ಗಲಭೆ ಪೀಡಿತ ಕಾಳಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ.

0
790

ಕೊಟ್ಟೂರು:ಜ:29:-ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಶನಿವಾರ ಸಂಜೆ ತರಳಬಾಳು ಹುಣ್ಣಿಮೆ ಮಹೋತ್ಸವದ ಬೈಕ್ ರ‍್ಯಾಲಿ ಸಂದರ್ಭದಲ್ಲಿ ಕಾಳಾಪುರ ಕ್ರಾಸ್‌ನಲ್ಲಿ ಉಂಟಾಗಿದ್ದ ಗಲಾಟೆ ಹಿನ್ನಲೆಯಲ್ಲಿ, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

ಗಲಾಟೆ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಹಾನಿಗೊಳಗಾಗಿ ನಷ್ಟ ಉಂಟಾಗಿರುವ ಕಾಳಾಪುರ ಗ್ರಾಮದ 28 ಮತ್ತು ಕ್ಯಾಂಪ್‌ನ 25 ಮನೆಗಳಿಗೂ ತೆರಳಿ ಹಾನಿಯಾಗಿರುವುದನ್ನು ಖುದ್ದು ಮನೆಯವರಿಂದ ಮಾಹಿತಿ ಸಂಗ್ರಹಿಸಿದರು. ಘಟನೆಯಲ್ಲಿ ಬೆಂಕಿಗೆ ಆಹುತಿಯಾದ 16 ಬೈಕ್ ಮಾಲೀಕರನ್ನು ವಿಚಾರಿಸಿದರು.

ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರಲ್ಲದೇ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಮನೆಯವರೊಂದಿಗೆ ಮಾತನಾಡಿದರು.
ನಂತರ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಸೌಹರ್ದತೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಶನಿವಾರ ನಡೆದ ಘಟನೆ ನಿಜಕ್ಕೂ ವಿಷಾದಕರ. ಗ್ರಾಮದಲ್ಲಿ ಬದುಕಲು ನಿರ್ಮಲ ವಾತಾವರಣ ಇರಬೇಕೆ ಹೊರತು ಭಯದ ವಾತಾವರಣ ಇರಬಾರದು. ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿ ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಘಟನೆಯಲ್ಲಿ ಹಾನಿಯಾಗಿರುವ ಬಹುತೇಕ ಮನೆಗಳು ಬಡವರದ್ದಾಗಿದ್ದು, ಅದರಲ್ಲೂ ಬಹುತೇಕ ಪರಿಶಿಷ್ಟ ಜಾತಿಯವರಿಗೆ ಸೇರಿದ ಮನೆಗಳಾಗಿವೆ. ಮನೆ ಬಾಗಿಲು, ಕಿಟಕಿ, ಸ್ಟೀಲ್ ಅಲ್ಮೇರಾಗಳು ಜಖಂ ಆಗಿದ್ದು, ಕೆಲ ಮನೆಗಳಲ್ಲಿ ಹಣ, ಬಂಗಾರ ದೋಚಿದ್ದಾರೆಂದು ಮನೆಯವರು ದೂರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವವರ ಮನೆಯಲ್ಲಿ ಕಿಡಿಗೇಡಿಗಳು ಮಾಡಿರುವ ಹಾನಿಯಿಂದ ಮನೆಯವರಿಗೆ ಅಪಾರ ನಷ್ಟವಾಗಿದೆ. ನಷ್ಟವಾಗಿರುವ ಪೂರ್ಣ ವರದಿ ತಾಲೂಕು ಆಡಳಿತದಿಂದ ಪಡೆದುಕೊಂಡು ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು ಜಖಂಗೊಂಡಿರುವ ಮನೆಗಳ, ಬೈಕ್‌ಗಳ, ಗಾಯಾಳುಗಳ ಪಟ್ಟಿ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಸೂಕ್ತ ಪರಿಶೀಲನೆ ನಡೆಸಿ ಪೂರ್ಣ ವರದಿ ನೀಡಲು ಸೂಚಿಸಿದ್ದೇನೆ. ಘಟನೆಗೆ ಸಂಬಧಿಸಿದಂತೆ ಒಬ್ಬ ಪೊಲೀಸ್ ಮತ್ತು ನಾಲ್ವರು ನೀಡಿರುವ ದೂರನ್ನು ದಾಖಲಿಸಿಕೊಂಡು ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಸದ್ಯ ಗ್ರಾಮದಲ್ಲಿ ಶಾಂತಿ ನೆಲಸಿದೆ ಎಂದು ಹೇಳಿದರು.

ಕಾಳಾಪುರ ಗ್ರಾಮದಲ್ಲಿ ನಡೆದ ಘಟನೆ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಮಗ್ರವಾಗಿ ವಿವರಿಸಿದ್ದು, ಸೂಕ್ತ ಬಗೆಯ ರಕ್ಷಣಾ ವ್ಯವಸ್ಥೆ ಬಲಪಡಿಸುವಂತೆ ಸೂಚಿಸಿದ್ದು, ಇದನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿರುವೆ. ಮುಂಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಹ ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಪಿ ಶ್ರೀಹರಿಬಾಬು, ಎಸಿ ಟಿ.ವಿ.ಪ್ರಕಾಶ್, ಡಿವೈಎಸ್‌ಪಿ ಜಿ.ಹರೀಶ್, ಎಂ.ವಿ.ಮಲ್ಲಾಪುರ, ಸಿಪಿಐ ಸೋಮಶೇಖರ ಕೆಂಚಾರೆಡ್ಡಿ, ಟಿ.ಮಂಜುನಾಥ, ತಹಸೀಲ್ದಾರ ಎಂ.ಕುಮಾರಸ್ವಾಮಿ, ಬೋವಿ ಸಮಾಜ ಜಿಲ್ಲಾಧ್ಯಕ್ಷ ಪಿಎಚ್ ದೊಡ್ಡರಾಮಣ್ಣ, ಕುರುಬ ಸಮಾಜದ ಭರಮಪ್ಪ, ನಂಜಪ್ಪ, ಲೋಕೇಶ ಇತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here