ಮರಳು ಶಿಲ್ಪಕಲೆ ಪ್ರದರ್ಶನಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಚಾಲನೆ ; ಮರಳಿನಲ್ಲಿ ಅರಳಿದ ಐತಿಹಾಸಿಕ ಬಳ್ಳಾರಿ ಸ್ಮಾರಕಗಳು

0
53

ಬಳ್ಳಾರಿ ಜ.21: ಬಿಸಿಲೂರು ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಬಳ್ಳಾರಿ ಜಿಲ್ಲಾ ಉತ್ಸವದಲ್ಲಿ ಮರಳು ಕಲಾಕೃತಿ ಶಿಲ್ಪಿಗಳ ಕೈಚಳಕದಲ್ಲಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ನಗರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅದ್ಭುತವಾಗಿ ಅರಳಿವೆ.
ಭಾರತದ ರಾಷ್ಟ್ರಪತಿಯಾಗಿ ಜನಮನಗೆದ್ದಿದ್ದ ಮಿಸೈಲ್ ಮ್ಯಾನ್ ಎಂದು ಪ್ರಖ್ಯಾತರಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ ಮರಳು ಕಲಾ ಕೃತಿ ಸೇರಿದಂತೆ ಜಿಲ್ಲೆಯ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಕುರುಗೋಡು ದೊಡ್ಡ ಬಸವೇಶ್ವರ, ಬಳ್ಳಾರಿ ಕೋಟೆಯನ್ನು ಅತ್ಯಂತ ನಾಜೂಕು ಹಾಗೂ ಅಚ್ಚುಕಟ್ಟಾಗಿ ಕಲಾಕೃತಿಗಳನ್ನು ಬಿಡಿಸಲಾಗಿದೆ.
ಜಿಲ್ಲಾ ಉತ್ಸವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಮರಳು ಶಿಲ್ಪ ಕಲಾಕೃತಿಗಳ ಎದುರು ಜನರು ತಂಡೋಪತಂಡವಾಗಿ ಆಗಮಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಮರಳು ಶಿಲ್ಪ ಕಲಾಕೃತಿಗಳ ರಚನೆಗಾಗಿ ಸುಮಾರು 55 ಟನ್ ಮರಳು ಬಳಕೆ ಮಾಡಲಾಗಿದೆ. ಕಲಾಕೃತಿಗಳ ರಚನೆಗೂ ಮುನ್ನ ಮರಳು ಶಿಲ್ಪ ಕಲಾವಿದರ ತಂಡವು ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳಿಗೆ ಭೇಟಿ, ಸೂಕ್ಷ್ಮವಾಗಿ ಗಮನಿಸಿ, ಸ್ಮಾರಕಗಳ ಮಹತ್ವ ಸಾರುವ ನಿಟ್ಟಿನಲ್ಲಿ ಮರಳು ಕಲಾಕೃತಿಗಳ ರಚನೆ ಮಾಡಲಾಗಿದೆ ಎನ್ನುತ್ತಾರೆ ಅಂತರ ರಾಷ್ಟ್ರೀಯ ಮರಳು ಶಿಲ್ಪಿ ಕಲಾವಿದ ನಾರಾಯಣ್ ಸಾಹು.
2000ನೇ ಸಾಲಿನಿಂದ ಮರಳು ಶಿಲ್ಪ ಕಲಾಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದು, 22 ವರ್ಷಗಳ ವೃತ್ತಿ ಅನುಭವ ಇದೆ. ಭಾರತ ದೇಶ ಸೇರಿದಂತೆ ವಿದೇಶಗಳಾದ ದುಬೈ, ಸೌದಿ ಅರೇಬಿಯಾ, ಮಾಲ್ಡೀವ್ಸ್‍ಗಳಲ್ಲಿಯೂ ಮರಳು ಶಿಲ್ಪಕಲಾಕೃತಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಮರಳು ಶಿಲ್ಪಕಲೆ ಪ್ರದರ್ಶನಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಚಾಲನೆ: ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಮರಳು ಶಿಲ್ಪಕಲೆ ಪ್ರದರ್ಶನಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಶನಿವಾರ ಚಾಲನೆ ನೀಡಿದರು.
ಶಾಸಕ ಸೋಮಶೇಖರ್ ರೆಡ್ಡಿ ಮರಳು ಶಿಲ್ಪಕಲೆ ಪ್ರದರ್ಶನದಲ್ಲಿ ಪಾಲ್ಗೊಂಡು ಮರಳಿನಲ್ಲಿ ಅರಳಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ್ ಹಿರೇಮನಿ, ಭೂ ವಿಜ್ಞಾನಿಗಳಾದ ವಿಜಯಲಕ್ಷ್ಮೀ, ನವೀನ್, ಸಿಬ್ಬಂದಿಗಳಾದ ಧಮೇರ್ಂದ್ರ, ಸಿ.ಬಿ.ಭರಮೋಜಿರಾವ್ ಸೇರಿದಂತೆ ಮರಳು ಶಿಲ್ಪಿ ಕಲಾವಿದರು ಇದ್ದರು.

LEAVE A REPLY

Please enter your comment!
Please enter your name here