ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಪಾರ್ಕಿಂಗ್‍ಗೆ ನಿಗದಿಪಡಿಸಿದ ಸ್ಥಳ ಬೇರೆ ಉದ್ದೇಶಕ್ಕೆ ಬಳಸಿದ್ದಲ್ಲಿ ಕಟ್ಟಡ ತೆರವುಗೊಳಿಸಿ- ಮಹಾಂತೇಶ್ ಬೀಳಗಿ

0
103

ದಾವಣಗೆರೆ ನ. 05 ಬೃಹತ್ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಅನುಮತಿ ಪಡೆಯುವಾಗ ನಕ್ಷೆಯಲ್ಲಿ ಪಾರ್ಕಿಂಗ್ ಸ್ಥಳ ಎಂದು ನಿಗದಿಪಡಿಸಿಕೊಂಡು, ಬಳಿಕ ಈ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಕೆಯಾಗಿರುವುದು ಕಂಡುಬಂದಲ್ಲಿ ಅಂತಹ ಸ್ಥಳವನ್ನು ಕೂಡಲೆ ತೆರವುಗೊಳಿಸಬೇಕು, ಕಟ್ಟಡ ಕೆಡವುದು ಅಗತ್ಯಬಿದ್ದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಪ್ರತಿಷ್ಠಿತ ಅಂಗಡಿಗಳು, ಹೋಟೆಲ್‍ಗಳು ಸೇರಿದಂತೆ ಬೃಹತ್ ಕಟ್ಟಡಗಳ ಎದುರು ಪಾರ್ಕಿಂಗ್‍ಗೆ ಸ್ಥಳವಿಲ್ಲದೆ ಜನರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಹೀಗಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ಟ್ರಾಫಿಕ್ ಪೊಲೀಸರು ವಾಹನದಟ್ಟಣೆ ತೆರವುಗೊಳಿಸಲು ನಿತ್ಯವೂ ಪರದಾಡುತ್ತಿರುವುದು ಕಂಡುಬರುತ್ತಿದೆ. ನಗರದ ಪಿಜೆ ಬಡಾವಣೆಯ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಇಲ್ಲಿನ ಕ್ಲಿನಿಕ್ ಹಾಗೂ ಲ್ಯಾಬ್‍ಗಳಲ್ಲಿನ ವೈದ್ಯರು, ಸಿಬ್ಬಂದಿಗಳು ತಮ್ಮ ಕಾರುಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿರುವುದರಿಂದ ಆಟೋ ಹಾಗೂ ವಾಹನ ಚಾಲಕರು, ಪಾದಚಾರಿಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ನಗರದಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ, ಕಟ್ಟಡದ ನಕ್ಷೆಯಲ್ಲಿ ಪಾರ್ಕಿಂಗ್ ಸ್ಥಳ ಎಂದು ನಿಗದಿಪಡಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರುತ್ತಾರೆ. ಬಳಿಕ ಈ ಸ್ಥಳವನ್ನು ಇತರೆ ಉದ್ದೇಶಕ್ಕೆ ಬಳಸಿಕೊಂಡು ಪಾರ್ಕಿಂಗ್‍ಗೆ ಸ್ಥಳಾವಕಾಶ ಆಗದಂತೆ ಮಾಡಿಕೊಂಡಿರುವ ಸಾಧ್ಯತೆಗಳಿವೆ.. ಅಂತಹ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ತಾವಾಗಿಯೇ ಈ ಸ್ಥಳವನ್ನು ತೆರವುಗೊಳಿಸಿ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಟ್ಟಡವನ್ನೇ ನೆಲಸಮ ಮಾಡಬೇಕಾಗುತ್ತದೆ. ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ನಗರದಲ್ಲಿ ಪರಿವೀಕ್ಷಣೆ ನಡೆಸಿ, ಪ್ರಮುಖ ರಸ್ತೆಗಳಲ್ಲಿನ ಬೃಹತ್ ಕಟ್ಟಡಗಳು, ಹೋಟೆಲ್‍ಗಳು, ಕಾಂಪ್ಲೆಕ್ಸ್‍ಗಳು ಪಾರ್ಕಿಂಗ್ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಲ್ಲಿ ಕೂಡಲೆ ಅಂತಹ ಸ್ಥಳವನ್ನು ತೆರವುಗೊಳಿಸಬೇಕು, ಅಗತ್ಯ ಬಿದ್ದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡ ತೆರವಿಗೆ ಮುಂದಾಗಬೇಕು ಎಂದು ತಾಕೀತು ಮಾಡಿದ ಜಿಲ್ಲಾಧಿಕಾರಿಗಳು, ನಗರದ ಪಿಜೆ ಬಡಾವಣೆಯಲ್ಲಿ ಕ್ಲಿನಿಕ್‍ಗಳ ವೈದ್ಯರು, ಸಿಬ್ಬಂದಿಗಳು ರಸ್ತೆಯಲ್ಲಿಯೇ ಕಾರುಗಳನ್ನು ಪಾರ್ಕಿಂಗ್ ಮಾಡಿ, ತೊಂದರೆ ಉಂಟುಮಾಡುತ್ತಿದ್ದಲ್ಲಿ, ಕೂಡಲೆ ಅಂತಹವರ ವಿರುದ್ಧ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮಾತನಾಡಿ, ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ಹೆಚ್ಚು ಹೆಚ್ಚು ಜನರು ಭೇಟಿ ಮಾಡುವಂತಹ ಕಟ್ಟಡಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಪಾರ್ಕಿಂಗ್ ಹಾಗೂ ಭದ್ರತಾ ವ್ಯವಸ್ಥೆ ಮಾಡುವುದು ಆಯಾ ಕಟ್ಟಡಗಳ ಮಾಲೀಕರ ಜವಾಬ್ದಾರಿಯಾಗಿದೆ ಎಂದರು.

ತಂಗುದಾಣಗಳ ಅಧಿಸೂಚನೆ :
ನಗರದ ವಿವಿಧೆಡೆ ರಸ್ತೆಗಳಲ್ಲಿ ಸರಕು ಸಾಗಾಣಿಕೆ ಹಾಗೂ ಆಟೋ ತಂಗುದಾಣಗಳನ್ನು ಗುರುತಿಸಿ, ಅಲ್ಲಿ ಫಲಕ ಅಳವಡಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಆರ್‍ಟಿಒ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ, ತಂಗುದಾಣ ಅಗತ್ಯ ಇರುವ ಹಾಗೂ ಸೂಕ್ತ ಎನಿಸುವ ಸ್ಥಳಗಳನ್ನು ಗುರುತಿಸಿ ವರದಿ ನೀಡಿದಲ್ಲಿ, ತಂಗುದಾಣಗಳ ಸ್ಥಳವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು. ಬಳಿಕ ಈ ತಂಗುದಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಾರ್ಯವನ್ನು ಮಹಾನಗರಪಾಲಿಕೆ ಅಧಿಕಾರಿಗಳು ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಟ್ರ್ಯಾಕ್ಟರ್, ಎತ್ತಿನಗಾಡಿಗಳಿಂದ ಅಪಾಯ :
ಕುಕ್ಕವಾಡ, ಹದಡಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕಬ್ಬು ಮತ್ತಿತರ ಕೃಷಿ ಸಾಮಗ್ರಿಗಳನ್ನು ಸಾಗಿಸುವ ಟ್ರ್ಯಾಕ್ಟರ್‍ಗಳು, ಕತ್ತಲಿನಲ್ಲಿ ಸಂಚರಿಸುವ ಎತ್ತಿನ ಗಾಡಿಗಳು ಸಂಚರಿಸುತ್ತವೆ. ಟ್ರ್ಯಾಕ್ಟರ್‍ಗಳು, ಟ್ರೇಲರ್‍ಗಳು ಹಾಗೂ ಎತ್ತಿನ ಗಾಡಿಗಳಿಗೆ ಯಾವುದೇ ರಿಫ್ಲೆಕ್ಟರ್ ಇಲ್ಲದೇ ಇರುವುದರಿಂದ ರಾತ್ರಿ ವೇಳೆ ಇವು ಸಂಚರಿಸುವ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಈಗಾಗಲೆ ಇದೇ ಕಾರಣಗಳಿಗಾಗಿ ಹಲವು ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸಭೆಯಲ್ಲಿ ಪ್ರಸ್ತಾಪಿಸಿ, ಇಂತಹ ದುರ್ಘಟನೆಗಳನ್ನು ತಪ್ಪಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ಟ್ರ್ಯಾಕ್ಟರ್, ಟ್ರೇಲರ್, ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಳವಡಿಕೆ ಅಥವಾ ರಿಫ್ಲೆಕ್ಟರ್ ಪೇಂಟ್ ಮಾಡಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು. ಟ್ರ್ಯಾಕ್ಟರ್, ಟ್ರೇಲರ್‍ಗಳಿಗೆ ಇದರ ಅಳವಡಿಕೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಡ್ಡಾಯಗೊಳಿಸಿ, ಜಾರಿಗೊಳಿಸಬೇಕು ಎಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ವಾಹನ ಮಾಲೀಕರು, ಚಾಲಕರ ಸಂಘಗಳು ಇಂತಹ ಕಾರ್ಯಗಳಿಗೆ ಸಹಕಾರ ನೀಡಿ, ಜಾಗೃತಿ ಮೂಡಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದರು.

ಬೀದಿ ದೀಪ ವ್ಯವಸ್ಥೆ :
ನಗರದ ವಿದ್ಯಾರ್ಥಿ ಭವನದಿಂದ ವಿದ್ಯಾನಗರ, ಹದಡಿ ರಸ್ತೆಯವರೆಗಿನ ಮಾರ್ಗದಲ್ಲಿ ಒಂದೇ ಒಂದು ಬೀದಿ ದೀಪ ಇಲ್ಲ, ರಾತ್ರಿ ವೇಳೆ ಸಾರ್ವಜನಿಕರು, ಮಹಿಳೆಯರು ಓಡಾಡುವುದು ತೀವ್ರ ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು, ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಮಾರ್ಗ ಮಾತ್ರವಲ್ಲ, ನಗರದಲ್ಲಿ ಯಾವುದೇ ರಸ್ತೆಗಳಲ್ಲಿ ಬೀದಿ ದೀಪ ವ್ಯವಸ್ಥೆ ಇಲ್ಲದೇ ಇದ್ದಲ್ಲಿ, ಅಂತಹವುಗಳನ್ನು ಗುರುತಿಸಿ, ಕೂಡಲೆ ಬೀದಿ ದೀಪ ಅಳವಡಿಕೆ ಆಗಬೇಕು. ಇದಕ್ಕೆ ಕಾಲಮಿತಿ ನಿಗದಿಪಡಿಸಿಕೊಂಡು, ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಅಧಿಕಾರಗಳಿಗೆ ಸೂಚನೆ ನೀಡಿದರು.

ಟ್ರಕ್ ಟರ್ಮಿನಲ್ :
ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಈಗಾಗಲೆ ತಾಲ್ಲೂಕಿನ ಹಳೇ ಬಾತಿ ಗ್ರಾಮ ವ್ಯಾಪ್ತಿಯಲ್ಲಿ 20.13 ಎಕರೆ ಜಾಗವನ್ನು ಗುರುತಿಸಿದ್ದು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಈ ಸ್ಥಳ ಸೂಕ್ತವಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಮುಂದಿನ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ, ಮಹಾನಗರಪಾಲಿಕೆ ಆಯಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ ರವೀಂದ್ರ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here