ಬಳ್ಳಾರಿ ಸಂಪೂರ್ಣ ಲಾಕ್‍ಡೌನ್ ಮೇ 31ರವರೆಗೆ ಮುಂದುವರಿಕೆ, ಕೆಲ ಚಟುವಟಿಕೆಗಳಿಗೆ ಮಾತ್ರ ಅನುಮತಿ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಮೇ 31ರವರೆಗೆ ಸಂಪೂರ್ಣ ಜನಸಂಚಾರ ನಿರ್ಬಂಧ: ಡಿಸಿ ಮಾಲಪಾಟಿ

0
185

ಬಳ್ಳಾರಿ,ಮೇ 22 : ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಾಂತ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 24ರ ಬೆಳಗ್ಗೆ 6ರಿಂದ ಮೇ 31ರ ಬೆಳಗ್ಗೆ 6ರವರೆಗೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಮೇ 24 ಮತ್ತು 25ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಅವರು ಕಿರಾಣಿ ಅಂಗಡಿಗಳು ದಿನಸಿ, ಹಣ್ಣು, ತರಕಾರಿಗಳು, ಮದ್ಯದ ಅಂಗಡಿಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಮಾತ್ರ ನಿರ್ವಹಿಸತಕ್ಕದ್ದು. ಈ ಅಂಗಡಿಗಳು ಸಾರ್ವಜನಿಕರ ಸಾಮಾಜಿಕ ಅಂತರವನ್ನು ಕಾಪಾಡುವ ಹಿತದೃಷ್ಟಿಯಿಂದ ಸಾಲಿನಲ್ಲಿ ಖರೀದಿಸಲು ಕೋವಿಡ್-19 ನಿಯಮಗಳಂತೆ ಗುರುತುಗಳನ್ನು ಹಾಕುವುದು ಮತ್ತು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟಾಗಿ ಪಾಲಿಸಲು ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
*ಈ ಸ್ಥಳಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ: ಮೇ 24 ಮತ್ತು 25ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಬಳ್ಳಾರಿ ನಗರದಲ್ಲಿ ಈದ್ಗಾ ಮೈದಾನ, ಐ.ಟಿ.ಐ. ಕಾಲೇಜು ಮೈದಾನ, ಎನ್.ಸಿ.ಸಿ. ಮೈದಾನ,. ಸೆಂಟ್ ಜಾನ್ಸ್ ಕಾಲೇಜು ಮೈದಾನ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ,ಜಿಲ್ಲಾ ಕ್ರೀಡಾಂಗ, ಶ್ರೀರಾಂಪುರ ಕಾಲೋನಿಯ ಸರ್ಕಾರಿ ಶಾಲೆಯ ಹತ್ತಿರ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ಮಾಲಪಾಟಿ ಅವರು ವಿವರಿಸಿದರು.
ಹೊಸಪೇಟೆಯಲ್ಲಿ ಡ್ಯಾಂ ಮೈದಾನ, ವಿ.ಎನ್.ಸಿ. ಮೈದಾನ, ದೀಪಾಯನ ಶಾಲೆಯ ಹತ್ತಿರ ಇರುವ ಮೈದಾನ,ಎಂ.ಜೆ. ನಗರ ಪಾನಿ ಪೂರಿ ಮೈದಾನ, ಪಾಟೀಲ್ ಹೈ ಸ್ಕೂಲ್ ಮೈದಾನ, ಬಾಲಾ ಟಾಕೀಸ್‍ನ ಪಕ್ಕದಲ್ಲಿರುವ ಮೈದಾನದಲ್ಲಿ,ಸಿರಗುಪ್ಪದಲ್ಲಿ ಹೈಸ್ಕೂಲ್ ಮೈದಾನ, ಕುರುಗೋಡುವಿನಲ್ಲಿ ಎಪಿಎಂಸಿ ಮೈದಾನ, ಕಂಪ್ಲಿ ಪಟ್ಟಣದಲ್ಲಿ ಷಮೀಯಾ ಚಾಂದ್ ಜೂನಿಯರ್ ಕಾಲೇಜು ಮೈದಾನ,ಸಂಡೂರಿನಲ್ಲಿ ಯಶವಂತ ವಿಹಾರ ಮೈದಾನ, ಹಗರಿಬೊಮ್ಮನಹಳ್ಳಿಯಲ್ಲಿ ಕಾಲೇಜು ಮೈದಾನ, ಕೂಡ್ಲಿಗಿಯಲ್ಲಿ ತಾಲೂಕು ಕಚೇರಿ ಎದುರುಗಡೆ ಇರುವ ಮೈದಾನ,ಕೊಟ್ಟೂರಿನಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನ ಹತ್ತಿರವಿರುವ ಮೈದಾನ, ಹರಪನಳ್ಳಿ ತಾಲೂಕು ಕ್ರೀಡಾಂಗಣ, ಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ನಗರದ ಬೆಂಗಳೂರು ರಸ್ತೆಯು ಸಂಪೂರ್ಣವಾಗಿ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಈ ರಸ್ತೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿರುವವರು ನಿಗಧಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಳಿಸಿದರು.
ಕೃಷಿಗೆ ಸಂಬಂಧಿಸಿದ ಅಗತ್ಯ ವಸ್ತುಗಳು / ಉಪಕರಣಗಳ ಅಂಗಡಿಗಳನ್ನು ಮೇ 24ರಿಂದ ಮೇ 30ರವರೆಗೆ ಪ್ರತಿದಿನ ಬೆಳ್ಳಿಗೆ 6ರಿಂದ 10ರವರೆಗೆ ತೆರೆಯಲು ಅನುಮತಿಸಲಾಗಿದೆ(ಮೇ 24 ಮತ್ತು 25ರಂದು ಮಾತ್ರ ಮಧ್ಯಾಹ್ನ 12ರವರೆಗೆ ಕಾರ್ಯನಿರ್ವಹಿಸಬಹುದಾಗಿದೆ) ಎಂದು ಅವರು ತಿಳಿಸಿದರು.
*ಜೂ.7ರವರೆಗೆ ಮದುವೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಿಷೇಧ: ಮದುವೆ ಸಮಾರಂಭ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಜೂ.7ರವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿಅ ಅವರು ಸ್ಪಷ್ಟಪಡಿಸಿದರು.
ಮೇ 18ರಂದು ಬಳ್ಳಾರಿ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಎಲ್ಲ ಆದೇಶಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದರು.
ಈ ಆದೇಶವು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಾಂತ ಜಾರಿಯಲ್ಲಿರಲಿದ್ದು, ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇನ್ನೀತರ ಕಾಯ್ದೆಗಳ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಮೇ 31ರ ನಂತರ ಜಿಲ್ಲೆಯಲ್ಲಿ ಕೋವಿಡ್-19 ವಾಸ್ತವ ಸ್ಥಿತಿಗತಿಯನ್ನು ಪರಿಶೀಲನೆಯ ನಂತರ ನಿರ್ಭಂದಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಆಮ್ಲಜನಕಯುಕ್ತ ಹಾಗೂ ವೆಂಟಿಲೇಟರ್‍ಯುಕ್ತ ಹಾಸಿಗೆಗಳ ಅಗತ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ವೈದ್ಯಕೀಯ ಮೂಲಸೌಕರ್ಯವು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳಿಗೆ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿ ಸಾಕಷ್ಟು ಒತ್ತಡ ಊಂಟಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
*ಅಧಿಕ ದರಕ್ಕೆ ತರಕಾರಿ/ಹಣ್ಣು ಮಾರಾಟ ಮಾಡಿದ್ರೇ ಕ್ರಮ: ಲಾಕ್‍ಡೌನ್ ನೆಪ ಹೇಳಿ ನಿಗದಿಪಡಿಸಿದ ದರಕ್ಕಿಂತ ಅಧಿಕ ದರಕ್ಕೆ ತರಕಾರಿ ಮತ್ತು ಹಣ್ಣು ಮಾರಾಟ ಮಾಡಿದ್ರೆ ಅಂತವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪವವನಕುಮಾರ ಮಾಲಪಾಟಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಯಾವುದೇ ದೂರುಗಳನ್ನು ತೋಟಗಾರಿಕೆ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಮೇ 24 ಮತ್ತು 25ರ ನಂತರವೂ ಹಾಫ್‍ಕಾಮ್ಸ್ ಮೂಲಕ ನಗರದ ವಿವಿಧೆಡೆ ತರಕಾರಿ ಮತ್ತು ಹಣ್ಣುಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ತಳ್ಳುಗಾಡಿಗಳಿಗೂ ಪರವಾನಿಗೆ ನೀಡಲಾಗಿದ್ದು,ಜನರು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂದರು.
ಪ್ರತಿ ತಾಲೂಕಿನಲ್ಲಿ 500ರಿಂದ 700 ಬೆಡ್‍ಗಳ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ದಪಡಿಸಲಾಗಿದ್ದು,ಅಲ್ಲಿಗೆ ಹೋಂ ಐಸೋಲೇಶನ್‍ನಲ್ಲಿರುವವರಿಗೆ ಶಿಫ್ಟ್ ಮಾಡಲಾಗುತ್ತಿದೆ.ಅಲ್ಲಿ ಸೊಂಕಿತರಿಗೆ ಊಟ ಮತ್ತು ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಗ್ರಾಮ ಮಟ್ಟದಲ್ಲಿ ಗ್ರಾಮದಲ್ಲಿರುವ ಶಾಲೆಗಳಲ್ಲಿಯೇ ಕೋವಿಡ್ ಕೇರ್ ಸೆಂಟರ್ ರೀತಿ ಸೌಕರ್ಯ ಕಲ್ಪಿಸಿ ಆ ಗ್ರಾಮದ ಸೊಂಕಿತರಿಗೆ ತಂಗಲು ವ್ಯವಸ್ಥೆ ಹಾಗೂ ಇನ್ನೀತರ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here