ವಿಡಿಯೊ ಸಂವಾದ ಮೂಲಕ ಸಿಸಿಸಿಯಲ್ಲಿರುವ ಸೋಂಕಿತರ ಜತೆ ಯೋಗಕ್ಷೇಮ ಆಲಿಸಿದ ಜಿಲ್ಲಾಧಿಕಾರಿ

0
79

ಮಡಿಕೇರಿ :-ಕೊಡಗು ಜಿಲ್ಲೆಯ ಕೋವಿಡ್ ಆರೈಕೆ ಕೇಂದ್ರ(ಸಿಸಿಸಿ)ಗಳಾದ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಬಳಿ ಇರುವ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಬಳಿಯ ನವೋದಯ ಶಾಲೆ ಹಾಗೂ ಕೂಡಿಗೆ ಬಳಿ ಇರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಸೋಂಕಿತರ ಜೊತೆ ಜೂಮ್ ಆ್ಯಪ್ ಮೂಲಕ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಯೋಗ ಕ್ಷೇಮ ವಿಚಾರಿಸಿದರು.
ಮೊದಲಿಗೆ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಬಳಿ ಇರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಸೋಂಕಿತರ ಜೊತೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಕೋವಿಡ್ ಆರೈಕೆ ಕೇಂದ್ರದಲ್ಲಿ ಊಟೋಪಚಾರ, ಕುಡಿಯಲು ಬಿಸಿ ನೀರು, ಸ್ನಾನಕ್ಕೆ ಬಿಸಿನೀರು ಒದಗಿಸುತ್ತಿದ್ದಾರೆಯೇ, ವೈದ್ಯರು ಔಷಧಿ ನೀಡಿದ್ದಾರೆಯೇ, ವೈದ್ಯರು ದಿನಕ್ಕೆ ಎಷ್ಟು ಬಾರಿ ಬಂದು ವಿಚಾರಿಸಿಕೊಳ್ಳುತ್ತಾರೆ, ದೂರವಾಣಿ ಮೂಲಕ ಮನೆಯವರ ಜೊತೆ ಮಾತನಾಡುತ್ತೀರ, ಕುಟುಂಬದವರು ಆರಾಮವಾಗಿದ್ದರೆಯೇ ಎಂದು ಸಂವಾದದಲ್ಲಿ ಕೋವಿಡ್ ಸೋಂಕಿತರಿಂದ ಮಾಹಿತಿ ಪಡೆದರು.
ಈ ಬಗ್ಗೆ ಸೋಂಕಿತರೊಬ್ಬರು ಮಾತನಾಡಿ ನಾನು ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದು 6 ದಿನವಾಗಿದೆ. ಯಾವುದೇ ರೀತಿಯ ತೊಂದರೆ ಇಲ್ಲ. ವೈದ್ಯರು, ಶ್ರುಶ್ರೂಷಕರು ಹೀಗೆ ಎಲ್ಲರೂ ಚೆನ್ನಾಗಿ ಗಮನಿಸುತ್ತಾರೆ. ಬಿಸಿಯೂಟ, ಬಿಸಿ ನೀರು ದೊರೆಯುತ್ತಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದರು.
ಮತ್ತೊಬ್ಬ ಸೋಂಕಿತರು ಮಾತನಾಡಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗುವುದಕ್ಕೂ ಮೊದಲು ತಲೆನೋವು, ಮೈಕೈನೋವು, ಸುಸ್ತು-ಸಂಕಟವಾಗುತ್ತಿದ್ದು, ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದ ಎರಡು ದಿನದಲ್ಲಿಯೇ ಸುಧಾರಣೆ ಕಂಡೆ ಎಂದು ಅವರು ತಿಳಿಸಿದರು.
ನವೋದಯ ಶಾಲೆಯ ಸೋಕಿತರೊಬ್ಬರು ಮಾತನಾಡಿ ಊಟ-ತಿಂಡಿ ಎಲ್ಲವೂ ಚೆನ್ನಾಗಿದೆ. ಸ್ವಚ್ಚತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ಸಹ ಇತ್ತೀಚೆಗೆ ಏಕೆ ಊಟ ತಿಂಡಿ ಸರಿಯಿಲ್ಲ ಎಂಬುದು ಕೇಳಿಬಂದಿತು ಎಂದರು. ಇದಕ್ಕೆ ಅಂದು ಚಿತ್ರನ್ನಕ್ಕೆ ಸ್ವಲ್ಪ ಉಪ್ಪು ಹೆಚ್ಚಾಗಿತ್ತು, ಹಾಗಾಗಿ ಸಮಸ್ಯೆಯಾಗಿರಬೇಕು ಎಂದು ಅವರು ಪ್ರತಿಕ್ರಿಯಿಸಿದರು.
ಮತ್ತೊಬ್ಬ ಸೋಂಕಿತರು ಇಲ್ಲಿನ ಆಂಬುಲೆನ್ಸ್ ಚಾಲಕರ ಧೈರ್ಯ ಮೆಚ್ಚಲೇಬೇಕು. ಇಲ್ಲಿನ ವೈದ್ಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು, ಸೋಂಕಿತರು ಎಂಬ ಭಾವನೆ ಇಲ್ಲದೆ ಸ್ನೇಹಿತರಂತೆ ಮಾತನಾಡುತ್ತಾರೆ. ಇದರಿಂದ ತುಂಬಾ ಖುಷಿಯಾಗುತ್ತದೆ ಎಂದು ಅವರು ಶ್ಲಾಘಿಸಿದರು.
ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರೊಬ್ಬರು ವಾರದಲ್ಲಿ ಒಂದು ದಿನವಾದರೂ ಕೋಳಿ ಮಾಂಸ ಊಟ ನೀಡಬೇಕು ಎಂದು ಕೋರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ವಾರದಲ್ಲಿ ಎರಡು ದಿನ ಕೋಳಿ ಮಾಂಸ ಊಟ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಮತ್ತೊಬ್ಬ ಸೋಂಕಿತರು ಕೋವಿಡ್ ಆರೈಕೆ ಕೇಂದ್ರದಲ್ಲಿ ಮನೆಯ ರೀತಿಯ ವಾತಾವರಣ ಇದೆ. ಕೋವಿಡ್‍ನಿಂದ ಗುಣಮುಖರಾಗುತ್ತಿದ್ದು, ವೈದ್ಯರು ಮತ್ತು ಶ್ರುಶ್ರೂಷಕರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ವಿಡಿಯೊ ಸಂವಾದಲ್ಲಿ ನೋಡಲ್ ಅಧಿಕಾರಿಗಳಾದ ಸಿ.ಶಿವಕುಮಾರ್ ಅವರು ಕೋವಿಡ್ ಆರೈಕೆ ಕೇಂದ್ರದಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ತಹಶೀಲ್ದಾರರು, ವೈದ್ಯಾಧಿಕಾರಿಗಳು ಇತರರು ಇದ್ದರು.
ಇದೇ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಜೂಮ್ ಆ್ಯಪ್ ಮೂಲಕ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಸೋಂಕಿತರ ಜೊತೆ ಕುಂದುಕೊರತೆ ಆಲಿಸಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here