ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ ಮೊದಲ ಪ್ರಾಧ್ಯಾಪಕರಾಗಿ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ನೇಮಕ

0
107

ಧಾರವಾಡ. ಜ.29: ಕರ್ನಾಟಕ ಸರ್ಕಾರವು 2020-21ನೇ ಆರ್ಥಿಕ ವರ್ಷಕ್ಕೆ ಒಂದು ಕೋಟಿ ರೂ.ಗಳ ಏಕಕಾಲಿಕ ಅನುದಾನದಡಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ್ದು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ಪೀಠದ ಮೊದಲ ಪ್ರಾಧ್ಯಾಪಕರನ್ನಾಗಿ ಕಾನೂನು ತಜ್ಞ, ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ: ಶಿವರಾಜ ವಿ. ಪಾಟೀಲ ಅವರನ್ನು ನೇಮಿಸಿದೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ವಿಜ್ಞಾನೇಶ್ವರ ಅಧ್ಯಯನ ಪೀಠವು ಕಾನೂನು ಮತ್ತು ನ್ಯಾಯಶಾಸ್ತ್ರದ ಜ್ಞಾನಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕಾಣ್ಕೆಯನ್ನು ನೀಡುವ ಸದುದ್ದೇಶವನ್ನು ಹೊಂದಿದೆ. ಈ ಮೂಲಕ ಕರ್ನಾಟಕದ ಸಾಂಸ್ಕøತಿಕ ಹಿನ್ನಲೆ, ಸಾಮಾಜಿಕ ಪರಿವರ್ತನೆ ಮತ್ತು ಮಾನವ ಹಕ್ಕುಗಳ ವಿಸ್ತರಣೆಯ ಬೆಳಕಿನಲ್ಲಿ ಕೌಟುಂಬಿಕ ಮತ್ತು ಸಾರ್ವಜನಿಕ ಕಾನೂನುಗಳನ್ನು ವಿಶ್ಲೇಷಿಸುವ ಕೆಲಸವನ್ನು ಈ ಪೀಠವು ಮಾಡಲಿದೆ. ಈ ಮಹತ್ವದ ಜವಾಬ್ದಾರಿಯನ್ನು ಕಾನೂನು ಸಹೃದಯಿ ಡಾ:ಶಿವರಾಜ ಪಾಟೀಲ ಅವರು ಸಮರ್ಥವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಲಿದ್ದಾರೆ.

ವಿಜ್ಞಾನೇಶ್ವರ ಅಧ್ಯಯನ ಪೀಠ : 12ನೇ ಶತಮಾನದಲ್ಲಿ ಯಾಜ್ಞವಲ್ಕ ಸ್ಮøತಿಗೆ ಮಿತಾಕ್ಷರವೆಂಬ ಭಾಷ್ಯಾ ಗ್ರಂಥವನ್ನು ರಚಿಸಿ ಭಾರತದ ಉದ್ದಗಲಕ್ಕೂ ಹಿಂದೂ ಕಾನೂನಿನ ಸುಧಾರಣೆಗೆ ಕಾರಣಕರ್ತರಾದ ಹಾಗೂ ಕಲಬುರಗಿಯ ಮರ್ತೂರಿನಲ್ಲಿ ಜನಿಸಿ ಚಾಲುಕ್ಯ ಆರನೇ ವಿಕ್ರಮಾದಿತ್ಯರ ಆಸ್ಥಾನ ವಿದ್ವಾಂಸರಾದ ವಿಜ್ಞಾನೇಶ್ವರರ ಹೆಸರನ್ನು ಈ ಪೀಠಕ್ಕೆ ನೀಡಲಾಗಿದೆ.

ಈ ಪೀಠವು ಅನಾದಿಕಾಲದಿಂದ ಹಿಡಿದು ಪ್ರಸ್ತುತ ದಿನಮಾನಗಳವರೆಗೆ ಕಾನೂನು ಮತ್ತು ನ್ಯಾಯಶಾಸ್ತ್ರಕ್ಕೆ ಅಮೂಲ್ಯ ಕೊಡುಗೆಗಳನ್ನಿತ್ತ ಮಹಾನುಭಾವರುಗಳ ಮೇಲೆ ಸಂಶೋಧನೆಯನ್ನು ನಡೆಸುವ, ವಿಶೇಷ ಉಪನ್ಯಾಸಗಳು, ವಿಚಾರ ಸಂಕಿರಣ, ಸಮ್ಮೇಳನÀ, ಸಂಶೋಧನಾ ಕೃತಿಗಳ ರಚನೆ ಮತ್ತು ಕಾನೂನು ಕ್ಷೇತ್ರಕ್ಕೆ ಇತರರು ನೀಡಿದ ಕೊಡುಗೆಗಳನ್ನು ದಾಖಲಿಸುವ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಗುಣಮಟ್ಟದ ಪ್ರಕಾಶನಗಳನ್ನು ಹೊರತರುವ ಕಾರ್ಯಕ್ಕೆ ನಿಯೋಜಿತವಾಗಿದೆ.

ವಿಜ್ಞಾನೇಶ್ವರ ಅಧ್ಯಯನ ಪೀಠದ ಯೋಜನೆಯ ವಿವರ ಹಾಗೂ ಕಾರ್ಯವೈಖರಿಯನ್ನು ಒದಗಿಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ವಿಜ್ಞಾನೇಶ್ವರ ಅಧ್ಯಯನ ಪೀಠ 2020ರ ಉಪಕಾನೂನನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ರಚಿತಗೊಂಡ ಶೋಧನಾ ಸಮಿತಿಯು ಅವಿರೋಧವಾಗಿ ಆಯ್ಕೆ ಮಾಡಿ, ಶಿಫಾರಸ್ಸು ಮಾಡಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಸರ್ವಾನುಮತದಿಂದ ಭಾರತದ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾಗಿರುವ ಡಾ. ಶಿವರಾಜ ವಿ. ಪಾಟೀಲ ಅವರನ್ನು ವಿಜ್ಞಾನೇಶ್ವರ ಅಧ್ಯಯನ ಪೀಠದ ಮೊದಲ ಪ್ರಾಧ್ಯಾಪಕರೆಂದು ನೇಮಕ ಮಾಡಲಾಗಿದೆ.

ವಿಶ್ರಾಂತ ನ್ಯಾಯಮೂರ್ತಿ ಡಾ: ಶಿವರಾಜ ವಿ. ಪಾಟೀಲ : ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಡಾ. ಶಿವರಾಜ ವಿ. ಪಾಟೀಲ ಅವರು 1940ರ ಜನೇವರಿ 12ರಂದು ರಾಯಚೂರು ಜಿಲ್ಲೆಯ ಮಲದಕಲ್ ಎಂಬ ಗ್ರಾಮದಲ್ಲಿ ಜನಿಸಿರುವರು. 1962ರಲ್ಲಿ ಗುಲ್ಬರ್ಗಾದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ, 1979ರವರೆಗೆ ಗುಲ್ಬರ್ಗಾದಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿರುವ ಇವರು ಈ ಅವಧಿಯಲ್ಲಿಯೇ ಗುಲ್ಬರ್ಗಾದ ಪ್ರತಿಷ್ಠಿತ ಶ್ರೀ ಶೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಾಗೂ 1975ರಿಂದ 78ರವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಶಿವರಾಜ ವಿ. ಪಾಟೀಲರವರು 1979ರಲ್ಲಿ ಉಚ್ಚನ್ಯಾಯಾಲಯದಲ್ಲಿ ಪ್ರ್ಯಾಕ್ಟೀಸ್ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿ, ನಂತರದಲ್ಲಿ 29-03-1990ರಂದು ಇವರು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿ, ಆನಂತರ 1994ರಲ್ಲಿ ಮದ್ರಾಸ್ ಉಚ್ಚನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವರ್ಗಾವಣೆಗೊಂಡರು.

1998-99ರ ಮಧ್ಯೆ ಒಂದು ತಿಂಗಳ ಅವಧಿಗೆ ಮದ್ರಾಸ್ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. 22-01-1999ರಂದು ರಾಜಸ್ಥಾನದ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಪೀಠವನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ತದನಂತರ 15-03-2000ದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಾತಿ ಹೊಂದಿ ಸೇವೆ ಸಲ್ಲಿಸಿದ್ದಾರೆ.

2005ರ ಜನೇವರಿ 12ರಂದು ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತಿಗೊಂಡ ಇವರು 2005ರ ಫೆಬ್ರುವರಿ 03 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ.

ಬಾಲ್ಯ ವಿವಾಹವನ್ನು ತಡೆಗಟ್ಟಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಸಲಹೆಯ ಮೇರೆಗೆ ಕರ್ನಾಟಕ ಸರ್ಕಾರದಿಂದ ಕೋರ್ ಕಮಿಟಿಯ ಚೇರಮನ್‍ರಾಗಿ ಹಾಗೂ 2-ಜಿ ಸ್ಪೆಕ್ಟ್ರಮ್ ವಿಷಯಕ್ಕೆ ಸಂಬಂಧಿತ ವಿಧಾನವನ್ನು ರಚಿಸಲು ಭಾರತ ಸರ್ಕಾರವು ಮಾಡಿದ ಏಕಸಮಿತಿಯ ರಚನೆಯ ಹಿನ್ನೆಲೆಯಲ್ಲಿ ಇವರು ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ಈ ರೀತಿ ಡಾ. ಶಿವರಾಜ ವಿ. ಪಾಟೀಲರವರು ತಮ್ಮ ಬದುಕಿನುದ್ದಕ್ಕೂ ನ್ಯಾಯಾಂಗ ವ್ಯವಸ್ಥೆಯಲ್ಲಿ ದಣಿವರಿಯದೇ ದುಡಿಯುತ್ತಾ, ತಮ್ಮೊಳಗೆ ಸೃಜನಶೀಲ ಮನಸ್ಸನ್ನು ಸಮಾಜದ ಬಹುಮುಖಿ ಒಳಿತಿಗಾಗಿ ತೊಡಗಿಸಿಕೊಳ್ಳುವಂತೆ ಮಾಡಿದವರು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿರುವ ಡಾ. ಶಿವರಾಜ ವಿ. ಪಾಟೀಲರಿಗೆ ಇಂಡಿಯನ್ ಕೌನ್ಸಿಲ್ ಆಫ್ ಜಸ್ಟೀಸ್‍ನಿಂದ ನ್ಯಾಷನಲ್ ಡೇ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಚೇಂಬರ್ ಆಫ್ ಕರ್ನಾಟಕ ಸಂಘ, ಮುಂಬೈಯಿಂದ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ಗೌರವ ಡಾಕ್ಟರೇಟ್, ರಾಜಸ್ಥಾನದ ಜೋಧ್‍ಪುರದಲ್ಲಿರುವ ಆಯ್.ಆಯ್.ಎಸ್. ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಂದ ಡಾ: ಶಿವರಾಜ ಪಾಟೀಲ ಅವರು ಗೌರವಿಸಲ್ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here