ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಜಿ.ಪಂ. ಸಿಇಒ ಕೆ.ರೇವಣಪ್ಪ

0
46

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 14 : ಸಂಜೀವಿನಿ ಎನ್. ಎಲ್.ಆರ್.ಎಲ್.ಎಮ್. ಯೋಜನೆಯಡಿ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳವನ್ನು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ 2023ರ ಫೆಬ್ರವರಿ 03 ರಿಂದ ಫೆಬ್ರವರಿ 05 ರವರೆಗೆ ನೆಲಮಂಗಲ ತಾಲ್ಲೂಕಿನಲ್ಲಿ ಆಯೋಜಿಸಲಾಗುತ್ತಿದ್ದು, ಮಹಿಳೆಯರು ಕೈಯಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಮೇಳದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ಅವರು ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಕಛೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿಂದು ನಡೆದ “ಸಂಜೀವಿನಿ ಎನ್.ಎಲ್.ಆರ್.ಎಮ್. ಯೋಜನೆಯಡಿ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ”ಯಲ್ಲಿ ಮೇಳದ ಉತ್ಪನ್ನಗಳ ಪ್ರದರ್ಶನ ಕುರಿತು ಅವರು ಮಾತನಾಡಿದರು.
ಮಹಿಳಾ ಉದ್ದಿಮೆದಾರರು ಕುಶಲಕರ್ಮಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳು ಸೇರಿದಂತೆ ಮೇಳದಲ್ಲಿ ಉತ್ಪನ್ನ ಪ್ರದರ್ಶನಕ್ಕೆ ಎಲ್ಲರೂ ಭಾಗವಹಿಸಬಹುದಾಗಿದೆ. ರಾಜ್ಯ ಹಾಗೂ ಜಿಲ್ಲೆಯ ವಿವಿಧ ಉತ್ಪನ್ನಗಳ ಪರಿಚಯಿಸಲು ಈ ಮೇಳ ಪೂರಕವಾಗಲಿದೆ. ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಅವಕಾಶವಿರುವುದರಿಂದ ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಉದ್ಯಮಿಯಾಗಬೇಕು ಎಂದರು.

ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳದಲ್ಲಿ ಕನಿಷ್ಠ 45 ರಿಂದ 50 ಕ್ಕೂ ಹೆಚ್ಚು ಮಳೆಗೆಗಳನ್ನು ಹಾಕಿಸಬೇಕು ಎಂದರಲ್ಲದೆ, ಕೈಯಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಈ ಮೇಳದಲ್ಲಿ ಹೆಚ್ಚಾಗಿ ಮಹಿಳೆಯರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಸಂಜೀವಿನಿ ಮೇಳದಲ್ಲಿ ಮಣ್ಣಿನ ಉತ್ಪನ್ನಗಳು, ಗೃಹ ಅಲಂಕಾರಿಕ ವಸ್ತುಗಳು, ಮಣಿಮಾಲೆ ಹಾರ ಮತ್ತು ತೋರಣ, ಹ್ಯಾಂಡ್ ಬ್ಯಾಗ್, ಕಾರ್ ಮ್ಯಾಟ್, ಮಗ್ಗದ ಸೀರೆ, ವೀಣೆ, ಸಾಂಬರ್ ಮತ್ತು ಮಸಾಲ ಪದಾರ್ಥಗಳು, ಉಪ್ಪಿನಕಾಯಿ, ಹಪ್ಪಳ ಮನೆಯಲ್ಲಿ ತಯಾರಿಸಿದ ತಿನಿಸುಗಳು, ಗಾಣದ ಎಣ್ಣೆ, ಶುದ್ಧ ಹಸುವಿನ ತುಪ್ಪ, ಮತ್ತಿತರ ಸಾಮಗ್ರಿಗಳು ಮಾರಾಟವಾಗಲಿದೆ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಉತ್ಪನಗಳಿಗೂ ಅವಕಾಶ ನೀಡಲಾಗುವುದು ಎಂದರಲ್ಲದೆ ಸಂಜೀವಿನಿ ಮಾರಾಟ ಮೇಳದಲ್ಲಿ ರಾಜ್ಯದ ವಸ್ತುಗಳ ಪ್ರದರ್ಶನಕ್ಕೆ ಬರುವವರು 2023ರ ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪರಿಶೀಲಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಡಿ.ಆರ್.ಡಿ.ಎ. ಯೋಜನಾ ನಿರ್ದೇಶಕ ವಿಠ್ಠಲ್ ಕಾವಳೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನರೇಂದ್ರಬಾಬು, ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here