ಜನರಪರ ಕಾವ್ಯ ಬರೆದ ಕವಿಗಳನ್ನು ಜೈಲಿಗಾಕುವ ಕಾಲವಿದು! ಕಸಾಪ ಕಾರ್ಯಕ್ರಮದಲ್ಲಿ ತೀವ್ರ ಆತಂಕ ವ್ಯಕ್ತ ಪಡಿಸಿದ ಹಿರಿಯ ಸಾಹಿತಿ ಮೇಟಿಕೊಟ್ರಪ್ಪ.

0
366

ಹಗರಿಬೊಮ್ಮನಹಳ್ಳಿ, ಮಾರ್ಚ್,25
ವಿಜಯನಗರ ಸಾಮ್ರಾಜ್ಯದಲ್ಲಿ ಬಾಳಿ, ಬದುಕಿದ್ದ ಹರಿಹರ ಕವಿ ಅವತ್ತಿನ ಪ್ರಭುತ್ವದ ಎದುರು ಜನರು ಬದುಕಲೇಂದು ಕಾವ್ಯ ಬರೆದರು, ಆದರೇ ಪ್ರಸ್ತುತ ಪ್ರಸಂಗದಲ್ಲಿ ಜನರ ಪರವಾಗಿ ಕಾವ್ಯ ಬರೆದರೆ ಅಂತಹ ಕವಿಯನ್ನು ಜೈಲಿಗಾಕುವಂತಹ ಕೆಟ್ಟ ಕಾಲವಿದು ಎಂದು ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಂಜೆ ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇಊರಿನ ವಕೀಲೆ ವಸಂತಿ ಸಾಲುಮನಿ ಅವರ ಮನೆ ಅಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಆಯೋಜಿಸಿದ್ದ ವಸಂತ ಋತುವಿನ ಕಾವ್ಯ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ಕಾಲದಲ್ಲಿ ಜನಪರ ಧ್ವನಿ ಎತ್ತುವ ಕವಿಗಳಿಗೆ, ಲೇಖಕರಿಗೆ, ಬರಹಗಾರರಿಗೆ ಇದು ಸಕಾಲವಲ್ಲ ಎಂದು ಆಳುವ ಸರ್ಕಾರಗಳ ಜನ ವಿರೋಧಿ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹಾಗಂತಾ, ಪ್ರಭುತ್ವ ಎಷ್ಟೇ ಸವಾರಿ ಮಾಡಿದಾಕ್ಷಣ ಪ್ರಗತಿಪರ, ಜನಪರ ನಿಲುವಿನಿಂದ ಕವಿಗಳು ಹಿಂದಡಿ ಇಟ್ಟಿಲ್ಲ, ಬೇದರಿಲ್ಲ. ಪ್ರಭುತ್ವದ ಜನವಿರೋದಿ ನಿಲುವನ್ನು ಖಂಡಿಸಿ ಕಾವ್ಯ ಬರೆಯುವುದನ್ನು ಬಹುತೇಕ ಕವಿಗಳು ಮುಂದುವರೆಸುವ ಮೂಲಕ ದಾಳಿ, ದಬ್ಬಾಳಿಕೆಗಳಿಂದ ಪ್ರಗತಿಪರ ಚಿಂತನೆಗಳನ್ನು ಹೊಸಕಿ ಹಾಕಲಾಗದೆಂದು ಪ್ರಭುತ್ವಕ್ಕೆ ಸವಾಲಾಗಿದ್ದಾರೆಂದರು.

ಜನರನ್ನು ಮುಟ್ಟುವಂತಹ ಸಾಹಿತ್ಯ ರಚಿಸಬೇಕು. ಸತತ ಓದು ನಿಮ್ಮನ್ನು ಉತ್ತಮ ಸಾಹಿತಿಯನ್ನಾಗಿ ರೂಪಿಸುತ್ತೆ. ಕವಿಗೋಷ್ಠಿ, ಸಂವಾದ, ವಿಚಾರಸಂಕೀರಣಗಳಲ್ಲಿ ಭಾಗವಹಿಸುವುದನ್ನು ರೂಢಿಮಾಡಿಕೊಂಡರೆ ನೀವು ಉತ್ತಮ ಸಾಹಿತಿ ಆಗಲು ಸಾಧ್ಯ ಎಂದು ಉದಯೋನ್ಮುಖ ಕವಿಗಳಿಗೆ ಮೇಟಿ ಕೊಟ್ರಪ್ಪ ತಿಳಿಹೇಳಿದರು.

ಮಹಿಳಾ ಲೇಖಕಿ ಸುಧಾ ಚಿದಾನಂದಗೌಡ ಅವರು ಕವಿಗೋಷ್ಠಿಗೆ ಚಾಲನೆ ನೀಡಿ, ಕ್ರೌಂಚ ಪಕ್ಷಿಗಳ ಸಾವಿನ ಶೋಕವನ್ನು ಶ್ಲೋಕವಾಗಿಸಿಕೊಂಡು ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಗ್ರಂಥವನ್ನೇ ರಚಿಸಿದರು. ಕಾವ್ಯಕ್ಕೆ ಬಹು ದೊಡ್ಡ ಶಕ್ತಿ ಇದೆ. ನಾವು ರಚಿಸುವ ಕವನಗಳು ಸಮಾಜ ಮತ್ತು ಜನರ ಅಭಿವೃದ್ಧಿಗೆ ಪೂರಕವಾಗಿರಬೇಕು. ಸಾಮಾಜಿಕ ಅನಿಷ್ಠತೆಯ ವಿರುದ್ಧವಾಗಿ ಜಾಗೃತಿ ಮೂಡಿಸುವಂತಿರಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕಾಧ್ಯ ಗೂಳೆಪ್ಪ ಹುಲಿಮನಿ, ಪ್ರತಿ ತಿಂಗಳು ಮನೆ ಅಂಗಳದಲ್ಲಿ ಕಾವ್ಯ ಕಲರವ ಆಯೋಜಿಸಲಾಗುತ್ತಿದ್ದು ತುಂಬ ಉತ್ತಮ ಪ್ರತಿಕ್ರಿಯೆ ಕವಿಗಳಿಂದ ವ್ಯಕ್ತವಾಗುತ್ತೀರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕಾವ್ಯ ಕಲರವದಲ್ಲಿ ವಾಚಿಸುವ ಕವನಗಳನ್ನು ಒಟ್ಟಗೂಡಿಸಿ ಪ್ರಾತಿನಿಧಿಕ ಕವನ ಸಂಕಲನವನ್ನು ಪ್ರಕಟಿಸುವ ಉದ್ದೇಶ ಇದೆ ಎಂದರು.

ಕವಿಗೋಷ್ಠಿ: ಹಿರಿಯ ಕವಿ ಎ.ಆರ್.ಪಂಪಣ್ಣ, ಗಣೇಶ ಹವಾಲ್ದಾರ್, ಅಕ್ಕಿ ಬಸವೇಶ್, ಗಡ್ಡಿ ಮಂಜುನಾಥ, ಗಂಟಿ ನಾಗರಾಜ, ಪ್ರತಿಭಾ, ಜಯಮ್ಮ ಮತ್ತಿಹಳ್ಳಿ, ಬನ್ನಿಕೊಪ್ಪದ ಸುಜಾತ, ಶಂಷಾದ್ ಬೇಗ್ಂ, ಕೊಟ್ರೇಶ್ ನಾಯ್ಕ್ ಸಹಿತ ಇಪ್ಪತ್ತಕ್ಕೂ ಹೆಚ್ಚು ಕವಿಗಳ ಕವನ ವಾಚಿಸಿದರು.

ವಕೀಲೆ ವಾಸಂತಿ ಸಾಲುಮನಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹುಳ್ಳಿಪ್ರಕಾಶ, ಕಸಾಪ ತಂಬ್ರಹಳ್ಳಿ ಹೊಬಳಿ ಘಟಕದ ಅಧ್ಯಕ್ಷ ಎಸ್.ವಿ.ಪಾಟೀಲ್ ಅತಿಥಿಗಳಾಗಿ ಭಾಗವಹಿಸಿದ್ದರು.

ಜಯಮ್ಮ ಮತ್ತಿಹಳ್ಳಿ ಪ್ರಾರ್ಥಿಸಿ, ಕಸಾಪ ತಾಲೂಕ ಪ್ರಧಾನ ಕಾರ್ಯದರ್ಶಿ ಬೇಟೆ ಮಾರುತಿ ಸ್ವಾಗತಿಸಿ, ಮೋಹನ್ ಅಣಜಿ ವಂದಿಸಿದರು.ಜಯಸೂರ್ಯ, ಗಂಟಿ ನಾಗರಾಜ ನಿರೂಪಿಸಿದರು.

-ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here