ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು: ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು..?

0
151

ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಮಾಡಿರುವ ಕಾಮಗಾರಿ ಈಗ ಕಳಪೆ ಮಟ್ಟದೆಂದು ಚರ್ಚೆಗೆ ಗ್ರಾಸವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಕಲಬುರ್ಗಿ ಮಂಡಳಿಯ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಿಂದ ದೂಪದಹಳ್ಳಿ ರಸ್ತೆಯವರೆಗೆ ಚರಂಡಿ ನಿರ್ಮಾಣ ಅಂದಾಜು ಒಂದು ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೊಂಡಿದ್ದು, ಈ ಕಾಮಗಾರಿಗಳು ತೀರಾ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.

ಕಾಮಗಾರಿ ಮಂಜೂರಾಗಿ ಆರು ತಿಂಗಳಾದರೂ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿದಿರುವುದಿಲ್ಲ. ಆರು ತಿಂಗಳ ಒಳಗೆ ಕಾಮಗಾರಿ ಮುಗಿಯದೇ ಇದ್ದ ಪಕ್ಷದಲ್ಲಿ ಮರು ಟೆಂಡರ್ ಮಾಡುವ ನಿಯಮವಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾಮಗಾರಿ ಮುಗಿಸಲು ಒಂದು ವರ್ಷವಾದರೂ ಸಹ ಕಾಮಗಾರಿ ಇನ್ನೂ ಮುಗಿದಿರುವುದಿಲ್ಲ. ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರು ಇದರ ಬಗ್ಗೆ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕಾಮಗಾರಿ ಗುತ್ತಿಗೆ ಪಡೆದಿರುವ ಬಿ.ದೇವಿಪ್ರಸಾದ್ ರವರ ಪರವಾಗಿ ರಾಜಕೀಯ ಕೈಗಳು ಕೆಲಸ ಮಾಡುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಈಗತಾನೇ ಮಾಡಿರುವ ಚರಂಡಿ ಕಾಮಗಾರಿ ಆಗಲೇ ಬಿರುಕು ಬಿಟ್ಟ ಸ್ಲ್ಯಾಬ್‌ಗಳು, ಕಬ್ಬಿಣದ ರಾಡುಗಳು ಹೊರಗೆ ಬಂದು ಜನರ ಜೀವ ತೆಗೆಯುವ ರೀತಿ ಬಾಯ್ತೆರೆದು ನಿಂತಿವೆ.
ಈ ಬಗ್ಗೆ ಈ ಹಿಂದೆಯೇ ಹಾಯ್ ಸಂಡೂರ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದನ್ನು ಗಮನಿಸಿದ ಪಟ್ಟಣದ ವಿವಿಧ ಸಂಘಟನೆಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವ ಪ್ರತಿಫಲವಾಗಿ ಚರಂಡಿ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದಕ್ಕೆ ಪೂರಕವಾಗಿ ರಾಜಕೀಯ ಪ್ರಭಾವವಿರಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಟೆಂಡರ್‌ದಾರರ ಬಗ್ಗೆ ಕ್ರಮ ವಹಿಸುತ್ತಿಲ್ಲವೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಸಾರ್ವಜನಿಕರಾದ ನೂರ್ ಅಹ್ಮದ್, ನಾಗರಾಜ್, ತೋಯಿದ್, ಕೊಟ್ರೇಶ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿಯನ್ನು ಸರಿಪಡಿಸುತ್ತೇವೆಂದು ಆರು ತಿಂಗಳು ಕಾಲಾವಕಾಶ ಪಡೆದರೂ ಸಹ ಇದುವರೆಗೂ ಕಾಮಗಾರಿ ಸರಿಪಡಿಸದೇ ಇರುವುದು ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಈ ಕೂಡಲೇ ಅಧಿಕಾರಿಗಳು ಸದರಿ ಕಾಮಗಾರಿ ಕೈಗೊಂಡಿರುವ ಟೆಂಡರ್‌ದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
-ಪಿ.ಚಂದ್ರಶೇಖರ್
ಸಂಘಟನಾ ಕಾರ್ಯದರ್ಶಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here