ಜಿಲ್ಲೆಯ ರೈತ ಸಂಪರ್ಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ಖರೀದಿಸಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ : ಜಿಲ್ಲಾಧಿಕಾರಿ ನಿತೇಶ ಪಾಟೀಲ

0
130

ಧಾರವಾಡ : ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮುಂಗಾರು ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಲಾಕ್‍ಡೌನ್ ಅವಧಿಯಲ್ಲೂ ಕೃಷಿ ಚಟುವಟಿಕೆಗಳಿಗ್ಗೆ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ರೈತರಿಗೆ ಅನುಕೂಲವಾಗಲು ರೈತ ಸಂಪರ್ಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿತರಿಸಲು ಅವಕಾಶ ನೀಡಲಾಗಿದೆ. ರೈತರು ತಮ್ಮ ಗ್ರಾಮದ ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಲೇಕ್ಕಾಧಿಕಾರಿಯಿಂದ ಈ ಕುರಿತು ಅನುಮತಿ ಪತ್ರ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರಿಗೆ ಸಕಾಲದಲ್ಲಿ ಅಗತ್ಯವಿರುವ ಬಿತ್ತನೆ ಬೀಜ ಪೂರೈಸಲು ಅನುಕೂಲವಾಗುವಂತೆ ಈಗಾಗಲೇ ಜಿಲ್ಲೆಯಲ್ಲಿ ಇರುವ 14 ರೈತ ಸಂಪರ್ಕ ಕೇಂದ್ರಗಳ ಜೋತೆಗೆ 14 ಉಪ ಕೇಂದ್ರಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ರೈತರು ಲಾಕ್‍ಡೌನ್ ಸಮಯದಲ್ಲಿ ವಿನಾಕಾರಣ ದೂರದ ಕೇಂದ್ರಗಳಿಗೆ ಹೊಗದೆ, ತಮ್ಮ ಗ್ರಾಮಕ್ಕೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರ ಅಥವಾ ಉಪ ಕೇಂದ್ರಗಳಲ್ಲಿ ತಮಗೆ ಬೇಕಿರುವ ಬೀಜ ಖರೀದಿಸಬೇಕು. ಇದರಿಂದ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ಸಾರ್ವಜನಿಕ ಆರೋಗ್ಯ ಸುರಕ್ಷತೆಗೆ ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಗಳು:
ಧಾರವಾಡ ತಾಲೂಕು ರೈತ ಸಂಪರ್ಕ ಕೇಂದ್ರಗಳು: ಧಾರವಾಡ, ಗರಗ, ಅಮ್ಮಿನಭಾವಿ, ಅಳ್ನಾವರ ಮತ್ತು ಉಪ ಕೇಂದ್ರಗಳಾದ ನಿಗದಿ, ನರೇಂದ್ರ, ಹೆಬ್ಬಳ್ಳಿ ಹಾಗೂ ಉಪ್ಪಿನ ಬೆಟಗೇರಿ.
ಹುಬ್ಬಳ್ಳಿ ತಾಲೂಕು ರೈತ ಸಂಪರ್ಕ ಕೇಂದ್ರಗಳು: ಹುಬ್ಬಳ್ಳಿ, ಶಿರಗುಪ್ಪಿ, ಛಬ್ಬಿ, ಮತ್ತು ಉಪ ಕೇಂದ್ರಗಳಾದ ಬಿಡ್ನಾಳ (ಬಂಕಾಪೂರ), ಕುಸುಗಲ್, ಅಂಚಟಗೇರಿ.
ಕಲಘಟಗಿ ತಾಲೂಕು ರೈತ ಸಂಪರ್ಕ ಕೇಂದ್ರಗಳು: ಕಲಘಟಗಿ, ತಬಕದಹೊನ್ನಳ್ಳಿ, ದುಮ್ಮವಾಡ, ಮತ್ತು ಉಪ ಕೇಂದ್ರಗಳಾದ ತಾವರಗೇರಿ, ಗಂಜಿಗಟ್ಟಿ, ಮಿಶ್ರಿಕೋಟಿ.
ಕುಂದಗೋಳ ತಾಲೂಕು ರೈತ ಸಂಪರ್ಕ ಕೇಂದ್ರಗಳು: ಕುಂದಗೋಳ, ಸಂಶಿ, ಮತ್ತು ಉಪ ಕೇಂದ್ರಗಳಾದ ಯಲಿವಾಳ, ಯರಗುಪ್ಪಿ.
ನವಲಗುಂದ ತಾಲೂಕು ರೈತ ಸಂಪರ್ಕ ಕೇಂದ್ರಗಳು: ಮೊರಬ, ಅಣ್ಣಿಗೇರಿ ಮತ್ತು ಉಪ ಕೇಂದ್ರಗಳಾದ ನವಲಗುಂದ, ಶಲವಡಿ ಗ್ರಾಮಗಳಲ್ಲಿ ಬೀಜ ವಿತರಿಸಲಾಗುವುದು.
ರೈತರು ಈ ನಿಗದಿತ ಕೇಂದ್ರಗಳಲ್ಲಿ ಬೀಜ ಖರೀದಿಸಲು ಅನುಕೂಲವಾಗುವಂತೆ ಖರೀದಿ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಿ ಅವಕಾಶ ನೀಡಲಾಗಿದೆ. ರೈತರು ತಮ್ಮ ವ್ಯಾಪ್ತಿಯ ಪಿಡಿಓ ಮತ್ತು ಗ್ರಾಮಲೇಕ್ಕಾಧಿಕಾರಿಯಿಂದ ಬೀಜ ಖರೀದಿಸಲು ಸಂಚರಿಸುವುದಕ್ಕಾಗಿ ಅನುಮತಿ ಪತ್ರ ಪಡೆದುಕೊಂಡು ಸಂಚರಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here