ಸರಳಾದೇವಿ ಕಾಲೇಜಿನಲ್ಲಿ ನಾಟಕ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಾಗಾರ ; ರಂಗಭೂಮಿಯು ಬದುಕನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಮಾಧ್ಯಮ: ಡಾ.ಶಿವಣ್ಣ

0
63

ಬಳ್ಳಾರಿ,ಮಾ.16 : ಮಾನವನ ಜೀವನವನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಮಾಧ್ಯಮವೆಂದರೆ ಅದು ರಂಗಭೂಮಿ. ಬದುಕಿನ ಎಲ್ಲ ಚಹರೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವ ಈ ಕಲೆ ಮನೋರಂಜನೆಯ ಜೊತೆಗೆ ಸಮಾಜದ ದರ್ಶನವನ್ನು ಮಾಡಿಸುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್.ಶಿವಣ್ಣ ಅವರು ಹೇಳಿದರು.
ಗುರುವಾರದಂದು ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ(ಸ್ವಾಯತ್ತ) ನಾಟಕ ವಿಭಾಗದಿಂದ ‘ವಿದ್ಯಾರ್ಥಿ ಸಮುದಾಯ ಮತ್ತು ರಂಗಭೂಮಿ ಅಭಿರುಚಿ’ ಎನ್ನುವ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ರಂಗಭೂಮಿಯ ಕಡೆ ಮುಖಮಾಡಿ ತಮ್ಮಲ್ಲಿರುವ ಸುಪ್ತ ಕಲೆಯನ್ನು ಒರೆಗೆ ಹಚ್ಚಿ ಬೆಳೆಯಬೇಕು. ರಂಗಭೂಮಿ ನಿಜವಾದ ಸಂತೋಷವನ್ನು ಮೊಗೆ ಮೊಗೆದು ಕೊಡುತ್ತದೆ ಎಂದು ವಿಶ್ಲೇಷಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹೊನ್ನೂರವಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳುವ ವರ್ಗ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸಿದಾಗ ಪ್ರಶ್ನಿಸುವ, ಪ್ರತಿರೋಧವನ್ನು ಒಡ್ಡುವ ಮನೋಭಾವವನ್ನು ರಂಗಭೂಮಿ ಕಲಿಸಿಕೊಡುತ್ತದೆ ಎಂದರು.
ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ರಂಗಭೂಮಿಯ ಆಶಯಗಳನ್ನು ಒಳಗೊಂಡಿವೆ. ಇಂದಿಗೂ ಅವು ಹೊಸ ಸಂಚಲನವನ್ನು ಉಂಟು ಮಾಡುತ್ತಲೇ ಸಾಂಸ್ಕøತಿಕ ಎಚ್ಚರವನ್ನು ಕೊಡುತ್ತವೆ. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಕೊಡುಗೆ ರಂಗಭೂಮಿಗೆ ಅನನ್ಯವಾಗಿದೆ ಎಂದರು .

ನಾಟಕ ವಿಭಾಗದ ಮುಖ್ಯಸ್ಥರಾದ ಡಾ.ದಸ್ತಗೀರಸಾಬ್ ದಿನ್ನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಂಗಭೂಮಿಯು ಅಕ್ಷರಸ್ಥರಿಗೂ ಮತ್ತು ಅನಕ್ಷರಸ್ಥರಿಗೂ ಏಕಕಾಲದಲ್ಲಿ ಅರಿವನ್ನು ಉಂಟುಮಾಡುವ ಸಮರ್ಥ ಮಾಧ್ಯಮವಾಗಿದೆ ಎಂದರು. ಹೊಸ ತಲೆಮಾರು ಈ ಮಾಧ್ಯಮದೆಡೆ ಪ್ರೀತಿ ಮತ್ತು ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾಂಸ್ಕøತಿಕ ಸಮಿತಿಯ ಸಂಚಾಲಕ ಡಾ.ಶಶಿಕಾಂತ್ ಬಿಲ್ಲವ, ನಾಟಕ ವಿಭಾಗದ ಅತಿಥಿ ಉಪನ್ಯಾಸಕ ವಿಷ್ಣು ಹಡಪದ, ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ ಸೇರಿದಂತೆ ಕಾವ್ಯ, ರಕ್ಷಣಾ, ಎಂ.ಶಿವಕುಮಾರ್, ಸಿದ್ದರಾಮೇಶ್ವರ, ಹನುಮೇಶ ಹಾಗೂ ಇತರರು ಇದ್ದರು.
ನಂತರದಲ್ಲಿ ನಾಟಕ ವಿಭಾಗದ ಅನಿತಾ, ಪ್ರಿಯಾಂಕ, ವಿನಯ ಕುಮಾರ, ದಾದಾ ಕಲಂದರ್, ಶಿವರಾಜ್, ಯಶೋಧ, ಪದ್ಮಾಶ್ರೀ ಮುಂತಾದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here