ನ್ಯುಮೋಕಾಕಲ್ ಕಾಂಜಿಗೆಟ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ, ಮಕ್ಕಳ ತೀವ್ರ ರೀತಿಯ ಉಸಿರಾಟದ ತೊಂದರೆಗೆ ನ್ಯುಮೋಕಾಕಲ್ ಕಾಂಜಿಗೆಟ್ ಲಸಿಕೆ ಅತ್ಯಂತ ಪರಿಣಾಮಕಾರಿ: ಡಾ.ಶಂಕ್ರಪ್ಪ ಮೈಲಾರಿ

0
89

ಬಳ್ಳಾರಿ,ನ.18 : ಮಕ್ಕಳಿಗೆ ಬಾಲ್ಯದಲ್ಲಿ ಕಂಡುಬರುವ ತೀವ್ರ ರೀತಿಯ ಉಸಿರಾಟದ ತೊಂದರೆ ಉಂಟುಮಾಡಿ ಮಗುವಿನ ಮರಣ ಸಂಭವಿಸುವುದನ್ನು ತಡೆಗಟ್ಟಲು ನ್ಯುಮೋಕಾಕಲ್ ಕಾಂಜಿಗೆಟ್ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ ಎಂದು ಕಲಬುರಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ವಿಭಾಗೀಯ ಸಹನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ನ್ಯುಮೋಕಾಕಲ್ ಕಾಂಜಿಗೆಟ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಮಗುವಿಗೆ ಕನಿಷ್ಠ ಮೂರು ಬಾರಿ ಲಸಿಕೆ ಹಾಕಿಸುವ ಮೂಲಕ ಒಂದು ವರ್ಷದೊಗಿನ ಮಕ್ಕಳ ಮರಣವನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದರು.
ಮಗುವಿನ ಒಂದೂವರೆ ತಿಂಗಳು, ಮೂರುವರೆ ತಿಂಗಳು ಹಾಗೂ ಒಂಬತ್ತು ತಿಂಗಳ ವಯಸ್ಸಿನಲ್ಲಿ ಲಸಿಕೆಯನ್ನು ಹಾಕಿಸುವುದರ ಮೂಲಕ ತೀವ್ರ ರೀತಿಯ ಉಸಿರಾಟದ ತೊಂದರೆಯಿಂದ ಮಗುವನ್ನು ರಕ್ಷಣೆ ಮಾಡುವುದರ ಜೊತೆಗೆ ವಿಶೇಷವಾಗಿ 6ವಾರ ವಯಸ್ಸಿನ ಶಿಶುಗಳಲ್ಲಿ ತಕ್ಷಣವೇ ಕಂಡುಬರಬಹುದಾದ ತೀವ್ರತರದ ನ್ಯುಮೋಕಾಕಲ್ ಕಾಯಿಲೆಗಳಾದ ನ್ಯುಮೋನಿಯ ಹಾಗೂ ಬ್ಯಾಕ್ಟಿರೇಮಿದಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಅವರು ತಿಳಿಸಿದರು.
ಪಾಲಕರು ತಮ್ಮ ಮಕ್ಕಳಿಗೆ ಲಸಿಕಾ ಅಧಿವೇಶನದ ವೇಳೆ ತಪ್ಪದೇ ಲಸಿಕೆಯನ್ನು ಹಾಕಿಸಿ ಮಕ್ಕಳ ಮರಣ ತಡೆಗಟ್ಟಲು ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ರೆಡ್ಡಿ ಮಾತನಾಡಿ ಬಾಲ್ಯಾವಧಿಯಲ್ಲಿ ಬರುವ ಮಾರಕ ಕಾಯಿಲೆಗಳಲ್ಲಿ ಈ ಲಸಿಕೆ ಒಳಗೊಂಡಂತೆ ಒಟ್ಟು 12 ಮಾರಕ ರೋಗಗಳಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಶ್ವಾಸಕೋಶದ ಸೋಂಕಾಗಿರುವ ನ್ಯುಮೋಕಾಕಲ್ ನ್ಯುಮೋನಿಯು ಮಕ್ಕಳಿಗೆ ಸೋಂಕು ಉಂಟುಮಾಡಿದಾಗ ಮಗುವಿಗೆ ಉಸಿರಾಡಲು ಕಷ್ಟ, ಪಕ್ಕೆ ಸೆಳೆತ, ಜ್ವರ, ಕೆಮ್ಮು ಮತ್ತು ಇತರ ಸಮಸ್ಯೆಗಳು ಕಂಡುಬರಬಹುದು. ಅಲ್ಲದೇ ಸೋಂಕುವಿನ ತೀವ್ರತೆ ಹೆಚ್ಚಾದಲ್ಲಿ ಮರಣವು ಸಹ ಸಂಭವಿಸಬಹುದು. ಸಾಮಾನ್ಯವಾಗಿ ಈ ಸೋಂಕು ಹೊಂದಿರುವವರು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ತುಂತುರುಗಳ ಮುಖಾಂತರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದ್ದು, ಚಿಕ್ಕ ಮಕ್ಕಳ ಹತ್ತಿರ ಕೆಮ್ಮುವ ಮತ್ತು ಸೀನುವ ವ್ಯಕ್ತಿಗಳನ್ನು ಬರದಂತೆ ಕ್ರಮವಹಿಸುವುದರ ಜೊತೆಗೆ ಮಗುವಿಗೆ ಆಯಾ ತಿಂಗಳುವಾರು ಲಸಿಕೆಯನ್ನು ಹಾಕಿಸುವ ಮೂಲಕ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗ ಮುಕ್ತ ಸಮುದಾಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್, ಡಬ್ಲ್ಯೂಹೆಚ್‍ಒ ಎಸ್.ಎಮ್.ಒ ಡಾ.ಆರ್.ಎಸ್.ಶ್ರೀಧರ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್‍ಕುಮಾರಿ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಖಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ್, ಯುನಿಸೇಫ್ ಐಇಸಿ ಸಂಯೋಜಕ ಮಂಜುನಾಥ್, ಪ್ರಭಾರಿ ನರ್ಸಿಂಗ್ ಅಧಿಕಾರಿ ಗಿರೀಶ್ ಸೇರಿದಂತೆ ತಾಯಂದಿರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಆಶಾಕಾರ್ಯಕರ್ತೆಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಒಂದೂವರೆ ತಿಂಗಳ ವಯಸ್ಸಿನ ಮಕ್ಕಳಿಗೆ ಮೊದಲ ಡೋಸ್ ಲಸಿಕೆಯನ್ನು ಸಹ ನೀಡಲಾಯಿತು.

LEAVE A REPLY

Please enter your comment!
Please enter your name here