ಕುದಿಸಿ, ಆರಿಸಿ, ಸೋಸಿದ ನೀರನ್ನು ಕುಡಿಯುವ ಮೂಲಕ ಸಂಭಾವ್ಯ ವಾಂತಿ-ಬೇಧಿ ತಡೆಗಟ್ಟಲು ಸಹಕರಿಸಿ: ಡಿಹೆಚ್‍ಓ ಡಾ.ಹೆಚ್.ಎಲ್ ಜನಾರ್ಧನ್.

0
65

ಬಳ್ಳಾರಿ,ಏ.5 : ಕಲುಷಿತ ನೀರು ಸೇವೆನೆಯಿಂದ ಅಥವಾ ಆಹಾರದ ಪ್ರತಿಕೂಲ ಪರಿಣಾಮದಿಂದ ವಾಂತಿ-ಭೇದಿ ಕಂಡುಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಕುಡಿಯುವ ನೀರನ್ನು ಕನಿಷ್ಟ 20 ನಿಮಿಷಗಳ ಕಾಲ ಕುದಿಸಿದ ನಂತರ ಆರಿಸಿ, ಸೋಸಿ ಕುಡಿಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದರು.

ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಕುಂಟನಾಳ ಗ್ರಾಮದಲ್ಲಿ ಕಂಡು ಬಂದಿರುವ ವಾಂತಿ ಬೇಧಿ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ ತಾಲೂಕಿನ ಕುಂಟನಾಳ್ ಗ್ರಾಮಕ್ಕೆ ಭೇಟಿ ನೀಡಿ ಅವರು ವಿಚಾರಿಸಿ ಮಾತನಾಡಿದರು.

ಈಗಾಗಲೇ ಕಳೆದ ಒಂದು ವಾರದಿಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ ಅವರ ನೇತೃತ್ವದಲ್ಲಿ ತುರ್ತು ಚಿಕಿತ್ಸಾ ಕೇಂದ್ರವನ್ನು ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಆರಂಭಿಸಲಾಗಿದೆ. ದಿನದ 24 ಗಂಟೆ ವೈದ್ಯಕೀಯ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು, ಯಾರಿಗಾದರೂ ವಾಂತಿ-ಬೇಧಿ ಕಂಡುಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಿರಿ ಮತ್ತು ಅಗತ್ಯವೆನಿಸಿದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡಲು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗುಣಮುಖರಾದವರ ಮನೆಗಳಿಗೆ ತೆರಳಿ ರೂಪನಗುಡಿ ಗ್ರಾಮ ಪಂಚಾಯತ್‍ನವರು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಶುದ್ದೀಕರಿಸಿದ ನೀರನ್ನು ಕುಡಿಯಲು ಹಾಗೂ ತಾತ್ಕಾಲಿಕವಾಗಿ ನಳದ ನೀರು ಕುಡಿಯದಂತೆ ತಿಳಿಸಿದರು.

ಗ್ರಾಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರ ನೇತೃತ್ವದಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡ 5 ನೀರಿನ ಮೂಲಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮವಹಿಸಲಾಗುವುದು ಎಂದರು.

ಗ್ರಾಮದಲ್ಲಿ ಈಗಾಗಲೇ ಜಾಗೃತಿಗಾಗಿ ಗ್ರಾಮ ಪಂಚಾಯತಿಯ ತಾಜ್ಯ ವಿಲೇವಾರಿ ವಾಹನದ ಮೂಲಕ ಮೈಕಿಂಗ್ ಕೈಗೊಳ್ಳಲಾಗಿದ್ದು, ಜಿಲ್ಲಾ ಐಇಸಿ ತಂಡ ಹಾಗೂ ರೂಪನಗುಡಿ ಸಮುದಾಯ ಅರೋಗ್ಯ ಕೇಂದ್ರದ ಕ್ಷೇತ್ರ ಸಿಬ್ಬಂದಿಯವರ ತಂಡವು ಮನೆ ಮನೆಗೆ ಬೇಟಿ ನೀಡಿ ಕೈತೊಳೆಯುವ ವಿಧಾನ ಕುರಿತು ಪ್ರಾತ್ಯಕ್ಷತೆ, 1 ಪ್ಯಾಕೇಟ್ ಓಆರ್‍ಎಸ್ ಪುಡಿಯನ್ನು 1 ಲೀಟರ್ ಶುದ್ದ ನೀರಿಗೆ ಮಿಶ್ರಣ ಮಾಡಿ ದ್ರಾವಣ ತಯಾರಿಸಿ 24 ಗಂಟೆಯೊಳಗೆ ಬಳಸುವ ಕುರಿತು ಮಾಹಿತಿ ನೀಡುವ ಮೂಲಕ ಕರಪತ್ರ ವಿತರಣೆಯನ್ನು ಮಾಡಲಾಗಿದೆ ಎಂದರು.

ಸಾರ್ವಜನಿಕರು ಮುಂಜಾಗೃತೆಗಾಗಿ ಊಟದ ಮೊದಲು ಮತ್ತು ಶೌಚದ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‍ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಿ, ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಿರಿ, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಿ, ಬಿಸಿಯಾದ ಆಹಾರ ಮಾತ್ರ ಸೇವಿಸಿ-ತಂಗಳು ಆಹಾರವನ್ನು ಸೇವಿಸಬೇಡಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆಧ್ಯತೆ ನೀಡಿರಿ, ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ನೊಣಗಳು ಉಂಟಾಗದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ, ವೈದ್ಯಾಧಿಕಾರಿ ಡಾ.ನಾರಾಯಣ್ ಬಾಬು, ಏಪಿಡಮಲಾಜಿಸ್ಟ್ ಡಾ.ಪ್ರಿಯಾಂಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾಲಾರಾ ತಂಡದ ಕೆ.ಎಮ್ ಶಿವಕುಮಾರ್, ತಿಪ್ಪೇಸಾಮಿ, ಉಮಾಮಹೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಾರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಜಯಲಕ್ಷ್ಮಿ, ಶಂಕ್ರಮ್ಮ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಾಜೀದಾ ಸುಲ್ತಾನ್, ಪ್ರಿಯಾಮಣಿ, ಮರ್ಸಿ, ಲಲಿತಮ್ಮ ದೇಸಾಯಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here