ಕರ್ನಾಟಕ ವಿಧಾನಸಭಾ ಚುನಾವಣೆ-2023 ಮತ ಎಣಿಕೆ ದಿನದಂದು ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ; ಮತ ಎಣಿಕೆ ಕೇಂದ್ರ ಸುತ್ತ 200 ಮೀ ವ್ಯಾಪ್ತಿ ನಿರ್ಬಂಧಿತ ಪ್ರದೇಶ ಘೋಷಿಸಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಆದೇಶ

0
99

ಬಳ್ಳಾರಿ,ಮೇ 09:ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆಯಲ್ಲಿ ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ 13 ರಂದು ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೇ 13 ರ ಬೆಳಗ್ಗೆ 06 ರಿಂದ ಮಧ್ಯರಾತ್ರಿ 12 ರವರೆಗೆ ಸಿಆರ್‍ಪಿಸಿ 1973 ರ ಕಲಂ 144 ಮತ್ತು 144 (ಎ) ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ ಹಾಗೂ ಮತ ಎಣಿಕೆ ಕೇಂದ್ರದ ಸುತ್ತ-ಮುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದೂ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.

ಮತ ಎಣಿಕೆ ನಂತರ ವಿಜಯ ಹೊಂದಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಸಭೆ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಗಳಿರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಜಾರಿಗೊಳಿಸಲಾಗಿದೆ.

ಷರತ್ತುಗಳು:
ಪ್ರತಿಬಂಧಕಾಜ್ಞೆ ಅನ್ವಯ ಜಿಲ್ಲೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ, ವಾಹನ ಜಾಥಾ, ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೋಟಕ, ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇದಿಸಿದೆ. ಚುನಾವಣಾ ಅಭ್ಯರ್ಥಿ ಅಥವಾ ಬೆಂಬಲಿಗರು ಸೇರಿ ಐದು ಜನರಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ.

ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಿದೆ.

ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪಧಾರ್ಥ ಇಲ್ಲವೆ ಸ್ಪೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇದಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. ಮನುಷ್ಯ ರೂಪದ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಮತ್ತು ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇದಿಸಲಾಗಿದೆ. ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡು ಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್-19 ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ನಿಯಮಗಳನ್ನು ಪಾಲಿಸುವುದು.

ಮತಗಟ್ಟೆ ಎಣಿಕೆ ಕೇಂದ್ರ ಸುತ್ತಲೂ 100 ಮೀಟರ್ ಅಂತರದಲ್ಲಿ (ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ/ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು/ ಸಿಬ್ಬಂದಿಗಳು ಹೊರತುಪಡಿಸಿ) ಮೊಬೈಲ್ ಫೋನ್, ಕಾರ್ಡ್‍ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇದಿಸಲಾಗಿದೆ.

ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣಾ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here