ರೋಗವಾಹಕ ಅಶ್ರಿತ ರೋಗಗಳ ಮಾಹಿತಿ ಕಾರ್ಯಗಾರ ಅಶ್ರಿತ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ: ತಹಸೀಲ್ದಾರ್ ರೆಹಮಾನ್ ಪಾಶಾ

0
86

ಬಳ್ಳಾರಿ,ಆ.18 : ಮಳೆಗಾಲದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡೆಂಗ್ಯೂ,ಮಲೇರಿಯಾ ಹಾಗೂ ಇನ್ನೀತರ ಅಶ್ರಿತ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಬಳ್ಳಾರಿ ತಹಸೀಲ್ದಾರ್ ರೆಹಮಾನ್ ಪಾಶಾ ಅವರು ಹೇಳಿದರು.
ನಗರದ ತಹಸೀಲ್ದಾರರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರೋಗವಾಹಕ ಅಶ್ರಿತ ರೋಗಗಳ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲದ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿ ಹೆಚ್ಚಾಗಿ ನೀರು ಸಂಗ್ರಹವಾಗುವುದರಿಂದ ನಿಂತ ನೀರಿನಲ್ಲಿ ವಾಸಿಸುವ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಜೊತೆಗೆ ಕೈಜೋಡಿಸಿ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ ಅವರು ಮಾತನಾಡಿ ಜಿಲ್ಲೆಯಾದ್ಯಂತ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬರದಂತೆ ನೋಡಿಕೊಳ್ಳುವುದು, ಡೆಂಗ್ಯೂ ಪ್ರಕರಣಗಳ ಸಂಖ್ಯೆಯನ್ನು ಶೇ.1ಕ್ಕಿಂತ ಕಡಿಮೆ ಮಾಡುವುದು, ಚಿಕನ್‍ಗುನ್ಯಾ ಪ್ರಕರಣ ಸಂಖ್ಯೆ ಏಕಾಏಕಿ ಉಲ್ಬಣವಾಗದಂತೆ ಕಾರ್ಯಪ್ರವೃತ್ತರಾಗುವುದು, ಮೆದುಳು ಜ್ವರದ ಜೆ.ಇ ಮರಣ ಪ್ರಕರಣಗಳನ್ನು ಶೇ.30ಕ್ಕಿಂತ ಕಡಿಮೆ ಮಾಡುವುದು, ಆನೆಕಾಲು ರೋಗದ ಮೈಕ್ರೋ ಫೈಲೇರಿಯಾ ಪ್ರಕರಣಗಳು ವರದಿಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ಮಾಡಿ ಅಶ್ರಿತರೋಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ರೋಗ ಲಕ್ಷಣಗಳು ಕಂಡು ಬಂದವರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಎಲ್ಲಾ ರೋಗಗಳು ಸೊಳ್ಳೆಗಳಿಂದ ಹರಡುತ್ತಿದ್ದು ಇದನ್ನು ನಿಯಂತ್ರಿಸಲು; ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಗಳನ್ನು ಬಳಸಬೇಕು. ವೈರಸ್ ಮೂಲಕ ಹರಡುವ ಡೆಂಗ್ಯೂ ಜ್ವರವು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೇ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಸೂಚಿಸಿದರು.
ರೋಗ ನಿಯಂತ್ರಣಾ ಕ್ರಮಗಳು: ಮನೆಯ ಸುತ್ತ-ಮುತ್ತ ಹಾಗೂ ಮನೆಯ ಒಳಗೆ ಸ್ವಚ್ಛತೆ ಕಾಪಾಡಿಕೊಂಡರೆ ಯಾವುದೇ ರೀತಿಯ ರೋಗಗಳು ಕಾಣಿಸುವುದಿಲ್ಲ. ಸಂಶಯಾಸ್ಪದ ಡೆಂಗ್ಯೂ/ಚಿಕನ್‍ಗುನ್ಯಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮನೆ ಮನೆ ಜ್ವರ ಸಮೀಕ್ಷೆ ಮಾಡುವುದು, ರೋಗ ನಿರ್ವಹಣೆ, ಲಾರ್ವ ಉತ್ಪತ್ತಿ ತಾಣಗಳ ನಿರ್ವಹಣೆ, ಸ್ವಯಂ ರಕ್ಷಣಾ ವಿಧಾನಗಳು, ಘನತ್ಯಾಜ್ಯ ವಿಲೇವಾರಿ, ಸಮುದಾಯದ ಜನರ ಸಹಭಾಗಿತ್ವ, ಜನರಿಗೆ ರೋಗಗಳ ಬಗ್ಗೆ ತರಬೇತಿ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಿದರೆ ಇಂತಹ ರೋಗಗಳನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದರು.
ರೋಗಗಳ ಲಕ್ಷಣಗಳು:ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವುದು, ಮೈ ಕೈ ನೋವು ಹಾಗೂ ತಲೆ ನೋವು, ವಾಂತಿಯಾಗುವುದು, ನಿಶ್ಯಕ್ತರಾಗುವುದು ಅಶ್ರಿತ ರೋಗಗಳ ಲಕ್ಷಣಗಳು. ಎಲ್ಲಾ ರೋಗಗಳಿಗೆ ಲಕ್ಷಣಗಳು ಸಾಮಾನ್ಯವಾಗಿದ್ದರೂ ಅದರ ಪರಿಣಾಮ ವಿಭಿನ್ನವಾಗಿರುತ್ತದೆ. ಹೀಗಾಗಿ ಯಾವುದೇ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ನಗರದಲ್ಲಿ ನೀರಿನ ಸೋರಿಕೆಯಾಗುವುದನ್ನು ತಡೆಯಬೇಕು.ಸಂಗ್ರಹಿಸಿದ ನೀರಿನ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here