ಜಿಲ್ಲೆಯಲ್ಲಿ ಇನ್ನೂ 250 ಆಮ್ಲಜನಕ ಹಾಸಿಗೆ ಹೆಚ್ಚಿಸಲು ಕ್ರಮ: ವಿ.ಸೋಮಣ್ಣ

0
82

ಮಡಿಕೇರಿ ಮೇ 06 :-ಕಫ್ರ್ಯೂ ಜಾರಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ನಗರದ ವೈದ್ಯಕೀಯ ಕಾಲೇಜು, ಸೋಮವಾರ ಪೇಟೆ, ಕುಟ್ಟ, ಪಾಲಿಬೆಟ್ಟ ಸೇರಿದಂತೆ ಇನ್ನೂ ಹಲವು ಕಡೆ ಆಮ್ಲಜನಕ ಹಾಸಿಗೆ ಹೆಚ್ಚಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆ ಸಂಬಂಧಿಸಿದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ನಗರದ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಸೋಮವಾರಪೇಟೆಯಲ್ಲಿ 50, ಪಾಲಿಬೆಟ್ಟದಲ್ಲಿ 20, ಕುಟ್ಟ ಗ್ರಾಮದಲ್ಲಿ 20 ಸೇರಿದಂತೆ ಜಿಲ್ಲೆಯ ಇನ್ನೂ ಹಲವು ಕಡೆ ಆಮ್ಲಜನಕ ಹಾಸಿಗೆ ಹೆಚ್ಚಿಸಲಾಗುವುದು. ಹಾಸಿಗೆ ಕೊರತೆ ಎಂಬುದು ಕೇಳಿ ಬರಬಾರದು ಎಂದರು.
ಕೋವಿಡ್ 19 ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಸ್ ಗಳು ಮತ್ತು 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಲಸಿಕೆ ಕೊರತೆ ಎಂಬುದು ಕೇಳಿ ಬರಬಾರದು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ರೆಮ್‍ಸಿಡಿಮರ್ ಔಷಧಿಯನ್ನು ಹೆಚ್ಚುವರಿಯಾಗಿ ತರಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ 19 ಪರೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಆದರೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗದಂತೆ ಕ್ರಮವಹಿಸಬೇಕು ಎಂದರು.
ವಾರದಲ್ಲಿ ಎರಡು ದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಜಿಲ್ಲೆಯಲ್ಲಿ ಉಳಿದು ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಶ್ರಮಿಸಲಿದ್ದಾರೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಚರ್ಚಿಸಿ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಕೋವಿಡ್ 19 ನಿಯಂತ್ರಣ ಜೊತೆಗೆ ಅಗತ್ಯ ಸಹಕಾರಕ್ಕೆ ಜಿಲ್ಲೆಯಲ್ಲಿನ ರೋಟರಿ, ಲಯನ್ಸ್, ಚೆಂಬರ್ ಆಫ್ ಕಾಮರ್ಸ್ ಹೀಗೆ ಹಲವು ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಜೊತೆ ಕೈಜೋಡಿಸಲು ಮುಂದಾಗಿದ್ದು, ಇಂತಹ ಸಂಸ್ಥೆಗಳಿಗೆ ಅಗತ್ಯ ಸಹಕಾರ ನೀಡುವಂತೆ ವಿ.ಸೋಮಣ್ಣ ಅವರು ಸಲಹೆ ಮಾಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ 13 ಸಾವಿರ ಲೀಟರ್ ಸಾಮಥ್ರ್ಯದ ಆಮ್ಲಜನಕ ಟ್ಯಾಂಕ್‍ಗೆ ಕಾಲಕಾಲಕ್ಕೆ ಆಮ್ಲಜನಕ ಪೂರೈಸುವಲ್ಲಿ ಮುತುವರ್ಜಿ ವಹಿಸಬೇಕು. ಯಾವುದೇ ರೀತಿಯಲ್ಲಿ ಆಮ್ಲಜನಕ ಕೊರತೆ ಉಂಟಾಗಬಾರದು ಎಂದರು.
ಕೋವಿಡ್ 19 ನಿರ್ವಹಣೆ ಸಂಬಂಧ ಜಿಲ್ಲೆಗೆ ಹೆಚ್ಚಿನ ಹಣ ಬೇಕಿದ್ದಲ್ಲಿ ಕೂಡಲೇ ಒದಗಿಸಲಾಗುವುದು. ಸಾರ್ವಜನಿಕರಿಗೆ ಯಾವುದೇರಿಯಲ್ಲಿ ತೊಂದರೆಯಾಗದಂತೆ ಗಮನಹರಿಸುವುದು ಪ್ರಥಮ ಆದ್ಯತೆ ಆಗಬೇಕು. ಆ ದಿಸೆಯಲ್ಲಿ ಎಲ್ಲಾ ಹಂತದ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ವೈದ್ಯರು ಹಾಗೂ ಶ್ರುಶ್ರೂಷಕರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಕೋವಿಡ್ 19 ಪಾಸಿಟಿವ್ ಬಂದವರಿಗೆ ವೈದ್ಯರು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಇದಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಧ್ವನಿಗೂಡಿಸಿದರು.
ಇದುವರೆಗೆ ನಿಮ್ಮ(ವೈದ್ಯರ) ಬೆನ್ನು ತಟ್ಟಿದ್ದೇವೆ. ಅದರಂತೆ ಕರ್ತವ್ಯ ನಿರ್ವಹಿಸಿಕೊಂಡು ಹೋಗಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಕುಡಿಯಲು ಬಿಸಿನೀರು ಮತ್ತು ಬಿಸಿಯಾದ ಊಟ ಪೂರೈಸಬೇಕು. ಯಾವುದೇ ರೀತಿಯ ದೂರುಗಳು ಬರದಂತೆ ಗಮನಹರಿಸಬೇಕು ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೂಚಿಸಿದರು.
ವೈದ್ಯರು ಮತ್ತು ಶ್ರುಶ್ರೂಷಕರ ಕೊರತೆ ಇದ್ದಲ್ಲಿ ನೇಮಕ ಮಾಡಿಕೊಳ್ಳಿ, ಬೆಂಗಳೂರಿನಿಂದ ಸಾಕಷ್ಟು ಶ್ರುಶ್ರೂಷಕರು ಕೊಡಗು ಜಿಲ್ಲೆಗೆ ಆಗಮಿಸಿದ್ದು, ಅಂತವರನ್ನು ನಿಯೋಜನೆ ಮಾಡಿಕೊಳ್ಳಿ ಎಂದು ಸಾಸಕರು ಸಲಹೆ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಬಿಸಿನೀರು ಮತ್ತು ಬಿಸಿಊಟದಲ್ಲಿ ಕೊರತೆಯಾಗದಂತೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.
ಕೋವಿಡ್ 19 ಲಸಿಕೆಯನ್ನು ಸರಿಯಾಗಿ ಅರ್ಹರಿಗೆ ನೀಡಬೇಕು. ಯಾವುದೇ ರೀತಿಯ ದೂರು ಕೇಳಿಬದಂತೆ ಕೋವಿಡ್ ಲಸಿಕೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವ ವಾರಿಯರ್ಸ್‍ಗಳಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು. ಜೊತೆಗೆ ಈಗಾಗಲೇ ಲಸಿಕೆ ಪಡೆದಿರುವವರಿಗೆ ಎರಡನೇ ಹಂತದ ಲಸಿಕೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಕೋವಿಡ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ರೀತಿಯ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು ಎಂದರು.
ಇನ್ನಷ್ಟು ಮಾಹಿತಿ : ಜಿಲ್ಲೆಯ ಜನರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಕೋವಿಡ್ ಸೋಂಕಿನ ಗಾಂಭಿರ್ಯತೆ ಅರಿತುಕೊಂಡು ಪ್ರತಿಯೊಂದು ಹಂತದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-19ರ ಸೋಂಕು ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇತ್ತಿಚಿಗೆ ಹಳ್ಳಿಗಳಿಗೂ ಮಹಾಮಾರಿ ಹಬ್ಬಿದ್ದು ಆಂತಕದ ವಿಷಯವಾಗಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಜನರ ನೇರವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಜಾಗೃತಿವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚುವರಿಯಾಗಿ 150 ಆಮ್ಲಜನಕ ಹಾಸಿಗೆಗಳನ್ನು ಒಂದು ವಾರದೊಳಗೆ ವ್ಯವಸ್ಥೆ ಮಾಡಬೇಕು. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಾಗಿವುದು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಗೆ ಬೇಕಿರುವ ರೆಮ್‍ಡಿಸಿವರ್, ಆಮ್ಲಜನಕ ಸಿಲಿಂಡರ್ ಸೇರಿದಂತೆ ವೈದ್ಯಕೀಯ ಸೌಲಭ್ಯದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಲಾಗುವುದು. ಜನರಿಗೆ ಯಾವುದೇ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸೂಚಿಸಿದರು.
ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದ್ದರೆ ಆರೋಗ್ಯ ಇಲಾಖೆ ತಕ್ಷಣವೇ ಪಾರದರ್ಶಕವಾಗಿ ನೇರ ಸಂದರ್ಶನದ ಮೂಲಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಮಾಡಬಾರದು ಎಂದು ಎಚ್ಚರಿಸಿದರು.
ಕೋವಿಡ್ ಆಸ್ಪತ್ರೆಯಲ್ಲಿ ದಿನದ ಮೂರು ಪಾಳಿಯಲ್ಲಿ ವೈದ್ಯರು ಸೋಂಕತರಿಗೆ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವೈದ್ಯರು ಇರುವುದಿಲ್ಲ ಎಂದು ದೂರು ಬರದಂತೆ ಕಾರ್ಯನಿರ್ವಹಿಸಬೇಕು. ವೈದ್ಯರು ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಹೋಂ ಐಷೋಲೇಶನ್‍ಲ್ಲಿ ಇರುವ ಸೋಂಕಿತರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು, ಇತರರ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಬೇಕು ಮತ್ತು ಅವರಿಗೆ ಸೀಲ್ ಹಾಕುವ ಕಾರ್ಯ ಮಾಡಬೇಕು. ಹೊರಗಡೆ ಓಡಾಡುವ ಸೋಂಕಿತರ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಸಂಸದರಾದ ಪ್ರತಾಪ ಸಿಂಹ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರ ಲೀಟರ್ ಆಮ್ಲಜನಕ ಟ್ಯಾಂಕನ್ನು ಒದಗಿಸಲಾಗಿದೆ. ಪ್ರತಿನಿತ್ಯ ಬೇಕಾದ ಆಮ್ಲಜನಕ ಮಾಹಿತಿ ಅಧಿಕಾರಿಗಳಿಗೆ ಇರಬೇಕು. ಯಾವುದೇ ಕಾರಣಕ್ಕೂ ಆಮ್ಲಜನಕ ಕೊರತೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಪ್ರತಿನಿತ್ಯ ಪರಿಶೀಲನೆ ನಡೆಸಬೇಕು ನಿರ್ದೇಶನ ನೀಡಿದರು.
ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪುವ ಸಂಭವವಿದ್ದು, ಜಿಲ್ಲೆಯಲ್ಲಿನ 5 ತಾಲ್ಲೂಕುಗಳಲ್ಲಿ ತಲಾ 100 ಆಮ್ಲಜನಕ ಹಾಸಿಗೆ ವ್ಯವಸ್ಥೆ ಮಾಡಲು ಬೇಕಾದ ಅಗತ್ಯ ಸಿಲೆಂಡರ್‍ಗಳನ್ನು ದಾಸ್ತಾನು ಮಡಲು ಕ್ರಮವಹಿಸಬೇಕು ಎಂದು ಸಂಸದರು ಹೇಳಿದರು.
ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಮಾತನಾಡಿ ವೈದ್ಯಕೀಯ ಕಾಲೇಜಿನ ಹಾಸಿಗೆಗಳನ್ನು ಬಳಸಿಕೊಂಡು ಹಂತ ಹಂತವಾಗಿ 150 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ವೈದ್ಯಕೀಯ ಕಾಲೇಜಿನಲ್ಲಿ ಮಾಡಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರತಿನಿತ್ಯ 600 ಕಿಂತಲ್ಲೂ ಹೆಚ್ಚಿನ ಕೋವಿಡ್ ಪ್ರಕರಣಗಳು ಬರುತ್ತಿರುವುದರಿಂದ, ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಬೇಕಾಗಿದೆ. ಹಾಗೂ ವೈದ್ಯಕೀಯ ಸಿಬ್ಬಂದಿಗಳು ಮತ್ತು ನರ್ಸ್‍ಗಳನ್ನು ಎಲ್ಲರ ಸಲಹೆ ಪಡೆದು ನೇಮಿಸಿಕೊಳ್ಳಬೇಕು. ಪ್ರತಿ ಪಾಳಿಯಲ್ಲಿ 50 ನರ್ಸ್‍ಗಳು ಇದ್ದರೆ ಪ್ರತಿಯೊಬ್ಬ ಸೋಂಕಿತರ ಆರೈಕೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ 3 ತಾಲ್ಲೂಕು ತಹಶೀಲ್ದಾರ ಮುಖಾಂತರ 130 ಸಿಲಿಂಡರ್‍ಗಳನ್ನು ತಂದು ಡಿಎಚ್‍ಒ ಅವರಿಗೆ ಹಸ್ತಾಂತರಿಸಲಾಗಿದೆ. ಹಾಗೂ ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕಾ ಮಾಲೀಕರ ಜೊತೆ ಚರ್ಚಿಸಿ ಸಿಲಿಂಡರ್‍ಗಳನ್ನು ವಶಕ್ಕೆ ಪಡೆಯಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಹೋಂ ಐಷೋಲೇಶನ್‍ಲ್ಲಿರುವವರು ಮನೆಯಿಂದ ಹೊರಬರದಂತೆ ಕ್ರಮವಹಿಸಬೇಕು. ಹಾಗೂ ಜಿಲ್ಲೆಯ ಗಡಿಭಾಗದಲ್ಲಿನ ಚೆಕ್ ಪೊಸ್ಟ್‍ಗಳಲ್ಲಿ ತಪಾಸಣೆ ಬೀಗಿ ಮಾಡಬೇಕು. ನೆಗೆಟಿವ್ ವರದಿ ಇಲ್ಲದ ಜನರನ್ನು ಜಿಲ್ಲೆಯಲ್ಲಿ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಅವರು ಹೇಳಿದರು.
ನಗರ ಪ್ರದೇಶದಲ್ಲಿ ಹೋಂ ಐಷೋಲೇಶನ್ ನಲ್ಲಿ ಇರುವವರ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಗಮನಕ್ಕೆ ಬಂದಿದ್ದು, ಅವರ ಆರೋಗ್ಯದ ಬಗ್ಗೆ ಪ್ರತಿನಿತ್ಯ ನಿಗಾ ವಹಿಸಬೇಕು. ಸಿಬ್ಬಂದಿಗಳ ಕೊರತೆ ಇದ್ದರೆ ಕಂದಾಯ ಇಲಾಖೆ ಸಹಕಾರ ಪಡೆದುಕೊಂಡು ಕಾರ್ಯನಿರ್ವಹಿಸಭೆಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಕೋಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧೀಕ್ಷಕರಾದ ಡಾ.ಲೋಕೇಶ್, ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ ಡಾ.ಆನಂದ ಸಭೆಯಲ್ಲಿ ಕೋವಿಡ್ 19 ನಿರ್ವಹಣೆ ಸಂಬಂಧ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ (ಪ್ರಭಾರ) ಶ್ರೀನಿವಾಸ್ ಇತತರು ಇದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ ಇತರೆ ಮಾರಾಟ ಸಂಬಂಧ ಮಂಗಳವಾರದ ಬದಲಾಗಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

LEAVE A REPLY

Please enter your comment!
Please enter your name here