ತಲಕಾವೇರಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮೃತದೇಹ ಪತ್ತೆ

0
96

ಮಡಿಕೇರಿ ಆ.11-ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಉಂಟಾಗಿದ್ದ ಭೂ ಕುಸಿತದಿಂದ 5 ಮಂದಿ ಕಣ್ಮರೆಯಾಗಿದ್ದರು, ಅವರಲ್ಲಿ ಈಗಾಗಲೇ ಆನಂದ ತೀರ್ಥ ಆಚಾರ್‍ಅವರ ಮೃತ ದೇಹ ಸಿಕ್ಕಿದೆ. ಹಾಗೆಯೇ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಮೃತ ದೇಹ ಮಂಗಳವಾರ ಪತ್ತೆಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.

ಭಾಗಮಂಡಲದ ಹೋಟೆಲ್ ಮಯೂರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರ ಕಾರ್ಯಾಚರಣೆ ಸಂದರ್ಭದಲ್ಲಿ ಪಾತ್ರೆ, ಪಗಡೆ ಮತ್ತಿತರ ವಸ್ತುಗಳು ಸಿಕ್ಕಿದ ಕುರುಹು ಆಧಾರದ ಮೇಲೆ 2 ಕಿ.ಮೀ. ದೂರದಲ್ಲಿ ಪರಿಶೀಲನೆ ಮಾಡುವಂತೆ ಕಾರ್ಯಾಚರಣೆ ತಂಡಕ್ಕೆ ಸಲಹೆ ಮಾಡಲಾಗಿತ್ತು, ಅದರಂತೆ 2 ಕಿ.ಮೀ. ದೂರದಲ್ಲಿ ನಾರಾಯಣ ಆಚಾರ್ ಅವರ ದೇಹ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಪೊಲೀಸ್, ಅರಣ್ಯ, ಅಗ್ನಿ ಶಾಮಕ ಅಧಿಕಾರಿಗಳು ಹೀಗೆ ಎಲ್ಲರೂ ಸಹ ಶ್ರದ್ಧೆ ವಹಿಸಿ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಧಾನ ಅರ್ಚಕರ ದೇಹ ಸಿಕ್ಕಿರುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಲಾಗಿದೆ. ಪ್ರಧಾನ ಅರ್ಚಕರ ಅಂತ್ಯ ಸಂಸ್ಕಾರವನ್ನು ಇಂದೇ ನೆರವೇರಿಸಲಾಗುವುದು. ಈ ಸಂಬಂಧ ಕುಟುಂಬದವರು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ಇದೇ ಸಂದರ್ಭದಲ್ಲಿ ವಿವರಿಸಿದರು.ಇನ್ನೂ ಮೂವರ ಪತ್ತೆ ಕಾರ್ಯ ಮಾಡಬೇಕಿರುವುದರಿಂದ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.

ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿ ಕೋವಿಡ್ ಸಂಬಂಧಿಸಿದಂತೆ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶೀಲನಾ ಕಾರ್ಯ ಇರುವುದರಿಂದ ಬೆಂಗಳೂರಿಗೆ ತೆರಳುತ್ತಿದ್ದೇನೆ. ಶುಕ್ರವಾರ ಜಿಲ್ಲೆಗೆ ಆಗಮಿಸುತ್ತೇನೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹಾಗೆಯೇ ತಲಕಾವೇರಿ ದೇವಾಲಯಕ್ಕೆ ತೆರಳಲು ರಸ್ತೆ ಸರಿಪಡಿಸಲಾಗುತ್ತಿದ್ದು, ತಂತ್ರಿಗಳ ಮಾರ್ಗದರ್ಶನದಲ್ಲಿ, ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಶುಕ್ರವಾರದಿಂದ ಪೂಜಾ ಕಾರ್ಯವು ಆರಂಭವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ಸುದ್ದಿಗೋಷ್ಠಿ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇತರರು ಇದ್ದರು.

LEAVE A REPLY

Please enter your comment!
Please enter your name here