ಗಣರಾಜ್ಯೋತ್ಸವ ಪರೇಡ್ ಶಿವಮೊಗ್ಗ ರಂಗಾಯಣ ಕಲಾವಿದರಿಗೆ ಗೌರವ ಸಮರ್ಪಣೆ

0
77

ಶಿವಮೊಗ್ಗ, ಫೆ.೧೩ : ಈ ಬಾರಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ಸ್ಥಬ್ಧಚಿತ್ರದೊಂದಿಗೆ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಕಲಾವಿದರಿಗೆ ಶನಿವಾರ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ ಅವರು ಗೌರವ ಸಮರ್ಪಿಸಿದರು.

ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಗಣರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾಗಲು ಅವಕಾಶ ದೊರೆಯುವುದು ಅಪರೂಪ. ಶಿವಮೊಗ್ಗ ರಂಗಾಯಣದ ಕಲಾವಿದರು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಾಡಿಗೆ ಹೆಸರು ತಂದಿದ್ದಾರೆ ಎಂದು ಹೇಳಿದರು.

ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಕಲಾವಿದರಾದ ಕಾರ್ತಿಕ್ ಕಲ್ಲುಕುಟಿಕರ್, ನಿತಿನ್, ಮಹಾಬಲೇಶ್ವರ, ರಂಜಿತಾ, ರಮ್ಯಾ, ಸುಜಿತ್, ಪ್ರಸನ್ನಕುಮಾರ್, ಸವಿತಾ ಆರ್ ಕಾಳಿ, ದೀಪ್ತಿ, ಚಂದನ್, ರವಿಕುಮಾರ್ ಮತ್ತು ಶರತ್ಬಾಬು ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಮಾತನಾಡಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ಬಾರಿ ನಮ್ಮ ರಂಗಾಯಣದ ಕಲಾವಿದರು ಅದರಲ್ಲಿ ಭಾಗವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ರಂಗಾಯಣ ಕಲಾವಿದರು ಅಭಿನಯಿಸಿರುವ ಹಕ್ಕಿಕಥೆ ನಾಟಕದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಶಿವಮೊಗ್ಗ ರಂಗಾಯಣದ ಪರವಾಗಿ ಜಂಟಿ ನಿರ್ದೇಶಕ ಮುರಳೀಧರ್ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಅವರು ಸ್ವಾಗತಿಸಿದರು. ರಂಗ ಸಮಾಜ ಸದಸ್ಯ ಹಾಲಸ್ವಾಮಿ, ರಂಗನಿರ್ದೇಶಕ ಶ್ರೀಪಾದ ಭಟ್, ಪ್ರೆಸ್ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here