ಕೋವಿಡ್ ಪಾಸಿಟಿವಿಟಿ ಹೆಚ್ಚಿರುವ ಗ್ರಾಮಗಳ ವೀಕ್ಷಣೆ ಮಾಡಿ: ಚಾರುಲತಾ ಸೋಮಲ್

0
105

ಮಡಿಕೇರಿ -ಜಿಲ್ಲೆಯ ಯಾವ ಯಾವ ಗ್ರಾಮಗಳಲ್ಲಿ 20 ಕ್ಕಿಂತ ಹೆಚ್ಚು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ, ಅಂತಹ ಗ್ರಾಮಗಳಿಗೆ ತಹಶೀಲ್ದಾರ್, ತಾ.ಪಂ.ಇಒ, ಡಿವೈಎಸ್‍ಪಿ, ತಾಲ್ಲೂಕು ವೈದ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳು ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ವಿಡಿಯೊ ಸಂವಾದ ಮೂಲಕ ಶುಕ್ರವಾರ ತಹಶೀಲ್ದಾರರು ಸೇರಿದಂತೆ ತಾಲ್ಲೂಕು ಮಟ್ಟದ ಜೊತೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ಐದು ತಾಲ್ಲೂಕುಗಳನ್ನು ಗಮನಿಸಿದಾಗ ಇನ್ನೂ ಬಹಳ ಹೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಆ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಶೇ 12 ರಷ್ಟು, ವಿರಾಜಪೇಟೆ ತಾಲ್ಲೂಕಿನಲ್ಲಿ 11 ರಷ್ಟು ಹಾಗೂ ಸೋಮವಾರಪೇಟೆ ತಾಲ್ಲೂಕು ಶೇ.14 ರಷ್ಟು ಪಾಸಿಟಿವಿಟಿ ಪ್ರಮಾಣ ಕಂಡುಬರುತ್ತಿದೆ. ಆದ್ದರಿಂದ ಪಾಸಿಟಿವಿಟಿ ಪ್ರಮಾಣವನ್ನು ಕಡಿಮೆ ಮಾಡಲು ಪ್ರತಿ ಹಂತದ ಅಧಿಕಾರಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮುಂಚೂಣಿ ಕಾರ್ಯಕರ್ತರು ಹಾಗೂ ಕಾರ್ಮಿಕರಿಗೆ ಲಸಿಕೆ ನೀಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ 19 ಲಕ್ಷಣ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ ಔಷಧಿ ಪಡೆಯಬೇಕು. ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳು ಉತ್ತಮವಾಗಿ ನಡೆಯುತ್ತಿದ್ದು, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕಿದ್ದಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್ ನಿರೊಧಕ ಲಸಿಕೆ ನೀಡುವಲ್ಲಿ ಮುಂಚೂಣಿ ಕಾರ್ಯಕರ್ತರು ಹಾಗೂ ಕಾರ್ಮಿಕರಿಗೆ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದರು.
ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಸೋಮವಾರಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಹಾಗೆಯೇ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನೋಡಲ್ ಅಧಿಕಾರಿಗಳಾದ ಪಿ.ಶ್ರೀನಿವಾಸ್, ಮಚ್ಚಾಡೊ, ಕೆ.ಟಿ.ದರ್ಶನ್, ತಹಶೀಲ್ದಾರರಾದ ಯೋಗಾನಂದ, ಸೋಮವಾರಪೇಟೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ವಿರೂಪಾಕ್ಷ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪ.ಪಂ.ಇಒ ಶ್ರೀಧರ, ನಾಚಪ್ಪ, ಇತರರು ಕೋವಿಡ್ ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲೆಯಲ್ಲಿ ಮುಂಗಾರು ಪ್ರವೇಶವಾಗುತ್ತಿರುವ ಲಕ್ಷಣಗಳು ಕಾಣುತ್ತಿದ್ದು, ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕು. ಆ ದಿಸೆಯಲ್ಲಿ ‘ಪರಿಹಾರ ಕೇಂದ್ರ’ ಆರಂಭಿಸಬೇಕು, ಸೂಕ್ಷ್ಮ ಪ್ರದೇಶದ ಜನರಿಗೆ ಅಗತ್ಯ ಮುನ್ನೆಚ್ಚರ ಮಾಹಿತಿ ನೀಡಬೇಕು ಎಂದರು.

LEAVE A REPLY

Please enter your comment!
Please enter your name here