ಯುವಜನತೆ ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು:ಡಾ. ನಾಗೇಂದ್ರ ಎಫ್ ಹೊನ್ನಳ್ಳಿ

0
59

ಶಿವಮೊಗ್ಗ ಸೆಪ್ಟೆಂಬರ್ ೩೦:ದೇಶವನ್ನು ಮುನ್ನಡೆಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಹೊಂದಿರುವ ಯುವಜನತೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡು, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು

ಶಿವಮೊಗ್ಗ ಜಿಲ್ಲಾ ಚುನಾವಣಾ ಆಡಳಿತ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಬಸವೇಶ್ವರ ಪದವಿ ಪೂರ್ವ ಕಾಲೇಜು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬಸವರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಎರ್ಪಡಿಸಲಾಗಿದ್ದ ಶಿವಮೊಗ್ಗ ತಾಲ್ಲೂಕು ಮಟ್ಟದ ಇಎಲ್‌ಸಿ & ಸಿಜೆಸಿ ಸ್ಪರ್ಧೆಗಳು -೨೨ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸಲು ಮತ್ತು ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಇಎಲ್‌ಸಿ(ಎಲೆಕ್ಟೊರಲ್ ಲಿಟರಸಿ ಕ್ಲಬ್)ಗಳನ್ನು ಕಾಲೇಜುಗಳಲ್ಲಿ ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ಕುರಿತಾದ ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ, ಚರ್ಚೆಯಂತಹ ಅನೇಕ ಸ್ಪರ್ಧೆಗಳು ಮತ್ತು ಚಟುವಟಿಕೆ ಮೂಲಕ ಚುನಾವಣೆಯ ಪ್ರಕ್ರಿಯೆ ಮತ್ತು ಇದರ ಮಹತ್ವದ ಬಗ್ಗೆ ತಿಳಿಸಲಾಗುವುದು.

ಭಾರತೀಯ ಚುನಾವಣಾ ಆಯೋಗ ಸಂವಿಧಾನಾತ್ಮಕವಾಗಿ ರಚಿಸಲಾಗಿರುವ ಒಂದು ಅಂಗವಾಗಿದ್ದು, ಇದು ದೇಶದಲ್ಲಿ ಚುನಾವಣೆಗಳನ್ನು ನಡೆಸಲು ನಿರಂತರವಾಗಿ ಶ್ರಮವಹಿಸುತ್ತಿದೆ. ಯಶಸ್ವಿ ಚುನಾವಣೆಗಳಿಗಾಗಿ ನಿರಂತರವಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಸ್ವೀಪ್, ಇಎಲ್‌ಸಿ, ಸಿಜೆಸಿ, ಶಿಕ್ಷಕರು, ಅಧಿಕಾರಿಗಳ ಪಾಲ್ಗೊಳ್ಳುವಿಕೆಯಿಂದ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿವೆ. ನಮ್ಮ ಭಾರತೀಯ ಚುನಾವಣಾ ಆಯೋಗ ಅತ್ಯುತ್ತಮ ಮತ್ತು ಭದ್ರವಾದ ಸಂಸ್ಥೆಯಾಗಿದ್ದು ಪ್ರತಿ ರಾಜ್ಯಗಳು ಮತ್ತು ಇತರೆ ದೇಶಗಳಿಗೆ ಸಹ ಚುನಾವಣಾ ತರಬೇತಿ ನೀಡುತ್ತಾ ಬಂದಿದೆ.

ವಿದ್ಯಾರ್ಥಿಗಳು ಇಂದು ನಡೆಯುವ ಸ್ಪರ್ಧೆಗಳಲ್ಲಿ ಕೇವಲ ಸ್ಪರ್ಧೆಗಳೆಂದು ಪಾಲ್ಗೊಳ್ಳದೇ ಇಡೀ ಚುನಾವಣಾ ಪ್ರಕ್ರಿಯೆ ಅರ್ಥ ಮಾಡಿಕೊಂಡು, ತಾವು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು, ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹಾಗೂ ಚುನಾವಣೆಯಲ್ಲಿ ಏಕೆ ಕಡಿಮೆ ಮತದಾನ ಆಗುತ್ತಿದೆ, ಇನ್ನಿತರೆ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳನ್ನು ನಡೆಸಬೇಕು. ಹಾಗೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಅದರ ಭಾಗವಾಗಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಸ್ಪಂದನಶೀಲವಾಗಿದ್ದು, ಇದರ ಬಗ್ಗೆ ನೀವು ಸಂಪೂರ್ಣ ಅಧ್ಯಯನ ಮಾಡಬೇಕು. ಹಾಗೂ ಪ್ರಸ್ತುತ ಇರುವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಚಿಂತಿಸಬೇಕು ಎಂದು ತಿಳಿಸಿದರು.

ಪ್ರತಿ ವಿದ್ಯಾರ್ಥಿಗಳಲ್ಲಿ ಒಂದು ಸುಪ್ತ ಶಕ್ತಿ ಅಡಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸವನ್ನು ಮಾಡಬೇಕು. ಭವಿಷ್ಯ ಬದುಕಿನ ದಾರಿಯ ಆಯ್ಕೆಯಂಚಿನಲ್ಲಿರುವ ಯುವಜನತೆ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊಂದಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ನಾಯಕರನ್ನು ಆರಿಸುವ ಚುನಾವಣೆಯ ಎಲ್ಲ ಪ್ರಕ್ರಿಯೆ ಬಗ್ಗೆ ಅರಿತು, ಇತರರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು. ಹಾಗೂ ೧೮ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು ಹಾಗೂ ಇತರೆ ಅರ್ಹರನ್ನು ಸೇರ್ಪಡೆಗೊಳಿಸಬೇಕೆಂದರು.

ಜನವರಿ ೦೧ ಕ್ಕೆ ೧೮ ವರ್ಷ ತುಂಬುವ ಪ್ರತಿ ಯುವಜನತೆಯನ್ನು ಮತದಾರರ ಪಟ್ಟಿಗೆ ಸೇರಿಸಲು ಈಗ ವರ್ಷದಲ್ಲಿ ನಾಲ್ಕು ಬಾರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಪ್ಲೇಸ್ಟೋರ್‌ನಿಂದ ವೋಟರ್ ಹೆಲ್ಪ್ಲೈನ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಾವೇ ತಮ್ಮ ಮೊಬೈಲ್‌ನಲ್ಲೇ ಮತದಾರರ ಪಟ್ಟಿಗೆ ನೋಂದಣಿ, ವರ್ಗಾವಣೆ, ಹೆಸರು ತೆಗೆದು ಹಾಕುವುದು ಇತರೆ ತಿದ್ದುಪಡಿಗಳ ವಿವಿಧ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವ ಸರಳ ವಿಧಾನ ಜಾರಿಯಾಗಿದೆ. ಇದನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇಎಲ್‌ಸಿ&ಸಿಜೆಸಿ ಜಿಲ್ಲಾ ಪಿಯು ನೋಡಲ್ ಅಧಿಕಾರಿ ರವಿಕುಮಾರ್ ಎಸ್.ಹೆಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ಎಲೆಕ್ಟೊರಲ್ ಲಿಟರಸಿ ಕ್ಲಬ್‌ಗಳ ಮಹತ್ವ ಮತ್ತು ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ, ಬಸವೇಶ್ವರ ಅಕಾಡೆಮಿ ಆಫ್ ಎಜುಕೇಷನ್‌ನ ಅಧ್ಯಕ್ಷ ಎಸ್.ಮಲ್ಲೇಶಪ್ಪ, ಉಪಾಧ್ಯಕ್ಷ ನಂಜಪ್ಪ, ಕಾರ್ಯದರ್ಶಿ ಎಂ.ಎನ್.ಒಡೆಯರ್, ಜಯದೇವಪ್ಪ, ಪ್ರಾಂಶುಪಾಲರಾದ ಕೆ.ಹೆಚ್.ರಾಜು, ಉಪನ್ಯಾಸಕರಾದ ಸಂತೋಷ್, ಪ್ರತಿಭ, ಇನ್ನಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here