19 ತುರ್ತು ಪೊಲೀಸ್ ವಾಹನ ಹಾಗೂ 112 ಸಹಾಯವಾಣಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಸಾರ್ವಜನಿಕರು ಸಹಾಯವಾಣಿಯ ಸದುಪಯೋಗ ಪಡಿಸಿಕೊಳ್ಳಿ: ಸಚಿವ ಆನಂದಸಿಂಗ್

0
108

ಬಳ್ಳಾರಿ,ಮೇ 1 : ಪೊಲೀಸ್ ಇಲಾಖೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಪೊಲೀಸರಿಗೆ ಈ ತುರ್ತು ವಾಹನಗಳು ಮತ್ತಷ್ಟು ಬಲ ತುಂಬುತ್ತವೆ. ಸಾರ್ವಜನಿಕರು ಸಹಾಯವಾಣಿಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ,ವಕ್ಫ್ ಮತ್ತು ಹಜ್ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್,ಅಗ್ನಿ,ವಿಪತ್ತುಗೆ ಸಂಬಂಧಿಸಿದ ತುರ್ತುಪರಿಸ್ಥಿತಿಯಲ್ಲಿ ಇಆರ್ ಎಸ್ ಎಸ್ ಸಹಾಯವಾಣಿ 112 ಕ್ಕೆ ಚಾಲನೆ ಮತ್ತು 19 ಇಆರ್ ಎಸ್ ಎಸ್ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ರೂಪಿಸಿದ ಒಂದು ಅದ್ಭುತ ಯೋಜನೆ ಇದಾಗಿದೆ‌. ಇಡೀ ದೇಶದಲ್ಲಿ ರಾಜ್ಯಕ್ಕೆ ಹೆಚ್ಚಿನ ವಾಹನ ನೀಡಲಾಗಿದ್ದು, ನಮ್ಮ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ವಾಹನಗಳನ್ನು ನೀಡಲಾಗಿದೆ .ಎಲ್ಲಾ ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಮುಕ್ತವಾಗಿ ಬದುಕು ಸಾಗಿಸಲು ಸಹಾಯವಾಣಿ ಮತ್ತು ವಾಹನಗಳ ಮೂಲಕ ಪೊಲೀಸ್ ಇಲಾಖೆ ನೆರವಿಗೆ ಬರಲಿದೆ ಎಂದರು.
ದೇಶದಲ್ಲಿ ನಡೆಯುವ ಕ್ರೈಂ ತಡೆಯುವ ಉದ್ದೇಶದಿಂದ ಈ ಸಹಾಯವಾಣಿಯನ್ನು ಶುರು ಮಾಡಲಾಗಿದೆ. ದೇಶದಾದ್ಯಂತ ಇದು ಕಾರ್ಯರೂಪಕ್ಕೆ ಬರಲಿದೆ. ಬಳ್ಳಾರಿ ಜನರಿಗೆ ಯಾವುದೇ ರೀತಿಯ ತೊಂದರೆಯಾದರೆ ತಕ್ಷಣ ಸ್ಪಂದಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತದೆ. ಈ ವಾಹನಗಳು ಬಳ್ಳಾರಿ ಜಿಲ್ಲೆಯಲ್ಲಿ ಮುಂದೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯುವ ಕೆಲಸ ಮಾಡುತ್ತವೆ‌ ಎಂದು ಅವರು ತಿಳಿಸಿದರು.


ಬಳ್ಳಾರಿ ಜಿಲ್ಲೆಯಾದ್ಯಂತ ಈ ವಾಹನಗಳು ಸಂಚಾರ ಮಾಡುತ್ತವೆ. ಎಲ್ಲಾ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೇವೆಯನ್ನು ಪಡೆದುಕೊಳ್ಳಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ,ಒಳ್ಳೆಯ ಉದ್ದೇಶದಿಂದ ಈ ವಾಹನ ನೀಡಲಾಗಿದೆ. ಜನಸಂಖ್ಯೆ ಜಾಸ್ತಿ ಮತ್ತು ಹೆಚ್ಚಿನ ಪೊಲೀಸ್ ಸ್ಟೇಷನ್ ಹೆಚ್ಚು ಇರುವುದರಿಂದ ರಾಜ್ಯದಲ್ಲಿಯೇ ಬಳ್ಳಾರಿಗೆ ಹೆಚ್ಚಿನ ವಾಹನ ನೀಡಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
112 ನಂಬರ್ ಗೆ ಯಾವುದೇ ಫೋನ್ ಕಾಲ್ ಬಂದ 15 ಸೆಕೆಂಡನೊಳಗೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರಿಗೆ ನೆರವಾಗಿ ಎಂದರು.
ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ ತುರ್ತಾಗಿ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ವೇಗವಾಗಿ ವಾಹನ ಓಡಿಸಬೇಡಿ ಮತ್ತು ತಮ್ಮ ಇತಿಮಿತಿಯಲ್ಲಿಯೇ ಓಡಿಸಿ ಎಂದು ಸಲಹೆ ನೀಡಿದರು.ಜಿಲ್ಲೆಯ ಜನರಿಗೆ ಇದೊಂದು ಸುವರ್ಣ ಅವಕಾಶ. ಇದನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಎಸ್ಪಿ ಬಿ.ಎನ್.ಲಾವಣ್ಯ ಮಾತನಾಡಿ ಒಂದು ಆ್ಯಪ್ ಮೂಲಕ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಯಾವುದೇ ಒಬ್ಬ ವ್ಯಕ್ತಿ ಕರೆ ಮಾಡಿದ ತಕ್ಷಣ ಆ ವಾಹನದಲ್ಲಿರುವ ಪೊಲೀಸ್ ಅಧಿಕಾರಿ ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ದಿನದ 24 ಗಂಟೆಯೂ ಇದು ಕೆಲಸ ಮಾಡುತ್ತದೆ.ಎಲ್ಲಾ ಜನರು ಇದರಿಂದ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here