ಔರಂಗಜೇಬನ ಕೊನೆಯ ದಿನಗಳು ಮತ್ತು ಯಡಿಯೂರಪ್ಪ

0
324

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ರಾಜಕೀಯ ಬದುಕಿನ ಕ್ಷೋಭೆಯ ದಿನಗಳಿಗೆ ಕಾಲಿಟ್ಟಿದ್ದಾರೆ.
ಅವರಿಗೀಗ ನೆಮ್ಮದಿ ಇಲ್ಲ,ಬಹುಕಾಲ ಸಿಎಂ ಆಗಿ ಮುಂದುವರಿಯುವ ವಿಶ್ವಾಸವೂ ಇಲ್ಲ.ಅವರದೀಗ ಅಕ್ಷರಶ: ಮೊಘಲ್ ದೊರೆ ಔರಂಗಜೇಬ್ ನ ಪರಿಸ್ಥಿತಿ.
ತನ್ನ ಶಕ್ತಿಯಿಂದ ಮೊಘಲ್ ಸಾಮ್ರಾಜ್ಯವನ್ನು ದೊಡ್ಡಮಟ್ಟದಲ್ಲಿ ಕಟ್ಟಿದ ಔರಂಗಜೇಬ್ ಕೊನೆಯ ದಿನಗಳಲ್ಲಿ ಸಾಮ್ರಾಜ್ಯದ ಮೂಲೆಮೂಲೆಯಿಂದ ಮೇಲೇಳುವ ದಂಗೆಗಳನ್ನು ನಿಭಾಯಿಸುವುದರಲ್ಲೇ ಸುಸ್ತಾಗಿಬಿಡುತ್ತಾನೆ.
ಈಗ ಯಡಿಯೂರಪ್ಪ ಅವರ ಪರಿಸ್ಥಿತಿಯೂ ಹಾಗೇ ಆಗಿದೆ.
ಅಂದ ಹಾಗೆ ಔರಂಗಜೇಬ್ ಮತ್ತು‌ ಯಡಿಯೂರಪ್ಪ ಮಧ್ಯೆ ಕೆಲವು ಸಾಮ್ಯತೆಗಳಿವೆ.ಮೊದಲನೆಯದಾಗಿ,ಔರಂಗಜೇಬ್ ತನ್ನ ಸಾಮ್ರಾಜ್ಯವನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಶ್ರಮವಹಿಸಿ‌ಕಟ್ಟಿದ.
ಯಡಿಯೂರಪ್ಪ ಕೂಡಾ ಅಷ್ಟೇ.ಪಾತಲದಲ್ಲಿದ್ದ ಬಿಜೆಪಿಯನ್ನು ಹಗಲು-ರಾತ್ರಿ ಎನ್ನದೆ ಶ್ರಮಿಸಿ ಕಟ್ಟಿದರು.83ರಲ್ಲಿ ಕರ್ನಾಟಕದ ರಾಜಕಾರಣ ಕಲಸುಮೇಲೋಗರವಾದಾಗ ಮತ್ತು ಕಾಂಗ್ರೆಸ್ ವಿರೋಧಿ ಶಕ್ತಿಗಳು ಬಿಡಿಬಿಡಿಯಾಗಿದ್ದಾಗ ಬಿಜೆಪಿ ಹದಿನೆಂಟು ಗಳಿಸಿತ್ತು ಎಂಬುದನ್ನು ಬಿಟ್ಟರೆ ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದರ ಶಕ್ತಿ‌ ಕುಸಿಯುತ್ತಾ 89 ರಲ್ಲಿ ಅದು ವಿಧಾನಸಭೆಯ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
ಅಲ್ಲಿಂದ ಮುಂದೆ ಬಿಜೆಪಿಯ ಪೌಂಡೇಶನನ್ನು ಗಟ್ಟಿ ಮಾಡಿ,ಪಿಲ್ಲರ್ ಗಳನ್ನೆಬ್ಬಿಸಿ,ಸೆಂಟ್ರಿಂಗ್ ಹೊಡೆದು ಸ್ಲ್ಯಾಬು ಕಟ್ಟಿದವರು ಇದೇ ಯಡಿಯೂರಪ್ಪ.ಒಂದು ಹಂತದಲ್ಲಿ ಅವರಿಗೆ ಭುಜ ಕೊಟ್ಟು ದುಡಿದವರು ಅಂತಿದ್ದರೆ ಅದು ಅನಂತಕುಮಾರ್ ಮಾತ್ರ.
ಇನ್ನು ಔರಂಗಜೇಬ್ ತನ್ನ ಉದ್ದೇಶ ಸಾಧನೆಗಾಗಿ ಶತ್ರುಗಳೊಂದಿಗೆ ಯುದ್ಧ ಮಾಡುವುದರಲ್ಲೇ ಕಾಲ ಕಳೆದ.ಯಡಿಯೂರಪ್ಪ ಕೂಡಾ ಅದನ್ನೇ ಮಾಡಿದವರು.
ಇಂತಹ ಔರಂಗಜೇಬ್ ತನ್ನ ಆಡಳಿತಾವಧಿಯ ಕೊನೆಯ ದಿನಗಳಲ್ಲಿ ದಂಗೆಕೋರರಿಂದ ಸುಸ್ತಾಗಿ ಹೋದ.ಈಗ ಯಡಿಯೂರಪ್ಪ ಕೂಡಾ ಅದೇ ಹಾದಿಯಲ್ಲಿದ್ದಾರೆ.
ಇಂತಹ ಕಾಲದಲ್ಲಿ ಅರುಣ್ ಸಿಂಗ್ ಎಂಬ ನಾಯಕ ಮಾತ್ರ ಪಕ್ಷದ ಕಂಬ,ಕಂಬಗಳನ್ನು ಸುತ್ತುತ್ತಾ;ಹೇಗಾದರೂ ಮಾಡಿ ಯಡಿಯೂರಪ್ಪ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಿ.ಇಲ್ಲದಿದ್ದರೆ ರಾಜ್ಯ ಸರ್ಕಾರ ಪತನವಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಗೋಗರೆಯುತ್ತಿದ್ದಾರೆ.
ಅಷ್ಟೇ ಅಲ್ಲ,ಸರ್ಕಾರ ಯಾಕೆ ಬೀಳುತ್ತದೆ ಅನ್ನುವ ಒಂದು ವಿಷಯದತ್ತ ಬೊಟ್ಟು ಮಾಡಿ,ಈ ಬಾಂಬ್ ಬಿದ್ದರೆ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿಯುವುದು ಹೇಗೆ ನಿಶ್ಚಿತವೋ?ಬೇರೊಬ್ಬರನ್ನು ಸಿಎಂ ಹುದ್ದೆಗೆ ತಂದು ಸರ್ಕಾರ ಉಳಿಸಿಕೊಳ್ಳುವುದು ಕೂಡಾ ದೊಡ್ಡ ಭ್ರಮೆ ಎನ್ನತೊಡಗಿದ್ದಾರೆ.
ಅಂದ ಹಾಗೆ ಕೊರೋನಾ ಕಾಲಘಟ್ಟ ಯಡಿಯೂರಪ್ಪ ಅವರ ಸುತ್ತ ಕ್ಷೋಭೆಯ ದಿನಗಳನ್ನು ಸೃಷ್ಟಿ ಮಾಡಿರುವುದು ನಿಜ.
ಸಾಲದೆಂಬಂತೆ ಈ ಕ್ಷೋಭೆಯ ಸಂದರ್ಭವನ್ನು ಬಳಸಿಕೊಂಡು ಅವರ ವಿರುದ್ಧ ಹಲವರು ಮುಗಿಬೀಳುತ್ತಿದ್ದಾರೆ.
ಹೀಗೆ ರಾಜ್ಯದ ನಾಯಕರು ಮಾತ್ರವಲ್ಲ,ಖುದ್ದು ಮೋದಿ ಸರ್ಕಾರ ಕೂಡಾ ಯಡಿಯೂರಪ್ಪ ಅವರಿಗೆ ನಿರಂತರವಾಗಿ ಮುಜುಗರವುಂಟು ಮಾಡುತ್ತಿದೆ.
ರಾಜ್ಯ ಕಷ್ಟದಲ್ಲಿದೆ,ಹೀಗಾಗಿ ಜಿ.ಎಸ್.ಟಿ ಬಾಬ್ತಿನಲ್ಲಿ ನಮಗೆ ಬರಬೇಕಾದ ಹಣ ಕೊಡಿ ಎಂದರೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ.
ಹಾಗಂತ ರಾಜ್ಯ ಸರ್ಕಾರವೇನೂ ಇಲ್ಲದ ದುಡ್ಡನ್ನು ತಂದುಕೊಡಿ ಎಂದು ಹೇಳುತ್ತಿಲ್ಲ.ವಸ್ತುಸ್ಥಿತಿ ಎಂದರೆ ಕೊರೋನ ಬಂದ ನಂತರವೂ ರಾಜ್ಯದಿಂದ ಗಣನೀಯ ಪ್ರಮಾಣದ ತೆರಿಗೆ ಹಣ ಕೇಂದ್ರ ಸರ್ಕಾರಕ್ಕೆ ಹೋಗಿದೆ.ಆದರೆ ಅದು ಮಾತ್ರ ಕರ್ನಾಟಕದ ಬೇಡಿಕೆಗೆ ಕಿವುಡಾಗಿದೆ.
ಸಾಲದೆಂಬಂತೆ ಮೊನ್ನೆ ಕರ್ನಾಟಕ ಡಕ್ಕೆ ಇಂತಿಷ್ಟು ಆಕ್ಸಿಜನ್ ಕೊಡಿ ಎಂದು ರಾಜ್ಯ ಹೈಕೋರ್ಟ್ ಹೇಳಿದರೆ ಕೇಂದ್ರ ಸರ್ಕಾರ ಅದರ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಯಿತು.
ಅರೇ,ಬಯಸಿ,ಬಯಸಿ ತಂದ ಕೇಂದ್ರ ಸರ್ಕಾರವೇ ಕರ್ನಾಟಕದ ಬೇಡಿಕೆಯನ್ನು ಪರಿಗಣಿಸದೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುತ್ತದೆ ಎಂದರೆ ಏನರ್ಥ?ಎಂಬ ಮಾತುಗಳು ಯಡಿಯೂರಪ್ಪ ಅಂತರಂಗವನ್ನು ಕೊರೆಯುತ್ತಿವೆ.
ಕಳೆದ ಬಾರಿ ದೇಶದಲ್ಲಿ ಕೊರೋನ ವ್ಯಾಪಿಸಿದಾಗ ಜನರ ದಿಕ್ಕು ತಪ್ಪಿಸಲು ಸುಶಾಂತ್ ಸಿಂಗ್ ರಜಪೂತ್ ಎಂಬ ನಟನ ಸಾವನ್ನು ರಾಷ್ಟ್ರೀಯ ಸುದ್ದಿಯಾಗಿ ಬಿಂಬಿಸಿದ ಮೋದಿ ಸರ್ಕಾರ ಈಗ ಪಶ್ಚಿಮ ಬಂಗಾಳದಲ್ಲಿ ನಡೆದ ಕೆಲ ರಾಜಕೀಯ ಹತ್ಯೆಗಳನ್ನು ಅಂತಾರಾಷ್ಟ್ರೀಯ ಸುದ್ದಿ ಎಂಬಂತೆ ಬಿಂಬಿಸುತ್ತಿದೆ.
ಇದಕ್ಕೆ ಪುಷ್ ಕೊಡಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಆ ರಾಜ್ಯಕ್ಕೆ ಹೋಗುತ್ತಾರೆ.ಆದರೆ ಕರ್ನಾಟಕದ ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಇಪ್ಪತ್ನಾಲ್ಕು ಮಂದಿ ಸತ್ತರೆ ಅದನ್ನು ಗಂಭೀರವಾಗಿ ಪರಿಗಣಿಸುವ,ಸಾಂತ್ವನ ಹೇಳುವ ಕೆಲಸವೇ ಆಗುವುದಿಲ್ಲ ಎಂಬ ಮಾತು ಕೂಡಾ ಯಡಿಯೂರಪ್ಪನವರ ಎದೆಯನ್ನು ಭರ್ಜಿಯಿಂದ ತಿವಿಯುತ್ತಿದೆ.
ಇಂತಹ ಕಾಲದಲ್ಲೇ ಯಡಿಯೂರಪ್ಪ ಅವರ ಮಗ್ಗುಲಿನಿಂದಲೇ ಒಬ್ಬ ಮಂತ್ರಿ ರಪ್ಪಂತ ಮೇಲೆದ್ದು ನಿಂತು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.ಅವರು-
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್.
ಮಂತ್ರಿಯಾಗಿ ನಾನು ಅಧಿಕಾರ ಸ್ವೀಕರಿಸುವಾಗ ಸ್ವಲ್ಪ ದಿನಗಳಲ್ಲೇ ಇಂಧನ ಖಾತೆಯನ್ನು ಕೊಡುವುದಾಗಿ ಭರವಸೆ ಕೊಟ್ಟಿದ್ದಿರಿ.ಆದರೆ ಇಷ್ಟು ದಿನ ಕಳೆದರೂ ಕೊಟ್ಟ ಮಾತನ್ನು ಈಡೇರಿಸಿಲ್ಲ ಎಂದು ಯೋಗೇಶ್ವರ್ ಅವರು ಸಿಎಂ ಬಳಿ ತಕರಾರು ಎತ್ತಿದರು.
ಈಗ ಇರುವ ಹಲವು ಖಾತೆಗಳ ಪೈಕಿ ಇಂಧನ ಖಾತೆಯೂ ನಿಮ್ಮ ಕೈಯಲ್ಲೇ ಇದೆ.ಯಾವ ಕಾರಣಕ್ಕಾಗಿ ನೀವು ಅದನ್ನು ಇಟ್ಟುಕೊಂಡಿದ್ದೀರೋ?ಅದೇ ಉದ್ದೇಶಕ್ಕಾಗಿ ನನಗೂ ಕೊಡಿ ಎಂದು ಯೋಗೇಶ್ವರ್ ಹೇಳತೊಡಗಿದರು.
ಆದರೆ ಈ ಕೋವಿಡ್ ಕತೆ ಮುಗಿಯಲಿ.ನಂತರ ಖಂಡಿತ ನಿಮಗೆ ಇಂಧನ ಖಾತೆ ಕೊಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ ಕೂಡಲೇ ಸಿಟ್ಟಿಗೆದ್ದ ಯೋಗೇಶ್ವರ್,ನನಗಿಲ್ಲದ್ದು ನಿಮಗೂ ಇರಬಾರದು ಅಂತ ಸಿಡಿದವರೇ ಸೀದಾ ದೆಹಲಿಗೆ ಹೋಗಿದ್ದಾರೆ.
ಹೀಗೆ ಹೋದವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬಳಿ,ನನಗೆ ಅನ್ಯಾಯವಾಗಿದೆ.ಈ ಸರ್ಕಾರ ಬರಲು ಭುಜ ನೀಡಿದ ನನಗೆ ಉಪಯೋಗವಿಲ್ಲದ ಖಾತೆ ನೀಡಲಾಗಿದೆ.ಇದನ್ನು ಸರಿಪಡಿಸದಿದ್ದರೆ ನನ್ನ ಬಳಿ ಇರುವ ಮಹತ್ವದ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ.ಮುಂದಾಗುವ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ಅಂದ ಹಾಗೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಪ್ರಹ್ಲಾದ್ ಜೋಷಿ ಇಲ್ಲವೇ ತಮಗೆ ಬೇಕಾದವರೊಬ್ಬರು ಮುಖ್ಯಮಂತ್ರಿಯಾಗಲಿ ಎಂಬ ಆಸೆ ಸಂತೋಷ್ ಅವರಿಗೂ ಇದೆ.
ಆದರೆ ಸರ್ಕಾರದ ಮುಖಕ್ಕೆ ಅಂಟಿರುವ ಹಗರಣಗಳ ಆರೋಪ ಇದಕ್ಕೆ ಮೂಲವಾಗಲಿ ಅಂತ ಅವರು ಬಯಸಿದ್ದಾರೆ.
ಹೀಗಾಗಿಯೇ ಯೋಗೀಶ್ವರ್ ಕೈಲಿರುವ ದಾಖಲೆ ಬಿಡುಗಡೆಯಾದರೆ ಅದು ಸರ್ಕಾರಕ್ಕೇ ಮಾರಕವಾಗಬಹುದು ಎಂಬ ಚಿಂತೆಯಿಂದ ಅವರು ವರಿಷ್ಟರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಇದಾದ ನಂತರ ಇದ್ದಕ್ಕಿದ್ದಂತೆ ಸಿಎಂ ಬದಲಾವಣೆ ನಿಶ್ಚಿತ ಎಂಬ ಮಾತುಗಳು ದಿಲ್ಲಿಯಿಂದ ಹೊರಟು ಕರ್ನಾಟಕದ ರಾಜಕೀಯ ವಲಯಗಳನ್ನು ಆಕ್ರಮಿಸಿಕೊಂಡಿವೆ.
ಅಷ್ಟೇ ಅಲ್ಲ,ಪರಿಸ್ಥಿತಿಯ ಅಂದಾಜು ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬದಲಿಗೆ ಯಾರು?ಬರಬೇಕು ಅಂತ ಯೋಚಿಸಿ ವರಿಷ್ಟರಿಗೆ ಆ ಸೂತ್ರದ ವಿವರ ರವಾನಿಸಿದ್ದಾರೆ ಎಂಬ ಮಾತುಗಳು ಭೋರ್ಗರೆಯುತ್ತಿವೆ.
ಆದರೆ ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಮಾತ್ರ ಗಾಬರಿಯಿಂದ ವರಿಷ್ಟರನ್ನು ಎಡತಾಕುತ್ತಿದ್ದಾರೆ.
ಯೋಗೇಶ್ವರ್ ಅನ್ನುವ ಹ್ಯೂಮನ್ ಬಾಂಬ್ ಅನ್ನು ನಿರ್ಲಕ್ಷಿಸಬೇಡಿ.ನಾಯಕತ್ವ ಬದಲಾವಣೆ ಒಂದರಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ.ಬದಲಿಗೆ ಈ ಸರ್ಕಾರವೇ ಬಿದ್ದು ಹೋಗುತ್ತದೆ.
ಕೊರೋನಾ ಹೊಡೆತಕ್ಕೆ ಕರ್ನಾಟಕದಲ್ಲಿ ಜನಾಕ್ರೋಶ ಭುಗಿಲೆದ್ದಿರುವಾಗ ನಾವು ಮಧ್ಯಂತರ ಚುನಾವಣೆಗೆ ಹೋಗುವುದು ಎಂದರೆ ಮುಳುಗಲು ರೆಡಿ ಆಗುವುದೇ ಹೊರತು ಮತ್ತೇನಲ್ಲ ಎಂದು ಬಡಬಡಿಸುತ್ತಿದ್ದಾರೆ.
ಹೀಗಾಗಿ ಯಡಿಯೂರಪ್ಪ ತಮ್ಮ ರಾಜಕೀಯ ಬದುಕಿನ ಕೊನೆಯ ದಿನಗಳು ಎಷ್ಟು ಕ್ಷೋಭೆಯಿಂದ ನರಳುತ್ತಿವೆ ಅನ್ನುವುದನ್ನು ಹತಾಶೆಯಿಂದ ನೋಡುತ್ತಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here