ವಿಜ್ಞಾನದಿಂದ ಜೀವನ ಸುಗಮ: ಡಾ.ಸಿ.ನಾಗಭೂಷಣ

0
17

ಬಳ್ಳಾರಿ,ಫೆ.28:ಅಸಾಧ್ಯವಾದುದೆಲ್ಲವನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ. ವಿಜ್ಞಾನದ ಸಹಾಯದಿಂದ ಜೀವನ ಅತ್ಯದ್ಭುತವೆನಿಸುತ್ತಿದೆ ಎಂದು ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಸಿ.ನಾಗಭೂಷಣ ಅವರು ಹೇಳಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ ಮತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿರ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2024 ಕಾರ್ಯಕ್ರಮವನ್ನು ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಅವರು ನಡೆದು ಬಂದ ದಾರಿ, ಸಾಧನೆಗಳನ್ನು ಹಾಗೂ ಅವರು ಟಾಟಾ ಇನ್ಸಿಟ್ಯೂಟ್ ಅನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ನಾವು ಸ್ಮರಿಸಬೇಕು ಎಂದರು.
ಕೋವಿಡ್-19 ನಲ್ಲಿ ಬಳಲುತ್ತಿದ್ದ ರೋಗಿಗಳಿಗೆ ವ್ಯಾಕ್ಸಿನೇಷನ್ ನೀಡಿ ಮತ್ತು ವಿದೇಶಗಳಿಗೆ ಸರಬರಾಜು ಮಾಡುವಲ್ಲಿ ನಮ್ಮ ದೇಶದ ವಿಜ್ಞಾನಿಗಳು ಮಹತ್ ಸಾಧನೆ ಹೊಂದಿದ್ದಾರೆ. ಅದೇರೀತಿಯಾಗಿ ಚಂದ್ರಯಾನ-3 ಉಡಾವಣೆಯಲ್ಲಿ ಇಸ್ರೋ ಮಹಿಳಾ ವಿಜ್ಞಾನಿಗಳ ಪಾತ್ರವು ಮಹತ್ವವಾಗಿದೆ ಎಂದರು.
ಬಳ್ಳಾರಿಯ ವಿಜ್ಞಾನ ಕೇಂದ್ರವನ್ನು ತೆರೆಯಲು ನನ್ನ ಅಳಿಲು ಸೇವೆ ಇದೆ ಎನ್ನುವುದರ ಬಗ್ಗೆ ನೆನಪು ಮಾಡುತ್ತಾ, ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಮಾತನಾಡಿ, ವಿಜ್ಞಾನ ಒಂದು ಆಸಕ್ತಿದಾಯಕ ವಿಷಯವಾಗಿದ್ದು, ಸತತ ಪ್ರಯತ್ನವಿದ್ದರೆ ವಿಜ್ಞಾನದಲ್ಲಿ ಏನಾದರೂ ಸಾಧಿಸಬಹುದು ಮತ್ತು ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು ಎಂದು ಅಭಿಮತ ವ್ಯಕ್ತಪಡಿಸಿದರು.

ಕಿಷ್ಕಿಂದ ವಿಶ್ವವಿದ್ಯಾಲಯದ ಡೀನ್‍ಗಳಾದ ಡಾ.ಮಂಜುನಾಥ್.ಎಸ್ ಅವರು ಮಾತನಾಡಿ, ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದು. ವಿದ್ಯಾರ್ಥಿಗಳು ಅರ್ಥಗರ್ಭಿತ ಪ್ರಶ್ನೆಗಳನ್ನು ಹೇಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ಕಲಿಕೆಯಲ್ಲಿ ಸತತ ಪ್ರಯತ್ನವಿರಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಗಿರಿಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನದ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಬಳಿಕ ಬೆಳಕು ಮತ್ತು ಶಬ್ದ ತರಂಗಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಆಕಾಶ ಮತ್ತು ಸಮುದ್ರ ನೀಲಿ ಯಾಗಲು ಕಾರಣವೇನು ಎನ್ನುವುದರ ಬಗ್ಗೆ ವಿವರಣೆ ನೀಡಿದರು. ಬಣ್ಣಗಳ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಈ ವೇಳೆ ಜಿಲ್ಲಾ ಪಂಚಾಯತ್‍ನ ಯೋಜನಾ ಸಂಯೋಜಕರಾದ (ಎನ್‍ಆರ್‍ಡಿಎಂಎಸ್) ರಾಮಚಂದ್ರರೆಡ್ಡಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮತ್ತೀತರರು ಉಪಸ್ಥಿತರಿದ್ದರು.
ಕುಮಾರಿ ಕೆ.ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಭೂಮಿಕಾ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here