ಕ್ಷಯರೋಗ ನಿರ್ಮೂಲನೆ ಮತ್ತು ಮರಣ ಪ್ರಮಾಣ ತಗ್ಗಿಸಲು ಡಿಸಿ ಸೂಚನೆ

0
94

ದಾವಣಗೆರೆ ಮಾ.19.ಕ್ಷಯರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಕ್ರಮ ವಹಿಸಬೇಕು ಹಾಗೂ ಇದರಿಂದ ಉಂಟಾಗುವ ಮರಣ ಪ್ರಮಾಣವನ್ನು ಇಳಿಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಸಮುದಾಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಕ್ಷಯರೋಗಿಗಳ ಕಾಳಜಿಗಾಗಿ ಆರೋಗ್ಯ ಸೇವೆಗಳನ್ನು ಅಭಿವೃದ್ದಿಗೊಳಿಸುವುದು, ಕ್ಷಯ ರೋಗಿಗಳ ಆರೈಕೆಯಲ್ಲಿ ಎಲ್ಲಾ ಪಾಲುದಾರರ ಪಾಲ್ಗೊಳ್ಳುವಿಕೆ ಹಾಗೂ ವಿಶ್ವ ಕ್ಷಯರೋಗದ ದಿನದ ಕುರಿತು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯರೋಗ ಮುಕ್ತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಕ್ರಿಯ ಪ್ರಕರಣ ಪತ್ತೆ ಮೂಲಕ ಹಾಗೂ ಸರ್ವೇ ಮೂಲಕ ಕ್ಷಯ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಎಂದರು.
ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಸಭೆಗಳಲ್ಲಿ ಕ್ಷಯರೋಗ ಕುರಿತು ಜಾಗೃತಿ ಮೂಡಿಸಬೇಕು. ಸ್ಥಳೀಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಕ್ಷಯ ಮುಕ್ತ ಗ್ರಾಮ ಮಾಡಲು ಅಗತ್ಯವಾದ ಚಟುವಟಿಕೆಗಳನ್ನು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕ್ಷಯರೋಗದಿಂದ ಉಂಟಾಗುವ ಮರಣ ಪ್ರಮಾಣ ಶೇ.10 ರಷ್ಟಿದ್ದು ಇದನ್ನು ಕಡಿಮೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷಯರೋಗ ನಿಯಂತ್ರಣದ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಎಕ್ಸ್‍ರೇ ಕೇಂದ್ರಗಳ ಮುಖ್ಯಸ್ಥರ ಸಭೆ ಕರೆದು, ಪ್ರತಿ ಎದೆ ಎಕ್ಸ್‍ರೇಯನ್ನು ಕ್ಷಯ ರೋಗ ತಪಾಸಣೆಗಾಗಿ ನ್ಯಾಟ್(ನ್ಯುಕ್ಲಿಕ್ ಆಸಿಡ್ ಆಂಪ್ಲಿಫಿಕೇಷನ್ ಟೆಸ್ಟ್)ಗೆ ಕಳುಹಿಸುವಂತೆ ತಿಳಿಸಬೇಕೆಂದು ಸೂಚಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಮಾತನಾಡಿ, 2020 ರ ಡಿಸೆಂಬರ್ ನಲ್ಲಿ ನಡೆದ ಕ್ಷಯರೋಗದ ಸಕ್ರಿಯ ಪ್ರಕರಣ ಪತ್ತೆ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ರೇಡಿಯೋ ಜಿಂಗಲ್ಸ್, ಕೆಎಸ್‍ಆರ್‍ಟಿಸಿ ಬಸ್ ಬ್ರಾಂಡಿಂಗ್, ಪಾಲಿಕೆ ಕಸ ಹಾಕುವ ವಾಹನಗಳ ಮೂಲಕ ಜಾಗೃತಿ, ಸ್ಮಾರ್ಟ್‍ಸಿಟಿ ವತಿಯಿಂದ ಎಲ್‍ಸಿಡಿ ಮೂಲಕ ಜಾಗೃತಿ, ಹೋರ್ಡಿಂಗ್ ಮತ್ತು ಬೀದಿನಾಟಕದ ಮೂಲಕ ಪ್ರಚಾರ ನೀಡಲಾಗಿತ್ತು.
ಕ್ಷಯರೋಗ ಒಂದು ಸಾಮಾಜಿಕ ಸಮಸ್ಯೆ ಕೂಡ ಆಗಿದ್ದು ಸಮುದಾಯ ಆಧಾರಿತ ಸಹಕಾರ ಅಗತ್ಯವಿದೆ. ಸಕ್ಕರೆ ಕಾಯಿಲೆ, ಹೆಚ್‍ಐವಿ, ಧೂಮಪಾನದಂತಹ ಕೋಮಾರ್ಬಿಡಿ ಇರುವವರಲ್ಲಿ ಹಾಗೂ ಅಪೌಷ್ಟಿಕತೆ, ಜನನಿಭಿಡ ಪ್ರದೇಶದಲ್ಲಿ ಇರುವವರಿಗೆ, ಬಡತನರೇಖೆಗಿಂತ ಕೆಳಗಿರುವ ಮತ್ತು ವಲಸಿಗರಲ್ಲಿ ಕ್ಷಯರೋಗದ ಸಂಭವ ಹೆಚ್ಚಿದೆ. ಆದ ಕಾರಣ ಈ ಗುಂಪನ್ನು ಗುರಿಯಾಗಿಟ್ಟುಕೊಂಡು ಸಕ್ರಿಯ ರೋಗ ಪತ್ತೆ ಮತ್ತು ಜಾಗೃತಿಯನ್ನು ಹೆಚ್ಚಿಸಲಾಗುವುದು ಎಂದರು.
ಕ್ಷಯ ರೋಗಿಗಳನ್ನು ಕಳಂಕಿತರಂತೆ ಕಾಣುವ ತಾರತಮ್ಯ ಧೋರಣೆ ಹೋಗಲಾಡಿಸಲು ಸ್ಥಳೀಯವಾಗಿ ಜಾಗೃತಿ ಮೂಡಿಸಲು ಸ್ಥಳೀಯರನ್ನು ಒಳಗೊಂಡು ಕೆಲಸ ಮಾಡಬೇಕಿದೆ ಹಾಗೂ ಈ ರೋಗಕ್ಕೆ ಸರ್ಕಾರದಿಂದ ಉಚಿತ ಚಿಕಿತ್ಸೆ, ಔಷಧೋಪಚಾರ ಇರುವ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ತರಬೇತಿ, ಖಾಸಗಿ ಆಸ್ಪತ್ರೆಗಳಲ್ಲಿ ಎನ್‍ಟಿಇಪಿ(ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮ)ಕಾರ್ಯಕ್ರಮವನ್ನು ನಿರ್ವಹಿಸಲು ಸೂಕ್ತ ಸಿಬ್ಬಂದಿ ನಿಯೋಜಿಸಿ ಪ್ರೇರೇಪಿಸಲಾಗುವುದು.
ಕ್ಷಯರೋಗಿಗಳಿಗೆ ನಿಕ್ಷಯ್ ಯೋಜನೆಯಡಿ ಪ್ರತಿ ತಿಂಗಳು ರೂ.500 ಸಹಾಯಧನ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಹ ನಿಕ್ಷಯ್ ಐಡಿ ಮಾಡುವ ವ್ಯವಸ್ಥೆ ಮತ್ತು ಡಿಬಿಟಿ ಗಾಗಿ ರೋಗಿಗಳಿಂದ ಬ್ಯಾಂಕ್ ಖಾತೆ ವಿವರವನ್ನು ಪಡೆಯಬೇಕು ಎಂದರು.
2025 ನೋಟ : 2025 ರ ವೇಳೆಗೆ ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡುವ ನೋಟವನ್ನು ಭಾರತ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸೂಚನೆಗಳನ್ನು ನೀಡಿದೆ. 2015 ಕ್ಕೆ ಹೋಲಿಸಿದರೆ ಶೇ.80 ಕ್ಷಯ ರೋಗ ಪ್ರಮಾಣ ಮತ್ತು ಸಾವಿನ ಪ್ರಮಾಣ ಶೇ.90 ಕಡಿಮೆ ಮಾಡಬೇಕು ಹಾಗೂ ಕ್ಷಯಪೀಡಿತ ಕುಟುಂಬಗಳು ಚಿಕಿತ್ಸೆ ಪಡೆಯಲು ಎದುರಿಸುವ ಆರ್ಥಿಕ ಸಮಸ್ಯೆಯನ್ನು ಸಂಪೂರ್ಣ ಕಡಿತಗೊಳಿಸುವ ಸೂಚ್ಯಂಕವನ್ನು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 06 ಟಿಬಿ ಯುನಿಟ್‍ಗಳಿದದು, 78 ಡೆಸಿಗ್ನೇಟೆಡ್ ಮೈಕ್ರೊಸ್ಕೊಪಿಕ್ ಸೆಂಟರ್‍ಗಳಿವೆ. 02 ಎಆರ್‍ಟಿ ಮತ್ತು 10 ಲಿಂಕ್ ಎಆರ್‍ಟಿ ಸೆಂಟರ್‍ಗಳಿವೆ. ಜಿಲ್ಲೆಯಲ್ಲಿ 2015 ರಲ್ಲಿ ಒಟ್ಟು 2082 ಟಿಬಿ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ. 2016 ರಲ್ಲಿ 1930, 2017 ರಲ್ಲಿ 1692, 2018 ರಲ್ಲಿ 2337, 2019 ರಲ್ಲಿ 2836 ಮತ್ತು 2020 ರಲ್ಲಿ 1898 ಜನರಲ್ಲಿ ಟಿಬಿ ಇರುವುದನ್ನು ಪತ್ತೆ ಹಚ್ಚಿ ಕ್ರಮ ವಹಿಸಲಾಗಿದೆ.
ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ಅಂದಾಜು ಪ್ರಕರಣಗಳಲ್ಲಿ 192 ಕ್ಷಯರೋಗಿ ಇರುತ್ತಾರೆಂದು ಸೂಚ್ಯಂಕ ನೀಡಿದ್ದು, ಗುಣಮುಖ ಪ್ರಮಾಣ 90 ಕ್ಕೇರಿಸಬೇಕು ಮತ್ತು ಮರಣ ಪ್ರಮಾಣವನ್ನು ಶೇ.5 ಕ್ಕೆ ಇಳಿಸಬೇಕೆಂಬ ಗುರಿ ನೀಡಿದೆ. 2020 ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ವಲ್ಪ ಕಡಿಮೆ ಅಂದರೆ 1898 ಪ್ರಕರಣ ಪತ್ತೆ ಹಚ್ಚಿದ್ದು ಈ ಪೈಕಿ 1540 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಗ್ರಾ.ಪಂ ಮಟ್ಟದ ಎಲ್ಲಾ ಸದಸ್ಯರುಗಳು ಮತ್ತು ಸಂಘದ ಸಂಸ್ಥೆಗಳ ಸದಸ್ಯರುಗಳನ್ನು ಎನ್‍ಟಿಇಪಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುವುದು. ಈಗಾಗಲೇ ಹೊಸ ಗ್ರಾ.ಪಂ ಸದಸ್ಯರುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕ್ಷಯರೋಗಯ ಆರಂಭಿಕ ಪತ್ತೆಗೆ ತಾಲ್ಲೂಕು ಮತ್ತು ಗ್ರಾ.ಪಂ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಬೇಕು. ಎಲ್ಲಾ ಪಾಲುದಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ದುರ್ಬಲ ವರ್ಗದವರನ್ನು ಗುರುತಿಸಿ ಕ್ರಿಯಾ ಯೋಜನೆ ತಯಾರಿಕೆ ಮತ್ತು ನಗರಭಾಗದ ಲಾರ್ವಾ ಸಮೀಕ್ಷೆ ಜೊತೆ ಪ್ರತಿ ಮೊದಲನೇ ಮತ್ತು 3 ನೇ ಶುಕ್ರವಾರ ನಿಯಮಿತವಾಗಿ ಸಕ್ರಿಯ ರೋಗ ಪತ್ತೆ ಕಾರ್ಯಕ್ರಮವನ್ನು ಮಾಡಬೇಕೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಇನ್ನು ಮುಂದೆ ನಗರ ಭಾಗದಲ್ಲಿ ಲಾರ್ವಾ ಸರ್ವೇ ಮಾಡುವ ಸಿಬ್ಬಂದಿ ಟಿಬಿ ಸರ್ವೇ ಸಹ ಮಾಡುವಂತೆ ತಿಳಿಸಿದರಲ್ಲದೇ ಸಿಇಓ ಅಧ್ಯಕ್ಷತೆಯಲ್ಲಿ ಡೆತ್ ಆಡಿಟ್ ಕಮಿಟಿ ರಚಿಸಿ ನನಗೆ ವರದಿ ಸಲ್ಲಿಸಬೇಕೆಂದರು.
ಜೆಜೆಎಂಸಿ ಕಾಲೇಜಿನ ಎಸ್‍ಟಿಎಫ್ ಚೇರ್ಮನ್ ಡಾ.ಬಾಲು ಮಾತನಾಡಿ, ಮೆಡಿಕಲ್ ಕಾಲೇಜುಗಳಲ್ಲಿ ಸಹ ಪ್ರತಿ ವರ್ಷ 300 ರಿಂದ 400 ಕ್ಷಯರೋಗ ಪತ್ತೆ ಹಚ್ಚಲಾಗುತ್ತದೆ. ಅಂತಹ ಪ್ರಕರಣಗಳನ್ನು ಸಹ ಡಿಬಿಟಿಎಸ್ ರಿಇಂಬರ್ಸ್‍ಮೆಂಟ್ ಮಾಡಬೇಕಾಗುತ್ತದೆ ಎಂದರು.
ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವಾಗಿದ್ದು, ನಗರದ ಕುವೆಂಪು ಕನ್ನಡ ಭವನದಲ್ಲಿ ಅಂದು ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಕ್ಷಯರೋಗ ಗೆದ್ದವರನ್ನು ಟಿಬಿ ಚಾಂಪಿಯನ್ಸ್ ಎಂದು ಪರಿಗಣಿಸಲಾಗಿದ್ದು, ಅಂದಿನ ಕಾರ್ಯಕ್ರಮದಲ್ಲಿ ಟಿಬಿ ಚಾಂಪಿಯನ್ಸ್‍ಗಳನ್ನು ಸಾಂಕೇತಿಕವಾಗಿ ಅಭಿನಂದಿಸಲಾಗುವುದು ಎಂದು ಡಾ.ಗಂಗಾಧರ್ ಸಭೆಯಲ್ಲಿ ತಿಳಿಸಿದರು.
ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿ : ಕೊರೊನಾದ ಒಂದು ವರ್ಷ ಅನುಭವದಿಂದ ಕೊರೊನಾವನ್ನು ಎದುರಿಸಲು ಸಮರ್ಥರಾಗಿದ್ದರೂ ಈ ಸೋಂಕನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಕೊರೊನಾ ನಿಯಂತ್ರಣದಲ್ಲಿ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಿಬೇಕಿದೆ ಎಂದು ಡಿಸಿ ಅಧಿಕಾರಿಗಳಿಗೆ ತಿಳಿಸಿದರು.
ಲಾರ್ವಾ ಸರ್ವೇ ಮತ್ತು ಇತರೆ ಆರೋಗ್ಯ ಸರ್ವೇ ನಡೆಸಲು ಮನೆ ಮನೆಗೆ ತೆರಳುವ ಸಿಬ್ಬಂದಿಗಳು ಕೊರೊನಾ ಕುರಿತು ಸಹ ಜಾಗೃತಿ ಮೂಡಿಸಬೇಕು ಎಂದರು.
ಮಾಸ್ಕ್ ಧರಿಸದಿದ್ದರೆ ದಂಡ : ಸೋಮವಾರದಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಾನೂ ಸೇರಿದಂತೆ ಅಧಿಕಾರಿಗಳ ತಂಡ ಜನನಿಭಿಡ ಪ್ರದೇಶಗಳಲ್ಲಿ ಅಡ್ಡಾಡಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕರಾದ ಜಗದೀಶ್, ಡಿಎಲ್‍ಓ ಡಾ.ಮುರಳಿಧರ, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ತಾಲ್ಲೂಕು ವೈದ್ಯಾಧಿಕಾರಿಗಳು, ಎನ್‍ಜಿಓ ಪ್ರತಿನಿಧಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here