ವಚನಗಳು ಶರಣ -ಶರಣೆಯರ ಅನುಭಾವದ ನುಡಿಗಳು..

0
21

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ವಿಶೇಷವಾದ ಗೌರವವಿದ್ದು, ಸತ್ಯ ಶುದ್ಧ ಕಾಯಕಕ್ಕೆ ಹೆಸರಾಗಿದ್ದ ಶರಣ -ಶರಣೆಯರಿಂದ ರಚಿತವಾದ ವಚನಗಳು ನಮ್ಮ ಬಾಳಿಗೆ ದಾರಿದೀಪಗಳಾಗಿವೆ ಎಂದು ಶಿಕ್ಷಕಿ ಗುಟ್ಟೆ ನಳಿನ ಪ್ರದೀಪ್ ಕುಮಾರ್ ಅಭಿಪ್ರಾಯ ಪಟ್ಟರು.

ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಡೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಾಮನೆ-50 ಕಾರ್ಯಕ್ರಮದಲ್ಲಿ ಆಯೋಜಿಸಲಾದ ದಿವಂಗತ ಕತ್ತಿ ಭರಮಪ್ಪನವರ ನುಡಿ ನಮನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯದಲ್ಲಿ ಶಿವಶರಣೆಯರ ಪಾತ್ರ’ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಇವರು ಒಂದು ವೇಳೆ ಬಸವಾದಿ ಶರಣರ – ಶರಣೆಯರ ವಚನ ಸಾಹಿತ್ಯ ಇಲ್ಲದೆ ಹೋಗಿದ್ದರೆ ಕನ್ನಡ ಸಾಹಿತ್ಯ ಲೋಕ ಬಡವಾಗುತ್ತಿತ್ತು. ಎಲ್ಲರ ಎಲ್ಲ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರವಿದ್ದು ಮಾನವ ಜನಾಂಗ ಅದರಲ್ಲೂ ಯುವ ಪೀಳಿಗೆ ವಚನಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕನ್ನು ಬದುಕುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

12ನೇ ಶತಮಾನದಲ್ಲಿ ನಿರ್ಮಿತವಾದ ವಚನ ಸಾಹಿತ್ಯವು 21ನೇ ಶತಮಾನದುದ್ದಕ್ಕೂ ನೆರವು ನೀಡುತ್ತಿರುವುದನ್ನು ನೋಡಿದಾಗ ಅದರ ಸತ್ವ ತುಂಬಾ ಪ್ರಭಾವಶಾಲಿಯಾಗಿರುವುದು ಎಲ್ಲರ ಅರಿವಿಗೆ ತಿಳಿದಿದ್ದು 12ನೇ ಶತಮಾನದಲ್ಲಿ ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ದುಗ್ಗಳೆ, ಗುಗ್ಗವ್ವೆ, ಕಾಳವ್ವೆ, ಗಂಗಾಂಬಿಕೆ, ನೀಲಾಂಬಿಕೆ ಮೊದಲಾದ ಸುಮಾರು 36ಕ್ಕೂ ಹೆಚ್ಚು ಶಿವ ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿದ್ದು ಸತ್ಯ, ಅಹಿಂಸೆ, ನಿಸ್ವಾರ್ಥತೆ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಮೊದಲಾದ ಜೀವನ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ತಿಳಿಸಿದ್ದು ಅವುಗಳಂತೆಯೇ ಬದುಕಿದ ಅವರು ವಚನ ಸಾಹಿತ್ಯ ಲೋಕದ ದ್ರುವ ತಾರೆಗಳಂತೆ ಇಂದಿಗೂ ಜೀವಂತವಾಗಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತು ಸಂಡೂರು ತಾಲೂಕು ಘಟಕದ ಅಧ್ಯಕ್ಷರಾದ ಬಿ ನಾಗನಗೌಡ ಇವರು ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಬಸವ ತತ್ವ ಮತ್ತು ವಚನ ತತ್ವಗಳ ಪ್ರಸಾರ ಕಾರ್ಯವನ್ನು ಮಾಡಲಾಗುತ್ತಿದ್ದು ಸುಶೀಲನಗರ ಗ್ರಾಮದ ಕತ್ತಿ ಭರಮಪ್ಪನವರ ಸಾಮಾಜಿಕ ಪ್ರಜ್ಞೆ ಮತ್ತು ಧಾರ್ಮಿಕ ಪ್ರಜ್ಞೆಯು ನಮ್ಮೆಲ್ಲರಿಗೂ ಮಾದರಿಯಾಗಿದ್ದು ಅವರ ಕುಟುಂಬದವರು ಸಹ ಇದೇ ದಾರಿಯಲ್ಲಿ ಸಾಗುತ್ತಿದ್ದು ವಚನಕಾರರ ಆಶಯಗಳಿಗೆ ತಕ್ಕಂತೆ ನಾವು ನೀವೆಲ್ಲರೂ ಸಮಾಜಕ್ಕೆ ಉಪಕಾರಿಗಳಾಗಿ ಜೀವಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಅರಳಿ ಕುಮಾರಸ್ವಾಮಿ, ಜಿ.ವೀರೇಶ್ ಹಾಗೂ ಶಿವಮೂರ್ತಿಸ್ವಾಮಿ ಇವರು ಕತ್ತಿ ಭರಮಪ್ಪನವರ ಒಡನಾಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿವಿಧ ಸಮಾಜಗಳ ಮುಖಂಡರಾದ ಕೆ.ನಾಗರಾಜ್, ಬಿ ಮಂಜುನಾಥ, ಚನ್ನವೀರಪ್ಪ, ಬಾಬುಸಾಬ್, ಸಿದ್ದಯ್ಯಸ್ವಾಮಿ, ವೀರೇಶ್ ಸ್ವಾಮಿ, ಈ.ಮನೋಹರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಶೀಲ ನಗರ ಗ್ರಾಮದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಯುವಕ ಮಿತ್ರರು, ಕತ್ತಿ ಭರಮಪ್ಪನವರ ವಂಶಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟಿ.ವೆಂಕಟೇಶ್, ಎಚ್.ಕುಮಾರಸ್ವಾಮಿ, ಜಿ.ಪಿ.ಪ್ರಣವ ಸ್ವರೂಪಿ ಹಾಗೂ ಜಿ.ಪಿ. ಪ್ರಣಾಮ್ ತೇಜಸ್ವಿ ಇವರು ಸಂಗೀತ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಜಿ ವೀರೇಶ್ ಇವರು ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಜಿ.ನೀಲಾಂಬಿಕೆ ವಂದಿಸಿದರು. ಎ.ಎಂ. ಶಿವಮೂರ್ತಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here