ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ 3ನೇ ವರ್ಷಾಚರಣೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ: ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ

0
109

ಬಳ್ಳಾರಿ,ಸೆ.23 : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಹೇಳಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ 3ನೇ ವರ್ಷಾಚರಣೆ ಹಿನ್ನೆಲೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಗುರುವಾರ ನಡೆದ ಆರೋಗ್ಯ ಮಂಥನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಆರೋಗ್ಯ ಸೇವೆ ಪಡೆಯಲು ಜಿಲ್ಲೆಯ ವಿಮ್ಸ್, ಜಿಲ್ಲಾಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನೀಡುತ್ತಿರುವ ಆರೋಗ್ಯ ಕಾರ್ಡ್‍ಗಳನ್ನು ಪಡೆದುಕೊಳ್ಳಿ. ಇದರಿಂದ ನೊಂದಾಯಿತ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಟ ರೂ.5 ಲಕ್ಷದ ವರೆಗೆ ಶುಲ್ಕ ರಹಿತ ಉಚಿತ ಚಿಕಿತ್ಸೆ ಪಡೆಯಬಹುದು. ಸಾರ್ವಜನಿಕರು ಕಾರ್ಡ್ ಇಲ್ಲದೆ ಇದ್ದಲ್ಲಿ ತುರ್ತು ಸಂದರ್ಭದಲ್ಲಿ ಬಿ.ಪಿಎಲ್ ಕಾರ್ಡ್ ಜೊತೆಗೆ ತೆರಳಿ ಸಹ ಚಿಕಿತ್ಸೆ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜರ್ನಾಧನ್ ಅವರು ಮಾತನಾಡಿ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಗಳು ಸಹ ಪಾವತಿ ಆಧಾರದ ಮೇಲೆ ಶೇ.30 ವೆಚ್ಚ ಸರಕಾರದಿಂದ ಪಾವತಿ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಗರಿಷ್ಟ ರೂ.1.5 ಲಕ್ಷ ವರೆಗೆ ಶುಲ್ಕ ರಹಿತ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು. ಇಲ್ಲಿಯವರೆಗೆ 81,800 ಜನ ಫಲಾನುಭವಿಗಳು ಇದರ ಸದುಪಯೋಗ ಪಡೆದಿದ್ದು ಒಟ್ಟು 58.53 ಕೋಟಿ ರೂ. ಮೊತ್ತವನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರರೆಡ್ಡಿ, ಸ್ಥಾನಿಕ ವೈದ್ಯಾಧಿಕಾರಿಗಳಾದ ಆರ್.ಎಮ್.ಒ ವಿಶ್ವನಾಥ್.ಹೆಚ್, ಸಹಾಯಕ ಪ್ರಾದೇಶಿಕ ಸಮಾಲೋಚಕರಾದ ಡಾ.ರವಿ ತಳವಾರ, ಜಿಲ್ಲಾ ಸಂಯೋಜಕರಾದ ಡಾ.ಮಯೂರಿ, ನರ್ಸಿಂಗ್ ಅಧೀಕ್ಷಕರಾದ ರಾಜೇಶ್ವರಿ ಮತ್ತು ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here