ಖಾತರಿಯಡಿ ಗ್ರಾಮ ಸಂಪನ್ಮೂಲ ಚಿತ್ರಣ

0
107

ಬಳ್ಳಾರಿ,ಜ.17: ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2023-24 ರಿಂದ 2025-26 ರವರೆಗಿನ 3ವರ್ಷಗಳ ಕ್ರಿಯಾ ಯೋಜನೆಯ ಕುರಿತು ಸಮುದಾಯ ಸಹಭಾಗಿತ್ವ ಸಭೆ ಸೋಮವಾರದಂದು ನಡೆಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕರಾದ ಆರ್.ಕೆ ಬಸವರಾಜ್ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲಸಂಜೀವಿನಿಯಡಿ 3 ವರ್ಷಗಳಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಲು ಗ್ರಾಮಸಂಪನ್ಮೂಲ ನಕ್ಷೆ ಹಾಕಿ ಚಿತ್ರಣವನ್ನು ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರ ಜೀವನೋಪಾಯದ ಮಾರ್ಗಗಳನ್ನು ಹೆಚ್ಚಿನ ಮಟ್ಟದಲ್ಲಿ ಸದೃಢಗೊಳಿಸಲು ವಿನೂತನವಾಗಿ “ಜಿಯೋ-ಸ್ಪೇಷಿಯಲ್” ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಆಯ್ಕೆ ಮತ್ತು ಅನುಷ್ಠಾನಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಮಸಂಪನ್ಮೂಲ ನಕ್ಷೆಯ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಕಾಮಗಾರಿಗಳ ಆಯ್ಕೆ ಹಾಗೂ ಮುಂಬರುವ 3 ವರ್ಷಗಳಲ್ಲಿ ವಿಸ್ತಾರವಾದ ಯೋಜನಾ ವರದಿ ತಯಾರಿಸಿ ಅದರಲ್ಲಿನ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಓಣಿಗಳಲ್ಲಿ ಕರಪತ್ರಗಳನ್ನು ಹಂಚುವುದರ ಮೂಲಕ ಮಾಹಿತಿ ನೀಡಲಾಯಿತು. ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮ ಸಂಪನ್ಮೂಲ ನಕ್ಷೆ ಹಾಕಲಾಯಿತು.
ಗ್ರಾಮ ಸಂಪನ್ಮೂಲ ನಕ್ಷೆಯಲ್ಲಿ ದಿಬ್ಬದಿಂದ ಕಣಿವೆ, ಜಲಾನಯನ ಪ್ರದೇಶ ಗುರುತಿಸಲಾಯಿತು. ಜಲಭದ್ರತಾ ಯೋಜನೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳ ಅಗತ್ಯತೆಯನ್ನು ಗುರುತಿಸಲಾಯಿತು. ಗೋಮಾಳಗಳನ್ನು ಗುರುತಿಸಲಾಯಿತು. ವನ್ಯಜೀವಿಗಳ ಸಂರಕ್ಷಣೆ ಮತ್ತು ಅರಣ್ಯೀಕರಣ ಕಾಮಗಾರಿಗಳನ್ನು ಗುರುತಿಸಲಾಯಿತು. ವಿಪತ್ತು ನಿರ್ವಹಣೆ ಉಪಯೋಜನೆ ತಯಾರಿಸುವುದು ಕುರಿತಂತೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಎಫ್ಟಿಗಳು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here