ಫೆ.16 ರ ಕೊಟ್ಟೂರೇಶ್ವರ ಸ್ವಾಮೀಯ ರಥೋತ್ಸವ, ಜಾತ್ರೆ ಯಶಸ್ವಿಗೆ ಅಗತ್ಯ ಕ್ರಮ ಕೈಗೊಳ್ಳಿ.

0
267

ಕೊಟ್ಟೂರು:ಪೆ:07:- ಪ್ರಸಿದ್ದ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮೀಯ ರಥೋತ್ಸವ ಫೆಬ್ರವರಿ 16 ರಂದು ಅದ್ದೂರಿಯಾಗಿ ಜರುಗುವ ಹಿನ್ನಲೆಯಲ್ಲಿ ಆಗಮಿಸುವ ಲಕ್ಷಾಂತರ ಭಕ್ತರ ಆರೋಗ್ಯ ರಕ್ಷಣೆಗೆ ಅಗತ್ಯ ಔಷಧಿಗಳನ್ನು ಸಜ್ಜಾಗಿಟ್ಟುಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಆರೋಗ್ಯ ಇಲಾಖೆಗೆ ಸೂಚಿಸಿದರು.

ಇಲ್ಲಿನ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದ ಸಭಾಂಗಣದಲ್ಲಿ ಧಾರ್ಮಿಕ ಧತ್ತಿ ಇಲಾಖೆ ಶ್ರೀಗುರುಬಸವೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದ ಜಾತ್ರಾ ಸಂಬಂಧದ ಪೂರ್ವ ಸಿದ್ದತಾ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಜಾತ್ರ ಮಹೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮಗೆ ನಿರ್ವಹಿಸಿದ ಕೆಲಸಗಳನ್ನು ತಡವಿಲ್ಲದೇ ಅಚ್ಚುಕಟ್ಟಾಗಿ ಮಾಡಬೇಕು. ಯಾವುದೇ ಹಂತದಲ್ಲಿ ಯಾರೊಬ್ಬರಿಗೂ ತೊಂದರೆ ಉಂಟಾಗಬಾರದು. ಅಗತ್ಯವಾಗಿ ಕನಿಷ್ಠ ನಾಲ್ಕು ಅಂಬುಲೆನ್ಸ್ಗಳನ್ನು ಸಜ್ಜಾಗಿಟ್ಟುಕೊಳ್ಳಬೇಕು. ತುರ್ತು ಚಿಕಿತ್ಸೆ ನೀಡಲು ಪಟ್ಟಣದ ಕೆಲ ಕಡೆ ವ್ಯವಸ್ಥೆ ಕೈಗೊಂಡು ಸೇವೆ ಕಲ್ಪಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು ಎಂದರಲ್ಲದೇ ಕೊಟ್ಟೂರು ಪಟ್ಟಣ ಪಂಚಾಯಿತಿ ಪಟ್ಟಣದಲ್ಲಿ ಸ್ವಚ್ಛತೆಗಾಗಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು. ರಸ್ತೆಗಳನ್ನು ಸ್ವಚ್ಛವಾಗಿಡಲು ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ದಿನಗೂಲಿಗಳನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಪಟ್ಟಣದ ಜನತೆಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಾಗ ಅವುಗಳನ್ನು ಪರಿಶೀಲನೆಗೊಳಿಸಿ ಜನತೆಗೆ ಕೊಡಬೇಕು ಎಂದರು. ನಿತ್ಯ ಫಾಗಿಂಗ್ ಮಾಡಲು ಸೂಚಿಸಿದರು.

ಶಾಸಕ ಎಸ್.ಭೀಮಾನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ 5 ಲಕ್ಷಕ್ಕೂ ಹೆಚ್ಚು ಭಕ್ತರು ರಾಜ್ಯದ ವಿವಿಧಡೆಯಿಂದ ಆಗಮಿಸುತ್ತಿದ್ದು ಯಾವುದೇ ಬಗೆಯಲ್ಲಿ ಯಾವ ಭಕ್ತರಿಗೂ ಏನೊಂದು ತೊಂದರೆ ಕಂಡುಬರದಂತೆ ಸಿದ್ದತೆ ಕೈಗೊಳ್ಳಬೇಕು ಎಂದರಲ್ಲದೇ ವಿಶೇಷ ಬಸ್‌ಗಳನ್ನು ದಾವಣಗೆರೆ, ಹೊಸಪೇಟೆ, ಬಳ್ಳಾರಿ ವಿಭಾಗಗಳಿಂದ ಹೆಚ್ಚುವರಿಯಾಗಿ ಬಿಡುವಂತೆ ಸಂಬಂಧಪಟ್ಟ ವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಥೋತ್ಸವದ ಜಾತ್ರೆಯ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಹೇಳಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆ ಬಾರದಂತೆ ಅಗತ್ಯ ಕ್ರಮಗಳನ್ನು ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಬೇಕು. ನೀರು ಪೂರೈಕೆಗೆ ನಿರಂತರ ವಿದ್ಯುತ್ ಪೂರೈಸಲು ಸಂಬಂಧಪಟ್ಟ ಜೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ಸೂಚಿಸುವೆ. ಪಾದಯಾತ್ರಿಗಳು ಬರುವ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಲಾಗಿದ್ದು ಪಾದಯಾತ್ರಿಗಳಿಗೆ ಅಲ್ಲಲ್ಲಿ ಪ್ರಸಾದ ಸೇವೆ ಸಲ್ಲಿಸಲು ವಿವಿಧ ಸಂಘ ಸಂಸ್ಥೆಗಳವರು ನಡೆಸುವ ಕಾರ್ಯಕ್ಕೆ ಎಲ್ಲಾ ಬಗೆಯ ಅಗತ್ಯ ಸಹಾಯ ಒದಗಿಸಬೇಕು ಎಂದು ಅವರು ಹೇಳಿದರು.
ಕೊಟ್ಟೂರೇಶ್ವರ ದೇವಸ್ಥಾನದ ಖಾತೆಯಲ್ಲಿ 5 ಕೋಟಿ ರೂ ಇದ್ದು ಶ್ರೀಸ್ವಾಮೀಯನ್ನು ವಜ್ರದ ಕವಚ ಸೇರಿದಂತೆ ಪ್ರಭಾವಳಿಗಳನ್ನು ಬೆಳ್ಳಿಯಿಂದ ಮಾಡಿಸಲು ಯೋಜನೆ ರೂಪಿಸಿದೆ ಎಂದರು.

ಕ್ರಿಯಾಮೂರ್ತಿ ಪ್ರಕಾಶ ಕೊಟ್ಟೂರು ದೇವರು ಮಾತನಾಡಿ ದೇವಸ್ಥಾನದಲ್ಲಿ ಕೈಗೊಳ್ಳಲಾಗುವ ಪ್ರತಿ ಕೆಲಸಗಳನ್ನು ಹಿರಿಯ ಸ್ವಾಮೀಜಿಗಳು ಮತ್ತು ಮತ್ತಿತರ ಗಮನಕ್ಕೆ ತಂದು ಅವರು ಸೂಚಿಸುವ ಮಾರ್ಗದರ್ಶನದಂತೆ ಕೆಲಸಗಳನ್ನು ಕೈಗೊಳ್ಳಬೇಕು ಎಂದರು.
ಮ.ನಿ.ಪ್ರ.ಶಂಕರ ಸ್ವಾಮೀಜಿ, ಭಜುಂಗಮಠದ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಾಪ್ರಕಾಶ ವೇದಿಕೆಯಲ್ಲಿದ್ದರು. ಪೊಲೀಸ್ ಡಿ.ವೈ.ಎಸ್.ಪಿ ಮಲ್ಲಾಪುರ್, ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ ಹೆಚ್. ಕೆಂಚಾರೆಡ್ಡಿ, ಸಬ್ ಇನ್ಸ್ಪೆಕ್ಟರ್, ವಿಜಯಕೃಷ್ಣ, ಜೆಸ್ಕಾಂ ಅಧಿಕಾರಿ ಚೇತನ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ:ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here