ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳಮುಖಿಯರಿಗೆ ಕೋವಿಡ್ ಲಸಿಕೆ ನೀಡಿಕೆ

0
98

ಬಳ್ಳಾರಿ : ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಇಂದು ಮತ್ತು ನಾಳೆ ಎರಡು ದಿನ ಲಸಿಕೆ ನೀಡಲಾಗುತ್ತದೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 500 ಜನ ಮಂಗಳಮುಖಿಯರಿದ್ದು, ನಗರ ವ್ಯಾಪ್ತಿಯಲ್ಲಿರುವ 300 ಮಂಗಳಮುಖಿಯರಿಗೆ ಹಾಗೂ ನಗರ ವ್ಯಾಪ್ತಿಯಲ್ಲಿರುವ ಸವಿತಾ ಸಮಾಜದ 1ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯಿದೆ ಎಂದು ಹೇಳಿದರು.
ಎಲ್ಲ ಸಾರ್ವಜನಿಕರು ಭಯ ಬಿಟ್ಟು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ. ಕೊರಾನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಅವರು ಮಾತನಾಡಿ ಎರಡು ದಿನ ತಾಲೂಕು ಕಚೇರಿ ಆವರಣದಲ್ಲಿ ಲಸಿಕಾ ನೀಡಲಾಗುತ್ತದೆ. ಇಂದು 150 ಜನ ಮಂಗಳಮುಖಿಯರು ಹಾಗೂ 300 ಜನ ಸವಿತಾ ಸಮಾಜದವರಿಗೆ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ನಾಳೆ ಉಳಿದವರಿಗೆ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು ಎಂದರು.
ಲಸಿಕೆ ಪಡೆದ ಮಂಗಳಮುಖಿಯರಾದ ಚಾಂದಿನಿ, ಸಂಧ್ಯಾ, ಗೌಸಿಯಾಭಾನು ಅವರು ಎಲ್ಲಾ ಸಾರ್ವಜನಿಕರು ಲಸಿಕೆಯನ್ನು ಪಡೆಯಿರಿ. ಯಾರೂ ಭಯಪಡಬೇಡಿ, ಇದರಿಂದ ಏನೂ ತೊಂದರೆಯಾಗುವುದಿಲ್ಲ. ಲಸಿಕೆ ಪಡೆದು ಕೊರೊನಾ ವಿರುದ್ದ ಹೋರಾಡೋಣ ಎಂದರು.
ತಮಗೆಲ್ಲರಿಗೂ ಲಸಿಕೆ ಪಡೆಯಲು ಸಹಕರಿಸಿದ ತಹಸೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮಂಗಳಮುಖಿಯರು ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ತಾಪಂ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here