ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ತೃಪ್ತಿ ತಂದಿದೆ: ಭಂವರ್ ಸಿಂಗ್ ಮೀನಾ

0
149

ಮಡಿಕೇರಿ ಅ.27 :-ಕಳೆದ 2 ವರ್ಷಗಳಿಂದ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಂವರ್ ಸಿಂಗ್ ಮೀನಾ ಅವರು ಸರ್ಕಾರದ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ವರ್ಗಾವಣೆಯಾಗಿದ್ದು, ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಕೊಡಗು ಜಿಲ್ಲಾ ಪಂಚಾಯತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವರ್ಗಾವಣೆ ಆಗಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಫಲ ತಾಂಬೂಲ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಂವರ್ ಸಿಂಗ್ ಮೀನಾ ಅವರು, ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಶುಭ ಹಾರೈಸಿದರು. ಕಳೆದ ಎರಡು ವರ್ಷಗಳ ಕಾಲ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಅವಿಸ್ಮರಣೀಯ. ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ಎಲ್ಲಾ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸ್ಮರಿಸಿದರು.
ಕೊಡಗು ಜಿಲ್ಲೆಯಿಂದ ಅಸಂಖ್ಯಾತ ನೆನಪುಗಳನ್ನು ಹೊತ್ತು ಸಾಗುತ್ತಿದ್ದೇನೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆ ಅಭೂತಪೂರ್ವ ಸಾಧನೆ ಮಾಡಿದೆ. ಈ ಸಂಬಂಧ ಹಲವು ಪ್ರಶಸ್ತಿಗಳು ಲಭಿಸಿದ್ದು, ಮುಂದೆ ಎಲ್ಲಿಯೇ ಕರ್ತವ್ಯ ನಿರ್ವಹಿಸಿದರು ಇವು ನೆನಪಿನಲ್ಲಿ ಉಳಿಯಲಿವೆ. ಡಿಜಿಟಲ್ ಗ್ರಂಥಾಲಯಗಳ ನಿರ್ಮಾಣ, ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಸ್ಮರಣೀಯ ಕ್ಷಣ ಎಂದರು.
ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಮಾತನಾಡಿ, ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯು ಭಂವರ್ ಸಿಂಗ್ ಮೀನಾ ಅವರ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದನ್ನು ಮುಂದುವರೆಸಿಕೊಂಡು ಹೋಗಲು ಸರ್ವರ ಸಹಕಾರ ಕೋರಿದರು.
ಕೊಡಗು ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಯೋಜನಾ ನಿರ್ದೇಶಕರಾದ ಜಗದೀಶ್, ತಾ.ಪಂ.ಇಒ ಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕಿ ಹರ್ಷಿತ ಅಭಿಪ್ರಾಯ ಹಂಚಿಕೊಂಡರು.
ಜಿ.ಪಂ.ಉಪಕಾರ್ಯದರ್ಶಿ ಜಿ.ಧನರಾಜು, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ವಿರಾಜಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ರವೀಶ್, ಹೇಮಂತ್, ಶ್ರೀನಿವಾಸ್ ಇತರರು ಇದ್ದರು.
ಹಲವು ಸಾಧನೆ: ಜಿಲ್ಲೆಯ ಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣ ಮತ್ತು ಡಿಜಿಟಲೀಕರಣಗೊಳಿಸುವಲ್ಲಿ ಭಂವರ್ ಸಿಂಗ್ ಮೀನಾ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ. ಸ್ವಚ್ಛ ಭಾರತ್ ಮಿಷನ್ ಅನುಷ್ಠಾನದಲ್ಲಿಯೂ ಕೊಡಗು ಜಿಲ್ಲೆ ಮುಂಚೂಣಿಯಲ್ಲಿದ್ದು, ರಾಜ್ಯದ ಪ್ರಥಮ ಎಫ್.ಎಸ್.ಟಿ.ಪಿ ಘಟಕ ನಿರ್ಮಾಣದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.
ನೂತನ ಸಿಇಒ ಅಧಿಕಾರ ಸ್ವೀಕಾರ: ಕೊಡಗು ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಎಸ್.ಆಕಾಶ್ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು.
ಬೆಂಗಳೂರಿಗೆ ವರ್ಗಾವಣೆ ಆಗಿರುವ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಹೂ ಗುಚ್ಛ ನೀಡುವ ಮೂಲಕ ನೂತನ ಸಿ.ಇ.ಒ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಸಿ.ಇ.ಒ ಅವರು 2019 ನೇ ಬ್ಯಾಚ್ ನ ಐ.ಎ.ಎಸ್. ಅಧಿಕಾರಿಯಾಗಿದ್ದು, ಈ ಹಿಂದೆ ಬಳ್ಳಾರಿ ಜಿಲ್ಲೆ ಬಳ್ಳಾರಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯವರಾಗಿರುವ ಆಕಾಶ್ ಅವರು ವೈದ್ಯಕೀಯ ಶಿಕ್ಷಣ ಪದವೀಧರರಾಗಿದ್ದಾರೆ.

LEAVE A REPLY

Please enter your comment!
Please enter your name here