ಹಲವು ನಿಯಮಗಳ ಜಾರಿಯೊಂದಿಗೆ ಆರಂಭ ವಾಯ್ತು ಕುಕ್ಕೆ ಸುಬ್ರಹ್ಮಣ್ಯ ಸೇವೆಗಳು

0
563

ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು. ಅನ್‌ಲಾಕ್ ಜಾರಿ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವಾ ಪೂಜೆಗಳು ಆರಂಭಗೊಂಡಿದೆ.

ಸರ್ಕಾರದ ಕೋವಿಡ್ ಮಾರ್ಗಸೂಚಿಗಳ ಅನ್ವಯ ಭಕ್ತಾದಿಗಳಿಗೆ ಸೇವೆಗಳನ್ನು ಒಪ್ಪಿಸಲು ಅವಕಾಶ ನೀಡಲಾಗಿದೆ. ಮೊದಲ ದಿನವೇ 14 ಸರ್ಪ ಸಂಸ್ಕಾರ ಮತ್ತು 200ಕ್ಕೂ ಅಧಿಕ ಆಶ್ಲೇಷ ಬಲಿ ಸೇವೆಗಳು ದೇವಾಲಯದಲ್ಲಿ ನಡೆದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಸೇವೆಗಳು ಆರಂಭಗೊಂಡಿದೆ. ಎಲ್ಲಾ ಭಕ್ತರಿಗೂ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಬಳಕೆ ಮಾಡಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ದೇವಾಲಯದಲ್ಲಿ ಸೇವೆ, ವಿಶೇಷ ಪೂಜೆಗಳನ್ನು ಮಾಡಿಸುವ ಭಕ್ತರು ಮಾತ್ರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿದ ನೆಗೆಟಿವ್ ವರದಿ ಅಥವಾ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ.

ಅಲ್ಲದೇ ಪ್ರತಿ ಸೇವೆಗೆ ರಶೀದಿ ಪಡೆದ ಭಕ್ತರ ಪೈಕಿ ಇಬ್ಬರು ಮಾತ್ರ ಭಾಗವಹಿಸಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಸರ್ಪ ಸಂಸ್ಕಾರ ಸೇವೆಗೂ ಲಸಿಕೆ ಅಥವಾ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

ದೇವಾಲಯದಲ್ಲಿ ಜನಸಂದಣಿ ಕಡಿಮೆ ಮಾಡಲು ಸರ್ಪ ಸಂಸ್ಕಾರವನ್ನು ಎರಡು ಬ್ಯಾಚ್‌ಗಳ ರೀತಿ ವಿಂಗಡನೆ ಮಾಡಲಾಗಿದೆ‌‌. ಇನ್ನು ಆಶ್ಲೇಷ ಬಲಿ ಪೂಜೆಯಲ್ಲೂ 4 ಬ್ಯಾಚ್‌ಗಳನ್ನು ಮಾಡಿ ಭಕ್ತರು ಗುಂಪುಗೂಡದಂತೆ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಸರ್ಕಾರ ಜುಲೈ 25ರಿಂದ ಎಲ್ಲಾ ದೇವಾಲಯದಲ್ಲಿ ಪ್ರಸಾದ, ಅನ್ನದಾನ ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಅನ್ನದಾನ ಸೇವೆಯೂ ಆರಂಭಗೊಂಡಿದ್ದು, ಬಫೆ ಮಾದರಿಯಲ್ಲಿ ಹಾಳೆ ತಟ್ಟೆಯಲ್ಲಿ ಅನ್ನಪ್ರಸಾದವನ್ನು ನೀಡಲಾಗುತ್ತಿದೆ.

ಕೋಟಿ-ಕೋಟಿ ನಷ್ಟ; ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು. ಪ್ರತಿದನ ಅರ್ಚಕರು, ಸಿಬ್ಬಂದಿಗಳು ಮಾತ್ರ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಅನ್‌ಲಾಕ್ ಘೋಷಣೆಯಾದರೂ ದೇವಾಲಯಗಳಲ್ಲಿ ಹೆಚ್ಚು ಜನರು ಸೇರುವ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಿಲ್ಲ. ವಿವಿಧ ಸೇವೆ, ಪ್ರಸಾದ ವಿನಿಯೋಗಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರ ದೇವಾಲಯಗಳಿವೆ. ಇವುಗಳಲ್ಲಿ ಪ್ರಮುಖ ದೇವಾಲಯಗಳು 144 ಹೆಚ್ಚು ಆದಾಯ ಬರುವ ದೇವಾಲಯವನ್ನು‌ ‘ಎ’ ವರ್ಗಕ್ಕೆ ಸೇರಿಸಲಾಗಿದೆ.

ಈ ದೇವಾಲಯಗಳಿಂದ ವಾರ್ಷಿಕ ತಲಾ 25 ಲಕ್ಷ ರೂಪಾಯಿ ಆದಾಯ ಮುಜರಾಯಿ ಇಲಾಖೆಗೆ ಬರುತಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಭಕ್ತರಿಗೆ ಪ್ರವೇಶ ನಿಷೇಧವಾಗಿದ್ದು, ಹುಂಡಿ ಕಾಣಿಕೆಯೂ ಕಡಿಮೆಯಾಗಿದೆ. ಜಾತ್ರೆ, ಧಾರ್ಮಿಕ ಕಾರ್ಯಕ್ರ, ಸೇವೆಗಳು ಬಂದ್ ಆದ ಕಾರಣ ದೇವಾಲಯದ ಆದಾಯವೂ ಕುಸಿತವಾಗಿದೆ. ಕರ್ನಾಟಕದ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಕುಕ್ಕೆ ಸುಬ್ರಮಣ್ಯ ನಂಬರ್ 1 ಆಗಿದೆ. ವಾರ್ಷಿಕ ನೂರು ಕೋಟಿಗೂ ಅಧಿಕ ಆದಾಯ ಈ ದೇವಾಲಯಕ್ಕಿದೆ. ಲಾಕ್‌ಡೌನ್ ಅವಧಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಮಾರಯ 22 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕಟೀಲು ದುರ್ಗಾಪರಮೇಶ್ವರಿ 7 ಕೋಟಿ, ಪುತ್ತೂರು ಮಹಾಲಿಂಗೇಶ್ವರ 1.5 ಕೋಟಿ ರೂಪಾಯಿ, ಕದ್ರಿ ಮಂಜುನಾಥೇಶ್ವರ 2 ಕೋಟಿ, ಪೊಳಲಿ ರಾಜರಾಜೇಶ್ವರಿ 2 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕುಕ್ಕೆ ಸುಬ್ರಮಣ್ಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಮತ್ತು ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ ಸೇವೆಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ದೇವಾಲಯಕ್ಕೆ ಹರಿದುಬರುತಿತ್ತು.

ಈಗ ದೇವಾಲಯದಲ್ಲಿ ವಿವಿಧ ಸೇವೆಗಳು ಆರಂಭವಾಗಿವೆ. ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಆದಾಯ ಹೆಚ್ಚಾಗುಗ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here