ವಿವಿಧ ಬಗೆಯ ಪ್ರಾಣಿ, ಪಕ್ಷಿ ಮರ ಗಿಡಗಳ ಆವಾಸ ಸ್ಥಾನವೂ ಸಹ ಆಗಿದೆ. ಆದರೆ ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಪ್ರವಾಹ, ಬೆಟ್ಟ ಕುಸಿತದಂತಹ ಪ್ರಕರಣಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಈ ನಿಟ್ಟಿನಲ್ಲಿ ಅರಣ್ಯವನ್ನು ಮಾತ್ರವಲ್ಲದೇ ಪ್ರಾಕೃತಿಕ ವಿಕೋಪ ನಿರ್ವಹಣೆಯ ಕಾರ್ಯವನ್ನೂ ಸಹ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ನಿರ್ವಹಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಉಂಟಾದಂತಹ ಪ್ರಾಕೃತಿಕ ವಿಕೋಪ ಮತ್ತು ಅದರ ನಿರ್ವಹಣೆಯ ಅನುಭವದಿಂದಾಗಿ ಅರಣ್ಯ ಇಲಾಖೆ ಈ ಬಾರಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಹಾನಿ ಸಂಭವಿಸದಂತೆ ಕ್ರಮ ವಹಿಸಲಾಗಿತ್ತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ರಸ್ತೆ ಬದಿಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಮತ್ತು ಸಾರ್ವಜನಿಕ ಸಂಚಾರದ ಸ್ಥಳಗಳಲ್ಲಿ ಸಾಕಷ್ಟು ಮರಗಳು ಧರೆಗುರುಳಿದೆ ಎಂದರು.

ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಕೆಲಸ ನಿರ್ವಹಣೆ ಸಾಕಷ್ಟು ಸವಾಲಿನದಾಗಿರುತ್ತದೆ. ಕಳೆದ 2 ವರ್ಷಗಳಲ್ಲಿನ ಅನುಭವದ ಮೇಲೆ, ಈ ಬಾರಿ ಹಲವಾರು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಅಲ್ಲದೆ ಸಾರ್ವಜನಿಕ ರಸ್ತೆ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದಂತಹ ಮರಗಳನ್ನು ತೆರವುಗೊಳಿಸುವುದು ಇಲಾಖೆಯ ಆದ್ಯ ಕೆಲಸವಾಗಿತ್ತು ಎಂದರು.

ಈ ನಿಟ್ಟಿನಲ್ಲಿ ಪ್ರತಿ ರೇಂಜ್‍ಗೂ ಸಹ ಅರಣ್ಯ ರಕ್ಷಕರನ್ನು ಒಳಗೊಂಡಂತೆ 3 ತಂಡ ರಚಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 33 ತಂಡಗಳು ಮರ ಬಿದ್ದಂತಹ ಸಂದರ್ಭದಲ್ಲಿ ಶೀಘ್ರ ತೆರವುಗೊಳಿಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪ್ರತಿ ತಂಡದಲ್ಲಿಯೂ ಸಹ 7-8 ಮಂದಿ ಸಿಬ್ಬಂದಿಗಳಿದ್ದು 1 ವಾಹನವನ್ನೂ ಸಹ ನೀಡಲಾಗಿತ್ತು. ಈ ತಂಡಗಳ ಮೇಲುಸ್ತುವಾರಿಯನ್ನು ಸಂಬಂಧಪಟ್ಟ ರೇಂಜರ್‍ಗಳಿಗೆ ನೀಡಲಾಗಿತ್ತು. ಜೊತೆಗೆ ರ್ಯಾಪಿಡ್ ರೆಸ್ಪಾನ್ಸ್ ಟೀಂ ಸಹ ಮಡಿಕೇರಿಯ 6 ಮತ್ತು ವಿರಾಜಪೇಟೆಯ 5 ರೇಂಜ್‍ಗಳಲ್ಲಿ ಕ್ಷಿಪ್ರ ಗತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಈ ಬಾರಿ ವಿರಾಜಪೇಟೆ ಭಾಗದಲ್ಲಿ ಕುಟ್ಟ ಮತ್ತು ಪೊನ್ನಂಪೇಟೆ ಹಾಗೂ ಮಡಿಕೇರಿ ಭಾಗದಲ್ಲಿ ಕುಶಾಲನಗರ, ಸೋಮವಾರಪೇಟೆಯಲ್ಲಿ ಹೆಚ್ಚಿನ ಮರಗಳು ಹಾನಿಯಾಗಿದ್ದು,, ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಅವರ ಕಂಟ್ರೋಲ್ ರೂಂ ಮತ್ತು ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಬಂದ ಕೂಡಲೇ 15 ರಿಂದ 20 ನಿಮಿಷದೊಳಗಾಗಿ ಮರ ಬಿದ್ದ ಸ್ಥಳಕ್ಕೆ ಅರಣ್ಯ ಇಲಾಖೆಯ ತಂಡದ ಸದಸ್ಯರು ತಕ್ಷಣವೇ ತೆರಳಿ ಮರ ತೆರವುಗೊಳಿಸಿ ಸುಗಮ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ತಂಡದ ಸದಸ್ಯರೊಂದಿಗೆ ವ್ಯಾಟ್ಸಪ್ ಗ್ರೂಪ್ ಮಾಡಿಕೊಂಡು ಆ ಮೂಲಕ ತೆರವು ಕಾರ್ಯದ ಮಾಹಿತಿ ಪಡೆಯಲಾಗುತ್ತಿತ್ತು ಎಂದು ಪ್ರಭಾಕರನ್ ಅವರು ತಿಳಿಸಿದರು.

ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಮತ್ತು ಅಗತ್ಯ ಸಲಕರಣೆಗಳನ್ನು ಪೂರೈಸಲಾಗಿತ್ತು. ಜಿಲ್ಲಾಡಳಿತವೂ ಸಹ ಈ ಸಂದರ್ಭ ನಿರ್ವಹಣೆಯ ಸಲುವಾಗಿ ಅಗತ್ಯ ಯಂತ್ರೋಪಕರಣಗಳು, ಸಿಬ್ಬಂದಿಗಳಿಗೆ ರೈನ್‍ಕೋಟ್, ಗಂಬೂಟುಗಳನ್ನು ನೀಡಿತ್ತು. ದಿನದ 24 ಗಂಟೆಯೂ ಸಹ ಅರಣ್ಯ ಇಲಾಖೆಯ ತಂಡ ದಣಿವರಿಯದೆ ಕೆಲಸ ನಿರ್ವಹಿಸಿದೆ ಎಂದು ಪ್ರಭಾಕರನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಗಜಗಿರಿ ಬೆಟ್ಟದಲ್ಲಿ ಉಂಟಾದ ಭೂಕುಸಿತ ಸಂದರ್ಭ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡದವರೊಂದಿಗೆ ಅರಣ್ಯ ಇಲಾಖೆಯೂ ಸಹ ಕಾರ್ಯನಿರ್ವಹಿಸಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಪತ್ತೆ ಕಾರ್ಯಾಚರಣೆ ಸಂದರ್ಭ ರಸ್ತೆಗಳ ನಿರ್ವಹಣೆಯಲ್ಲಿಯೂ ಸಹ ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಒಂದು ಶವ ಪತ್ತೆ ಹಚ್ಚುವಲ್ಲಿಯೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಅಮೂಲ್ಯವಾದ ಕಾರ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ತಿಳಿಸಿದರು.

ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಸಿಬ್ಬಂದಿಗಳ ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾಕೃತಿಕ ಸಂದರ್ಭ ಸಾರ್ವಜನಿಕರ ಮತ್ತು ಸಾರಿಗೆ ಸಂಚಾರಕ್ಕೆ ಅವಕಾಶ ನೀಡುವಲ್ಲಿ ಹಗಲಿರುಳು ಶ್ರಮಿಸಿದೆ. ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಂತಹ ವೇಳೆಯಲ್ಲಿಯೂ ಸಹ 24 ಗಂಟೆಗಳ ಕಾಲವೂ ತೆರವು ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

LEAVE A REPLY

Please enter your comment!
Please enter your name here