ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿಭೆಗೆ ಪುರಸ್ಕಾರ

0
353

ಬಳ್ಳಾರಿ,ಆ.13 : 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625/625 ಅಂಕಗಳನ್ನು ಪಡೆದ ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಪ.ಜಾತಿ)ಯ ವಿದ್ಯಾರ್ಥಿಯಾಗಿರುವ ವೆಂಕಟಗಿರಿ ತಾಂಡಾದ ಟಿ.ಕಿರಣಕುಮಾರ್ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಪ್ಪ ಅವರು ಸನ್ಮಾನಿಸಿದರು.
ವಿದ್ಯಾರ್ಥಿಯ ಸ್ವಗ್ರಾಮವಾದ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನಿರ್ದೇಶಕ ರಾಜಪ್ಪ ಅವರು ವಿದ್ಯಾರ್ಥಿ ಮತ್ತು ಅವರ ಪೋಷಕರನ್ನು ಅಭಿನಂದಿಸಿ, ಸನ್ಮಾನಿಸಿ, ವಿದ್ಯಾರ್ಥಿಗೆ ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡಿದರು ಮತ್ತು ಸರ್ಕಾರದ ಪ್ರೋತ್ಸಾಹಧನ 1 ಲಕ್ಷ ರೂ ಗಳನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿದರು. ಅಲ್ಲದೇ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಯ ಪ್ರತಿಷ್ಠಿತ ಕಾಲೇಜು ಆದ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಶಿಫಾರಸ್ಸಿನ ಮೇರೆಗೆ 2.5ಲಕ್ಷ ರೂ ವೆಚ್ಚದ ಪಿ.ಯು.ಸಿ ಶಿಕ್ಷಣವನ್ನು ಉಚಿತಗೊಳಿಸಿದರು.
ಈ ಸಂದರ್ಭದಲ್ಲಿ ದೂರವಾಣಿಯಲ್ಲಿ ವಿದ್ಯಾರ್ಥಿಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರವಿಕುಮಾರ್ ವಿದ್ಯಾರ್ಥಿಗೆ ಶುಭ ಹಾರೈಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹುರಿದುಂಬಿಸಿದರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ನಾಗಾಂಬಿಕಾ ದೇವಿ ಅವರು ಪ್ರೀತಿಯಿಂದ ಮಾತನಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿ ಹಾಗೂ ವಸತಿಶಾಲಾ ಸಿಬ್ಬಂದಿಯನ್ನು ಅಭಿನಂದಿಸಿದರು.

ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಪವನ್ ಕುಮಾರ್ ಮಾಲಪಾಟಿ ರವರು ವಿಡಿಯೋ ಕಾಲ್‌ನೊಂದಿಗೆ ಮಾತನಾಡಿ ವಿದ್ಯಾರ್ಥಿ ಮತ್ತು ಅವರ ಪೋಷಕರಿಗೆ ಶುಭ ಹಾರೈಸಿ ಎಸ್.ಎಸ್.ಎಲ್.ಸಿ ಒಂದು ಹಂತ ಮುಂದಿನ ಹಂತಗಳನ್ನೂ ಸಹ ಯಶಸ್ವಿಗೊಳಿಸಬೇಕೆಂದರು ಮತ್ತು ವಿದ್ಯಾರ್ಥಿಯ ತಂದೆ ಜೊತೆ ಮಾತನಾಡಿದರು. ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿದ್ಯಾರ್ಥಿಗೆ ಅಭಿನಂದಿಸುತ್ತಾ ತಮ್ಮ ಐ.ಎ.ಎಸ್ ಕ್ರಮಿಸಿದ ಹಾದಿಯನ್ನು ತಿಳಿಸಿ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲವೆಂಬುದನ್ನು ತಿಳಿಸಿ, ಇದೇ ರೀತಿ ಉತ್ತಮವಾಗಿ ಮುಂದುವರಿಯಲು ಸೂಚಿಸಿದರು.
ಕ್ರೆöಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದೇಶ್ವರ ಅವರು ವಿದ್ಯಾರ್ಥಿ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಹೆಮ್ಮ ತಂದಿದ್ದಾರೆ. ವಿದ್ಯಾರ್ಥಿಯ ವ್ಯಾಸಂಗಕ್ಕೆ ಸಹಕಾರಿಯಾಗುತ್ತೇವೆಂದು ತಿಳಿಸಿದರು ಮತ್ತು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಂಡೂರು ತಾಲ್ಲೂಕಿನ ಸಹಾಯಕ ನಿರ್ದೇಶಕರಾದ ಎನ್.ವೆಂಕಟೇಶ್, ಜಿಲ್ಲಾ ಸಮನ್ವಯಾಧಿಕಾರಿಯಾದ ಟಿ.ವೈ. ಪ್ರಸನ್ನಕುಮಾರ್, ಸದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಸಿ.ಜಯಸೂರ್ಯನ ಗೌಡ ಮತ್ತು ಪ್ರಾಂಶುಪಾಲರಾದ ಟಿ. ನಾಗರಾಜ, ಎನ್.ಬಸವರಾಜ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here