ಕೊರೊನ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಸಕಲ ಕ್ರಮ : ಜಿಲ್ಲಾಧಿಕಾರಿ.

0
70

ದಾವಣಗೆರೆ,ಮೇ: ಕೊರೊನಾ ಸೋಂಕು ತಡೆಗಟ್ಟಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ಸೋಂಕು ನಿವಾರಣೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಸರ್ಕಾರದ ಆದೇಶದ ಮೆರೆಗೆ ಮೇ.31 ರವರೆಗೆ ಸಂಪೂರ್ಣ ಲಾಕ್‍ಡೌನ್ ವಿಸ್ತರಣೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಸೋಮವಾರ ಜಗಳೂರಿನ ತರಳಬಾಳು ಸಮುದಾಯದ ಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 2ನೇ ಅಲೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಮೇ.23 ರಂದು ಜಗಳೂರು ತಾಲ್ಲೂಕಿನಲ್ಲಿ ಒಟ್ಟು 852 ಪಾಸಿಟಿವ್ ಪ್ರಕರಣಗಳಿದ್ದು, 390 ಜನರು ಗುಣಮುಖರಾಗಿದ್ದಾರೆ. 167 ಜನರು ಹೋಮ್ ಐಸೋಲೇಷನ್ ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಒಟ್ಟು 462 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಡಿ.ಸಿ.ಹೆಚ್.ಸಿ ಯಲ್ಲಿ 37 ಜನ, ಮೆದಗಿನಕೆರೆ ಕೋವಿಡ್ ಕೇರ್ ಸೆಂಟರ್‍ನಲ್ಲಿ 85 ಜನ, ಜಗಳೂರು ಟೌನ್ (ಲಿಂಗನಹಳ್ಳಿ ರಸ್ತೆ) ಕೋವಿಡ್ ಕೇರ್ ಸೆಂಟರ್‍ನಲ್ಲಿ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಒಟ್ಟು 9 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಕೋವಿಡ್-19 2ನೇ ಅಲೆಯಲ್ಲಿ ಹೆಚ್ಚಾಗಿ ಗ್ರಾಮಾಂತರ ಭಾಗಗಳಲ್ಲೇ ಸೋಂಕು ಹೆಚ್ಚಾಗಿ ಹರಡುತ್ತಿರುವುದಕ್ಕೆ ಕಾರಣವೆಂದರೆ ಗ್ರಾಮದ ಜನರು ನಿಯಮಗಳನ್ನು ಮೀರಿ ಸಭೆ, ಸಮಾರಂಭ, ಮದುವೆ, ಜಾತ್ರೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜಲ್ಲಿಕಟ್ಟೆ, ದೇವಸ್ಥಾನದ ಆವರಣಗಳಲ್ಲಿ ಗುಂಪುಗಟ್ಟಿ ಸೇರುವುದಲ್ಲದೇ, ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿಬಿಟ್ಟಿದ್ದಾರೆ. ಗ್ರಾಮಗಳಲ್ಲಿ ಬಹುತೇಕರು ಮಾಸ್ಕ್ ಧರಿಸುವುದೇ ಇಲ್ಲ. ಧರಿಸಿದರು ಬೇಕಾಬಿಟ್ಟಿ ಹಾಕಿಕೊಳ್ಳುತ್ತಾರೆ.
ಬೆಂಗಳೂರಿನಿಂದ ಬರುವವರು ಅಗತ್ಯ ಮಾಹಿತಿಗಳನ್ನು ಕೊಡದೇ ಮನೆ ಸೇರುತ್ತಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ ಸ್ಥಳೀಯ ವೈದ್ಯರ ಬಳಿಯೋ ಅಥವಾ ಮೆಡಿಕಲ್ ಶಾಪ್‍ಗಳಲ್ಲೋ ಬೇಕಾದ ಮಾತ್ರೆಗಳನ್ನು ತೆಗೆದುಕೊಂಡು ನುಂಗುತ್ತಾರೆ. ಸೋಂಕಿನ ಪ್ರಮಾಣ ಹೆಚ್ಚಾಗಿ ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ 50-70 ಕ್ಕೆ ಬಂದಾಗ ಬೆಡ್ ಬೇಕು, ವೆಂಟಿಲೇಟರ್ ಬೇಕು ಎಂದು ಕೊನೆಯ ಹಂತದಲ್ಲಿ ಆಸ್ಪತ್ರೆಗಳಿಗೆ ಬರುತ್ತಾರೆ. ಇದರಿಂದ ಜೀವ ಉಳಿಸಲು ಕಷ್ಟವಾಗುತ್ತಿದೆ ಎಂದರು.
ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿದ್ದು, ಯಾರು ಕೂಡ ಮನೆಯಲ್ಲಿ ಚಿಕಿತ್ಸೆ ಪಡೆಯದೇ ಕೋವಿಡ್ ಕೇರ್ ಸೆಂಟರ್‍ಗೆ ಬರಬೇಕು. ಮನೆಯಲ್ಲೆ ಚಿಕಿತ್ಸೆ ಪಡೆಯುವ ಸೋಂಕಿತನಿಗೆ ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ ಇರಬೇಕು. ಹಾಗೂ ಸೋಂಕಿತ ಮುಟ್ಟಿದ ವಸ್ತುಗಳನ್ನು ಮನೆಯ ಇತರೆ ಸದಸ್ಯರು ಮುಟ್ಟಬಾರದು. ಇಂತಹದೊಂದು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವವರು ಮಾತ್ರ ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು ಗ್ರಾಮೀಣ ಜನರ ಬದುಕು ದುಸ್ತರವಾಗಿದೆ. ಜಗಳೂರಿನಂತಹ ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಅವರು ಜೀವನ ನಡೆಸಲು ನರೇಗ ಕೆಲಸ ಆಧಾರವಾಗಿದೆ. ಆದ್ದರಿಂದ ಉದ್ಯೋಗ ಖಾತ್ರಿಯೊಳಗೆ ಹೆಚ್ಚು ಕೆಲಸ ಕೊಡಿ ಎಂದು ಸಿಇಒಗೆ ಸೂಚನೆ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ಗುಂಪು ಕೆಲಸ ನಿಲ್ಲಿಸಿ ವೈಯಕ್ತಿಕ ನೆಲೆಯಲ್ಲಿ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಿದರೆ ಅವರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೃಷಿ ಕೂಲಿಕಾರರು ಅಗತ್ಯ ಕೃಷಿ ಪರಿಕರ ಖರೀದಿಸಲು ಹಾಗೂ ಕೃಷಿ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಿ. ಲಾಕ್‍ಡೌನ್ ಇದ್ದರು ಕೃಷಿ ಚಟುವಟಿಕೆದಾರರಿಗೆ ರಿಯಾಯಿತಿ ಇದ್ದು ಪೊಲೀಸರು ಈ ವರ್ಗದ ಜನರಿಗೆ ಸಹಕಾರ ನೀಡಬೇಕು ಎಂದರು.
ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಜಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದ್ದು ಪರಿಸ್ಥಿತಿ ಹತೋಟಿಯಲ್ಲಿದೆ. ಇದು ಹೀಗೆ ಮುಂದುವರಿಯಲಿ. ತಾಲ್ಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್‍ಗಳಿದ್ದು ಅಗತ್ಯವಿರುವಷ್ಟು ಆಕ್ಸಿಜನ್ ಬಳಸಿ. ಅನಗತ್ಯವಾಗಿ ಆಕ್ಸಿಜನ್‍ನ್ನು ರೋಗಿಗಳಿಗೆ ಪೂರೈಕೆ ಮಾಡಬೇಡಿ. ಈಗಾಗಲೇ ತಾಲ್ಲೂಕಿನ 13 ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಿದ್ದು, ಹೋಮ್ ಐಸೋಲೆಷನ್‍ನ್ನು ಸಂಪೂರ್ಣ ನಿಲ್ಲಿಸಿ ಸೋಂಕಿತರನ್ನು ಈ ಕೇಂದ್ರಗಳಿಗೆ ದಾಖಲಿಸಿ ಎಂದ ಅವರು ಹೆಚ್ಚು ಆಕ್ಸಿಜನ್ ಬಳಸಿದರೆ ಬ್ಲಾಕ್ ಫಂಗಸ್ ಬರುತ್ತದೆ ಎಂದು ವಿಜ್ಞಾನಗಳು ಹೇಳಿದ್ದಾರೆ ಎಂದರು.
ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಮಾತನಾಡಿ, ಸರ್ಕಾರದಿಂದ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಕೊರೊನಾ ತಡೆಗೆ ವಿವಿಧ ಪರಿಕರಗಳ ಖರೀದಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸುಮಾರು ರೂ.1 ಕೋಟಿ ಅನುದಾನ ನೀಡಲಾಗುವುದು ಎಂದ ಅವರು, ತಾಲ್ಲೂಕಿನ ಕಾಟನಹಳ್ಳಿ ಗ್ರಾಮದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಜೀವ ಅಮೂಲ್ಯವಾದರಿಂದ ಕಾಪಾಡಲು ಎಲ್ಲರೂ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ನನಗೆ ಕೊರೊನಾ ಸೋಂಕು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅನೇಕರು ರಾಮಚಂದ್ರ ಹೋಗಿಬಿಟ್ಟ, ವೆಂಟಿಲೇಟರ್ ಗೆ ಹಾಕಿದ್ದಾರೆ. ಗುಂಡಿ ಸಿದ್ಧವಾಗಿದೆ ಎಂದು ಕೆಲವರು ಟೀಕೆ ಮಾಡಿದರು. ಆದರೆ ನನಗೆ ಅವರ ಟೀಕೆಗಳೇ ಶ್ರೀರಕ್ಷೆ ಎಂದ ಅವರು, ನಾನು ಆಸ್ಪತ್ರೆಯಲ್ಲಿದ್ದರೆ ನನ್ನ ಮನಸ್ಸು ಜಗಳೂರಿನಲ್ಲಿತ್ತು. ಬಹಳ ಮಂದಿ ಆತ್ಮೀಯರು ಅಗಲಿದ್ದಾರೆ. ಅಗಲಿದ್ದ ಕುಟುಂಬದವರೊಂದಿಗೆ ನಾವಿದ್ದೇವೆ, ಅವರ ಯೋಗಕ್ಷೇಮ ನೋಡುತ್ತೇನೆ ಎಂದು ಭಾವುಕರಾಗಿ ನುಡಿದರು. ಪಕ್ಷಾತೀತವಾಗಿ ಕಲ್ಲೆರುದ್ರೇಶ್ ತಮ್ಮ ಜತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಕೋವಿಡ್-19 ಮೊದಲನೇ ಅಲೆ ಪ್ರಾರಂಭವಾದಾಗ ದಾವಣಗೆರೆಯಲ್ಲಿ ಒಂದೆರೆಡು ಕೇಸ್‍ಗಳು ಇತ್ತು. ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೂ ಹೆಚ್ಚು ಪ್ರಕರಣಗಳು ದಾಖಲಾದವು. ಅಕ್ಟೋಬರ್ ತಿಂಗಳಲ್ಲಿ ಪ್ರಕರಣಗಳು ಕಡಿಮೆ ಆಗುತ್ತಾ ಬಂದವು. ಈ ಹಂತದಲ್ಲಿ ಕೋವಿಡ್ ಕುರಿತಾದ ಮಾಹಿತಿ ಕೊರತೆ ಇತ್ತು. ಆದರೆ 2ನೇ ಅಲೆಯಲ್ಲಿ ಮಾಹಿತಿ ಹಾಗೂ ಅನುಭವಗಳಡೆರೆಡು ಇದ್ದು ಸೋಂಕಿನ ವಿರುದ್ಧ ಹೋರಾಡಲು ಜನರು ಸ್ಪಂದನೆ ಕೊಡುತ್ತಿಲ್ಲ ಎಂದು ಬೇಸರಿಸಿದರು.
ಮೊದಲ ಹಂತದಲ್ಲಿ ಕೆಮ್ಮು, ಶೀತ, ಜ್ವರ, ತಲೆನೋವು ಬರುವ ಮೂಲಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿತ್ತು, 2ನೇ ಅಲೆಯಲ್ಲಿ ಈ ಲಕ್ಷಣಗಳೊಂದಿಗೆ ತಲೆನೋವು, ಕಣ್ಣು ಕೆಂಪಾಗುವುದು, ಉಸಿರಾಟದ ತೊಂದರೆ, ಅಲರ್ಜಿ ಸೇರಿದಂತೆ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಜನರು ನಿರ್ಲಕ್ಷ್ಯ ಮಾಡದೇ ಮೊದಲ ಹಂತದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೆ ಜೀವ ಉಳಿಸುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಜನರು ಕೊನೆಯ ಹಂತದಲ್ಲಿ ಸೋಂಕು ಶ್ವಾಸಕೋಶ ತಲುಪಿ ಉಸಿರಾಟದ ತೊಂದರೆಯಾದ ಬಳಿಕ ಬರುತ್ತಿದ್ದಾರೆ. ಇದರಿಂದ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ ಎಂದರು.
ಪ್ರತೀ ಗ್ರಾಮ ಪಂಚಾಯಿತಿ ಪಟ್ಟಣದಲ್ಲಿ ಹಾಗೂ ಸ್ಥಳೀಯ ಟಾಸ್ಕ್ ಪೋರ್ಸ್ ಸಮಿತಿಯವರು ಒಂದೊಂದು ಥೀಮ್ ಇಟ್ಟುಕೊಂಡು ಜನರಲ್ಲಿ ಕೊರೊನಾ ಸೋಂಕು ಹಾಗೂ ವ್ಯಾಕ್ಸಿನೇಷನ್ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಈ ವೇಳೆ ಶಾಸಕ ರಾಮಚಂದ್ರಪ್ಪ ಜಗಳೂರಿನಲ್ಲಿ ಬ್ಲಾಕ್ ಫಂಗಸ್ ಗೆ ತುತ್ತಾದವರು ಎಷ್ಟು ಜನ ಇದ್ದಾರೆ? ಇದಕ್ಕೆ ಬೇಕಾದ ಔಷಧಿಗಳು ಸಿಗುತ್ತಿದ್ದೇಯೇ ಎಂದು ಪ್ರಶ್ನಿಸಿದರು. ಇದಕ್ಕೆ ಡಾ.ರಾಘವನ್ ಜಗಳೂರು ತಾಲ್ಲೂಕಿನಲ್ಲಿ ಇಲ್ಲಿಯವೆರಗೂ ಯಾರಿಗೂ ಬ್ಲಾಕ್ ಫಂಗಸ್ ಬಂದಿಲ್ಲ. ಈ ಖಾಯಿಲೆ ಬಂದವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿದ್ದು, ಬೇಕಾದ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಡಿಹೆಚ್‍ಒ ಡಾ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here